- ಹದೇಶ್ವರ ಬೆಟ್ಟಕ್ಕೆ ಬರುವ ಬೆಂಗಳೂರು, ರಾಮನಗರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆ ವ್ಯಾಪ್ತಿ ಪಾದಯಾತ್ರಿಗಳು, ಭಕ್ತರು, ಪ್ರವಾಸಿಗರು ತಮ್ಮ ಯೋಜನೆ ಮುಂದೂಡಬೇಕು.
ಮೈಸೂರು: ಚಾಮರಾಜನಗರ ರಾಮಾಪುರ ಹೋಬಳಿ ವ್ಯಾಪ್ತಿಯ ದಂಟಳ್ಳಿ ಏತ ನೀರಾವರಿ ಯೋಜನೆಗೆ ಡಿಪಿಆರ್ ಮಾಡಿಸುವಲ್ಲಿ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದನ್ನು ವಿರೋಧಿಸಿ ಜ.31ರಂದು ಮಲೆಮಹದೇಶ್ವರ ಬೆಟ್ಟ ರಸ್ತೆಯ ವಡಕೆಹಳ್ಳ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ರಸ್ತೆ ಸಂಚಾರ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ.
ಈ ಯೋಜನೆಗೆ ಸಮಗ್ರ ಯೋಜನಾ ವರದಿ(ಡಿಪಿಆರ್) ಮಾಡಿಸುವುದಾಗಿ ಮಾತು ಕೊಟ್ಟಿದ್ದ ಶಾಸಕ ಎಂ.ಆರ್.ಮಂಜುನಾಥ್ ವಚನ ಭ್ರಷ್ಟರಾಗಿದ್ದಾರೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಸಂಸದ ಸುನಿಲ್ ಬೋಸ್ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ.
ಆದ್ದರಿಂದ ಅನಿವಾರ್ಯವಾಗಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಏತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಶೈಲೇಂದ್ರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹನೂರು ಹೋಬಳಿ ವ್ಯಾಪ್ತಿಯ ಮಾರ್ಟಳ್ಳಿ, ಶೆಟ್ಟಹಳ್ಳಿ, ಕುರಟ್ಟಿ ಹೊಸೂರು, ರಾಮಾಪುರ, ಕೌದಳ್ಳಿ, ಮಹದೇಶ್ವರ ಬೆಟ್ಟ ಪಂಚಾಯಿತಿ, ವಡಕೆಹಳ್ಳದಲ್ಲಿ ಕಳೆದ 20 ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಅಂತರ್ಜಲ ಕುಸಿದಿದೆ. ಕೊಳವೆಬಾವಿಯನ್ನು ಸುಮಾರು 1300 ಅಡಿ ಕೊರೆಯಿಸಿದರೂ ನೀರು ಬರುತ್ತಿಲ್ಲ.
ಈಗ ಇರುವ ಬೋರ್‌ವೆಲ್‌ಗಳ ನೀರು ಗಡುಸಾಗಿದ್ದು, ಸೇವನೆಗೆ ಯೋಗ್ಯವಲ್ಲ. ಇವೆಲ್ಲವೂ ಕಾವೇರಿ ನದಿಯಿಂದ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಬರುತ್ತವೆ. ಆದ್ದರಿಂದ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತ ನೀರಾವರಿ ಸೌಲಭ್ಯ ಕಲ್ಪಿಸಿದರೆ, ಸಮಸ್ಯೆ ಬಗೆಹರಿಯಲಿದೆ. ಇದಕ್ಕಾಗಿ ಸತತ ಹೋರಾಟ ನಡೆದಿದೆ ಎಂದು ತಿಳಿಸಿದರು
ಕಳೆದ ಅಕ್ಟೋಬರ್ 27ರಿಂದ ವಡಕೆಹಳ್ಳ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಅಂದಿನ ಜಿಲ್ಲಾಧಿಕಾರಿ ಶಿಲ್ಪಾನಾಗ್, ಶಾಸಕ ಎಂ.ಆರ್.ಮಂಜುನಾಥ್ ಸಂಕ್ರಾಂತಿ ಕಳೆದ ಬಳಿಕ ಡಿಪಿಆರ್ ಸಿದ್ಧಪಡಿಸುವುದಾಗಿ ತಿಳಿಸಿದ್ದರು.
ಆದರೂ ಎಲ್ಲರೂ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ. ಜ.31 ರಿಂದ ಅನಿರ್ದಿಷ್ಟಾವಧಿ ರಸ್ತೆ ಸಂಚಾರ ತಡೆ ಚಳವಳಿ ಹಮ್ಮಿಕೊಳ್ಳಲಾಗುತ್ತಿದೆ. ಮಹದೇಶ್ವರ ಬೆಟ್ಟಕ್ಕೆ ಬರುವ ಬೆಂಗಳೂರು, ರಾಮನಗರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆ ವ್ಯಾಪ್ತಿ ಪಾದಯಾತ್ರಿಗಳು, ಭಕ್ತರು, ಪ್ರವಾಸಿಗರು ತಮ್ಮ ಯೋಜನೆ ಮುಂದೂಡಬೇಕು. ಇದಕ್ಕಾಗಿ ಕ್ಷಮೆ ಯಾಚಿಸುವುದಾಗಿ ತಿಳಿಸಿದರು.
ಮುಖಂಡರಾದ ಜಾನ್‌ಪಾಲ್, ಪೌಲ್ ಧರ್ಮರಾಜ್ ಮಾರ್ಟಳ್ಳಿ, ಅರುಳ್ ದಾಸ್ ಇನ್ನಿತರರಿದ್ದರು.