ಬನ್ನೂರು ಪಟ್ಟಣದ ಕಾವೇರಿ ನದಿ ಸೇತುವೆ ಬಳಿಯಿರುವ ಮಾದಿಗ ಸಮಾಜದ ಸ್ಮಶಾನಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕಾಮಗಾರಿಗೆ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಸೋಮವಾರ ಚಾಲನೆ ನೀಡಿದರು. ಶಿವಣ್ಣ, ಕೆ.ಸತೀಶ್, ರೂಪಾ, ಸಿದ್ದರಾಜು, ಮೂರ್ತಿ, ಉಮೇಶ್ ಇತರರು ಇದ್ದರು. 
ಮೈಸೂರು

ಗುಣಮಟ್ಟ ಪಾಲನೆಗೆ ಗಮನ ಹರಿಸಿ

ಎ. ಆರ್. ರಘುರಾಮ
ತಿ.ನರಸೀಪುರ : ರಸ್ತೆ ಗುಣಮಟ್ಟ ಪಾಲನೆಗೆ ಗಮನ ಹರಿಸಬೇಕು ಎಂದು ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಹೇಳಿದರು.
ಬನ್ನೂರು ಪಟ್ಟಣದ ಕಾವೇರಿ ನದಿ ಸೇತುವೆ ಬಳಿಯಿರುವ ಮಾದಿಗ ಸಮಾಜದ ಸ್ಮಶಾನಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಸ್ಮಶಾನಕ್ಕೆ ರಸ್ತೆ ಕಲ್ಪಿಸಬೇಕು ಎಂದು ದಶಕದಿಂದಲೂ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದವು. ಆದರೆ ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವುದು ಅನಿವಾರ್ಯವಾಗಿತ್ತು.ಭೂ ಮಾಲೀಕರು ನೇರ ಖರೀದಿಗೆ ಒಪ್ಪಿಗೆ ನೀಡದ ಕಾರಣ ಕಾಮಗಾರಿ ನಡೆಸುವುದೂ ವಿಳಂಬವಾಗಿತ್ತು. ಗುತ್ತಿಗೆದಾರರು ಸಾಧ್ಯವಾದಷ್ಟು ವೇಗವಾಗಿ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಪುರಸಭೆ ಮಾಜಿ ಸದಸ್ಯ ಶಿವಣ್ಣ ಮಾತನಾಡಿ, ರಸ್ತೆ ನಿರ್ಮಾಣಕ್ಕಾಗಿ ನಡೆದ ಹೋರಾಟದ ಹಿಂದಿನ ಘಟನೆಗಳನ್ನು ಸ್ಮರಿಸಿದರು. ಮೃತದೇಹವನ್ನು ಇಟ್ಟು ಹಲವು ಬಾರಿ ಪ್ರತಿಭಟನೆಗಳನ್ನು
ನಡೆಸಿದಾಗ ರಸ್ತೆ ನಿರ್ಮಾಣದ ಬಗ್ಗೆ ತಾಲೂಕು ಆಡಳಿತದಿಂದ ಸ್ಪಷ್ಟ ಭರವಸೆ ದೊರಕಿತು. ಈ ನಿಟ್ಟಿನಲ್ಲಿ ಸಹಕಾರ ನೀಡಿದ ಸಮುದಾಯದ ಕುಟುಂಬಗಳಿಗೆ ಧನ್ಯವಾದ ಸಮರ್ಪಿಸಿದರು.
ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆ 30 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ಅನುಷ್ಠಾನಗೊಳ್ಳಲಿದೆ. ರಸ್ತೆ ನಿರ್ಮಾಣ ಪೂರ್ಣಗೊಂಡ ನಂತರ ಸ್ಮಶಾನಕ್ಕೆ ಸುಗಮ ಸಂಚಾರ ವ್ಯವಸ್ಥೆಯಾಗಲಿದ್ದು, ದಶಕಗಳ ಬೇಡಿಕೆ ಈಡೇರಲಿದೆ.
ಗೌರವಾರ್ಪಣೆ: ಇದೇ ವೇಳೆ ರಸ್ತೆ ಹೋರಾಟದ ಸಂದರ್ಭದಲ್ಲಿ ಮೃತ ನಿಂಗಣ್ಣ ಹಾಗೂ ಮರಿಯಯ್ಯ ಅವರ ಮೃತದೇಹಗಳನ್ನು ಪ್ರತಿಭಟನೆಗೆ ಬಳಸಲು ಸಹಕರಿಸಿದ್ದ ಅವರ ಕುಟುಂಬ ಸದಸ್ಯರಾದ ಹೇಮ ಮತ್ತು ನೀಲಮ್ಮ ಅವರನ್ನು ಸಮಾಜದ ವತಿಯಿಂದ ಗೌರವಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಕೆ.ಸತೀಶ್, ಉಪ ತಹಸೀಲ್ದಾರ್ ರೂಪಾ, ರಾಜಸ್ವ ನಿರೀಕ್ಷಕ ಸಿದ್ದರಾಜು, ಗ್ರಾಮ ಲೆಕ್ಕಿಗ ಸಿದ್ದರಾಜು, ಪುರಸಭೆ ಮಾಜಿ ಸದಸ್ಯ ಮೂರ್ತಿ, ಯಜಮಾನರಾದ ಶ್ರೀಕಾಂತ್, ಮಹದೇವ, ಗಿರಿಯಪ್ಪ, ಚನ್ನಪ್ಪ, ರಂಗಪ್ಪ, ಚಿಕ್ಕಕಾಳಯ್ಯ, ಮುಖಂಡರಾದ ಚಾಮರಾಜು, ಉಮೇಶ್, ಕಾಂತಾ, ಸಿದ್ದು, ಬಿ.ವಿ.ರಮೇಶ್, ಜಯರಾಂ, ಬಿ.ಎಸ್.ರವಿ, ನಾಗೇಂದ್ರ, ಸ್ವಾಮಿ, ಶಿವಣ್ಣ ಇತರರು ಇದ್ದರು.