ಮಾಜಿ ಸಚಿವ ಸಾ.ರಾ. ಮಹೇಶ್  
ಮೈಸೂರು

ರಾಜ್ಯ ಸರ್ಕಾರದಿಂದ ದೇವಸ್ಥಾನದ ಹುಂಡಿ ಹಣ ಲೂಟಿ!

ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಭ್ರಷ್ಟಾಚಾರಮುಕ್ತ ಆಡಳಿತದ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಈಗ ಭ್ರಷ್ಟಾಚಾರದಲ್ಲೇ ಮುಳುಗಿದೆ. ದೇವಸ್ಥಾನದ ಹುಂಡಿ ಹಣವನ್ನೂ ಲೂಟಿ ಮಾಡುವ ದರಿದ್ರ ಸ್ಥಿತಿಗೆ ರಾಜ್ಯ ಸರ್ಕಾರಕ್ಕೆ ಬಂದಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆರೋಪಿಸಿದರು.
17 ಬಾರಿ ದಾಖಲೆಯ ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ದಿವಾಳಿಯಾಗಿರುವುದು ತಿಳಿಯುತ್ತದೆ. 2018-19ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಜೆಟ್‌ನ ಶೇ.24 ರಷ್ಟು ಹಣವನ್ನು ಅಭಿವೃದ್ಧಿ ಕೆಲಸಗಳಿಗೆ (ಬಂಡವಾಳ ವೆಚ್ಚ) ಮೀಸಲಿಡಲಾಗುತ್ತಿತ್ತು. ಆದರೆ, 2026-27ರ ಬಜೆಟ್‌ನಲ್ಲಿ ಇದು ಶೇ.16.7ಕ್ಕೆ ಕುಸಿದಿದೆ. ಅಂದರೆ ಅಭಿವೃದ್ಧಿ ಕೆಲಸಗಳಿಗೆ ಶೇ.10ರಷ್ಟು ಹಣ ಕಡಿತವಾಗಿದೆ. ಹಿಂದಿನ ಎಲ್ಲ ಸಿಎಂಗಳು ಸೇರಿ ಮಾಡಿದ್ದ ಒಟ್ಟು ಸಾಲ 3.27 ಲಕ್ಷ ಕೋಟಿ ರೂ. ಇದನ್ನು ಸಿದ್ದರಾಮಯ್ಯ 8.24 ಲಕ್ಷ ಕೋಟಿಗೆ ಏರಿಸಿದ್ದಾರೆ. ಹಿಂದೆ ಪ್ರತಿ ವ್ಯಕ್ತಿಯ ಮೇಲೆ 50 ಸಾವಿರ ರೂ. ಸಾಲವಿದ್ದರೆ, ಇಂದು ಹುಟ್ಟುವ ಮಗುವಿನ ತಲೆಯ ಮೇಲೂ 1.18 ಲಕ್ಷ ರೂ. ಸಾಲವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜನರಿಗೆ ಭ್ರಷ್ಟಾಚಾರಮುಕ್ತ ಆಡಳಿತದ ಭರವಸೆ ನೀಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸರ್ಕಾರ ಈಗ ಮಾಡುತ್ತಿರುವುದಾದರೂ ಏನು? ದೇವಸ್ಥಾನದಲ್ಲೂ ಲಂಚ ಪಡೆಯುತ್ತಿದೆ. ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಜಾತ್ರಾ ಮಹೋತ್ಸವದಲ್ಲಿ ಕೇವಲ ಪೇಂಟಿಂಗ್ ಕೆಲಸಕ್ಕೆ ಜಿಎಸ್‌ಟಿ ಹೊರತುಪಡಿಸಿ 5,27,639 ರೂ. ಬಿಲ್ ಮಾಡಲಾಗಿದೆ. ಈ ಹಿಂದೆ ಇದೇ ಕೆಲಸಕ್ಕೆ ಗರಿಷ್ಠ ಎಂದರೆ ಕೇವಲ 1 ಲಕ್ಷ ರೂ. ವೆಚ್ಚವಾಗುತ್ತಿತ್ತು. ಇನ್ನು ಲೈಟಿಂಗ್, ಸೌಂಡ್ ಸಿಸ್ಟಮ್ ಮತ್ತು ಬ್ಯಾರಿಕೇಡ್ ವ್ಯವಸ್ಥೆಗೆ 14,74,876 ರೂ. ಬಿಲ್ ಮಾಡಿದ್ದಾರೆ. ನಿರ್ಮಿತಿ ಕೇಂದ್ರದಿಂದ ಈ ಜಾತ್ರೆಗಾಗಿ 32 ಲಕ್ಷ ರೂ. ಡ್ರಾ ಮಾಡಲಾಗಿದೆ. ರೈತರು ಜಾನುವಾರುಗಳನ್ನು ಕಟ್ಟುತ್ತಾರೆ. ವ್ಯಾಪಾರಿಗಳು ಅಂಗಡಿಗಳನ್ನು ಹಾಕುತ್ತಾರೆ. 32 ಲಕ್ಷ ರೂ. ಖರ್ಚು ಮಾಡಿದ್ದಾದರೂ ಯಾಕೆ ಎಂದು ಪ್ರಶ್ನಿಸಿದರು.
ಇದೇ ಜಾತ್ರೆಗೆ 2019ರಲ್ಲಿ 4.47 ಲಕ್ಷ, 2020-21 (ಕೋವಿಡ್ ಸಮಯ) 21,000 ರೂ, ನಾನು ಶಾಸಕನಾಗಿದ್ದಾಗ 2022-23ರಲ್ಲಿ 3,74,600 ರೂ. ಖರ್ಚು ಮಾಡಲಾಗಿತ್ತು. ಈ ಬಾರಿ 32 ಲಕ್ಷ ಎಂದರೆ ಸರ್ಕಾರ ಎಷ್ಟು ಪರ್ಸೆಂಟ್ ಭ್ರಷ್ಟಾಚಾರ ಮಾಡುತ್ತಿದೆ ಎಂದು ಜನರೇ ತೀರ್ಮಾನಿಸಬೇಕು. ಅಲ್ಲದೆ ದೇವಸ್ಥಾನದ ಅಭಿವೃದ್ಧಿಗೆ ಬಳಸಬೇಕಿದ್ದ ಸುಮಾರು 80 ಲಕ್ಷ ರೂ. ಹುಂಡಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಸಿಎಂ ಜಿಲ್ಲೆಯಲ್ಲಿ ಈ ರೀತಿಯಾದರೆ ರಾಜ್ಯದ ಗತಿಯೇನು? ಈ ಭ್ರಷ್ಟಾಚಾರಗಳ ಹಿಂದೆ ಯಾರಿದ್ದಾರೆ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಆಸ್ಪತ್ರೆ, ಗ್ರಾ.ಪಂ.ನಲ್ಲಿ ಭ್ರಷ್ಟಾಚಾರ: ಕೆ.ಆರ್.ನಗರದ ಜನರಲ್ ಆಸ್ಪತ್ರೆ ಮತ್ತು ಮಹಿಳಾ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಹೊರರೋಗಿ ಚೀಟಿ ಶುಲ್ಕ ಏರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಹಿಂದೆ ಶುಲ್ಕವಿರಲಿಲ್ಲ. ಈಗ 10 ರೂ.ಮಾಡಲಾಗಿದೆ. ಜನರಲ್ ಆಸ್ಪತ್ರೆಗೆ 5 ರೂ. ಇದ್ದ ಶುಲ್ಕವನ್ನು ಹೆಚ್ಚಿಸಲಾಗಿದೆ. ಆಸ್ಪತ್ರೆಯಲ್ಲಿದ್ದ ಸುಮಾರು 60 ಲಕ್ಷ ರೂ. ಎಲ್ಲಿ ಖರ್ಚಾಗಿದೆ ಎಂಬ ಮಾಹಿತಿಯೇ ಇಲ್ಲ. ಸಾಲಿಗ್ರಾಮ ಗ್ರಾಮ ಪಂಚಾಯಿತಿ ಪಿಡಿಒ ಒಬ್ಬರನ್ನು ರಜೆಯ ಮೇಲೆ ಕಳುಹಿಸಿ ಕೇವಲ 15 ದಿನಗಳಲ್ಲಿ ಹಳೆಯ ಡೇಟ್ ಹಾಕಿ ಗ್ರಾಮ ಪಂಚಾಯಿತಿ ಖಾತೆಯಿಂದ 44 ಲಕ್ಷ ರೂ. ಡ್ರಾ ಮಾಡಲಾಗಿದೆ ಎಂದು ಆಪಾದಿಸಿದರು.
ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್‌ಕುಮಾರ್, ಜೆಡಿಎಸ್ ನಗರಾಧ್ಯಕ್ಷ ಎಸ್‌ಬಿಎಂ ಮಂಜು, ಮಾಜಿ ಮೇಯರ್‌ಗಳಾದ ಎಂ.ಜೆ.ರವಿಕುಮಾರ್, ಆರ್.ಲಿಂಗಪ್ಪ, ಸೋಮಣ್ಣ, ಮುಖಂಡರಾದ ಅಶ್ವಿನಿ ಅನಂತು, ದ್ವಾರಕೀಶ್ ಇದ್ದರು.