ಕರ್ನಾಟಕ ರಾಜ್ಯ ಸಂಯುಕ್ತ ಗೃಹ ಕಾರ್ಮಿಕರ ಸಂಘ ಮೈಸೂರು ನಗರದ ಎಐಯುಟಿಯುಸಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಗೃಹ ಕಾರ್ಮಿಕರ ಸಮಾವೇಶದಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ ಮಾತನಾಡಿದರು. ಯಶೋಧರ್, ಪಿ.ಎಸ್. ಸಂಧ್ಯಾ, ಜಿ.ಎಸ್. ಸೀಮಾ, ವೀಣಾ ಹಾಗೂ ಇತರರು ಇದ್ದರು. 
ಮೈಸೂರು

ಮನೆ ಕೆಲಸದ ಕಾರ್ಮಿಕರ ಹಕ್ಕುಗಳ ರಕ್ಷಣೆ ಅಗತ್ಯ : ಎಐಯುಟಿಯುಸಿ ಆಗ್ರಹ

ಮೈಸೂರು: ಮನೆಗೆಲಸದ ಕಾರ್ಮಿಕರು ಸಮಾಜದ ಅತ್ಯಂತ ಅಸಂಘಟಿತ ಮತ್ತು ಶೋಷಿತ ವರ್ಗವಾಗಿದ್ದು, ಅವರ ಹಕ್ಕುಗಳ ರಕ್ಷಣೆಗಾಗಿ ತಕ್ಷಣದ ಕ್ರಮಗಳು ಅತ್ಯಗತ್ಯ ಎಂದು ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ ಹೇಳಿದರು.
ಕರ್ನಾಟಕ ರಾಜ್ಯ ಸಂಯುಕ್ತ ಗೃಹ ಕಾರ್ಮಿಕರ ಸಂಘದ ವತಿಯಿಂದ ನಗರದ ಎಐಯುಟಿಯುಸಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಗೃಹ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿ, ಮನೆಗೆಲಸದ ಹೆಚ್ಚಿನವರು ಮಹಿಳೆಯರಾಗಿದ್ದಾರೆ. ಆರ್ಥಿಕ ಅಸಮಾನತೆ ಮತ್ತು ಅನಿವಾರ್ಯತೆಗಳಿಂದಾಗಿ ಅನೇಕ ಮಹಿಳೆಯರು ಗೃಹ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆರ್ಥಿಕ ಸ್ವಾವಲಂಬನೆಗಾಗಿ ಮತ್ತು ತಮ್ಮ ಕುಟುಂಬದ ನಿರ್ವಹಣೆಗಾಗಿ ಇವರು ದಿನವಿಡೀ ಕನಿಷ್ಠ 4 ರಿಂದ 8 ಮನೆಗಳಲ್ಲಿ ಕೆಲಸ ಮಾಡುತ್ತಾರೆ ಎಂದರು.
ಒಬ್ಬಂಟಿ ಮಹಿಳೆಯರು, ಪತಿಯಿಂದ ಪರಿತ್ಯಕ್ತರಾದವರು ಹಾಗೂ 60 ವರ್ಷ ದಾಟಿದ ವಯೋವೃದ್ಧೆಯರೂ ಗೃಹ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅನೇಕ ಮಂದಿ ಪುರುಷರೂ ಗೃಹ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇಂದಿನ ವಿಪರೀತ ಬೆಲೆ ಏರಿಕೆಯ ಕಾಲದಲ್ಲಿ ಈ ಗೃಹ ಕಾರ್ಮಿಕರ ಬದುಕು ಅತ್ಯಂತ ದುಸ್ತರವಾಗಿದೆ. ಸರ್ಕಾರವು ಇವರನ್ನು ‘ಗೃಹ ಕಾರ್ಮಿಕರು’ ಎಂದು ಗುರುತಿಸಿದ್ದರೂ ಇವರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಕೇವಲ ವಿಮೆಯಂತಹ ಯೋಜನೆಗಳಲ್ಲದೆ, ಇವರು ಜೀವಂತವಾಗಿರುವಾ ಗಲೇ ನೆರವಾಗುವಂತಹ ಭದ್ರತಾ ಯೋಜನೆಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಗೃಹ ಕಾರ್ಮಿಕರ ಹಿತರಕ್ಷಣೆಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿಯನ್ನು ಶೀಘ್ರವಾಗಿ ರಚಿಸಬೇಕು, ಬದುಕಿಗೆ ಸೂಕ್ತವಾದ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸಬೇಕು. ಇತರೆ ವಲಯದ ಕಾರ್ಮಿಕರಂತೆ ಗೃಹ ಕಾರ್ಮಿಕರಿಗೂ ಇಎಸ್‌ಐ ಮತ್ತು ಪಿಎಫ್ ಸೌಲಭ್ಯಗಳನ್ನು ಒದಗಿಸಬೇಕು, ವಾರಕ್ಕೊಂದು ದಿನ ವೇತನ ಸಹಿತ ರಜೆಯನ್ನು ಘೋಷಿಸಬೇಕು, ಅರ್ಹ ಎಲ್ಲ ಗೃಹ ಕಾರ್ಮಿಕರಿಗೂ ಸರ್ಕಾರದ ವತಿಯಿಂದ ಅಧಿಕೃತ ಗುರುತಿನ ಚೀಟಿಯನ್ನು ವಿತರಿಸಬೇಕು, ಮಹಿಳಾ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ತಿಂಗಳಿಗೆ ಒಂದು ದಿನ ‘ಮುಟ್ಟಿನ ರಜೆ’ ನೀಡುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಕೆಲಸದ ಸ್ಥಳಗಳಲ್ಲಿ ನಡೆಯುವ ಕಿರುಕುಳ, ಅವಮಾನ ಹಾಗೂ ಅಗೌರವದ ಘಟನೆಗಳನ್ನು ತಡೆಯಲು ಮತ್ತು ದೂರು ದಾಖಲಿಸಲು ‘ಸುರಕ್ಷಾ ಸಮಿತಿ’ಯನ್ನು ರಚಿಸಬೇಕು, ಗೃಹ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಉಚಿತ ಹಾಗೂ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಎಐಯುಟಿಯುಸಿ ಅಧ್ಯಕ್ಷ ಯಶೋಧರ್, ಜಿಲ್ಲಾ ನಾಯಕಿ ಪಿ.ಎಸ್. ಸಂಧ್ಯಾ, ಎಐಎಂಎಸ್‌ಎಸ್ ಜಿಲ್ಲಾ ಉಪಾಧಕ್ಷೆ ಜಿ.ಎಸ್. ಸೀಮಾ, ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕಿ ವೀಣಾ ಹಾಗೂ ಇತರರು ಇದ್ದರು.