ಪಿರಿಯಾಪಟ್ಟಣ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮೊಪೆಡ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟಿದ್ದಾರೆ.
ತಾಲೂಕಿನ ಕೊತ್ತವಳ್ಳಿ ಗ್ರಾಮದ ಸಣ್ಣಶೆಟ್ಟಿ (57) ಮೃತರು. ಕೊಡಗಿನ ಕಾರ್ಮಾಡು ಗ್ರಾಮದಲ್ಲಿ ಸಂಬಂಧಿಕರೊಬ್ಬರ ಸಾವಿಗೆ ಹೋಗಿ ಗುರುವಾರ ಸಂಜೆ ಸಣ್ಣಶೆಟ್ಟಿ ಮೊಪೆಡ್‌ನಲ್ಲಿ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ತಾಲೂಕಿನ ಹಿಟ್ಟನಹಳ್ಳಿ ಗ್ರಾಮದ ಬಳಿ ಮುಂಭಾಗದಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ದಿಢೀರನೇ ಬ್ರೇಕ್ ಹಾಕಿದಾಗ ಹಿಂಬದಿ ಬರುತ್ತಿದ್ದ ಮೊಪೆಡ್‌ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಚಿಕಿತ್ಸೆಗಾಗಿ ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಂದಿದ್ದು ಚಿಕಿತ್ಸೆಗೆ ಸ್ಪಂದಿಸದೆ ಸಣ್ಣಶೆಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರಿಗೆ ಬಸ್ ಚಾಲಕನ ನಿರ್ಲಕ್ಷೃದಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿ ಮೃತರ ಪುತ್ರ ಸಂದೀಪ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.