ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಗಿರಿಧರ್ ಪರ್ವತಂ 
ಮೈಸೂರು

ಬೆಂಗಳೂರಿನಲ್ಲಿ 13ಕ್ಕೆ ರೈಸ್ ರಾಷ್ಟ್ರೀಯ ಸಮಾವೇಶ

ಪ್ರಮುಖ ಮುಖ್ಯಾಂಶಗಳು

  • ವೈಜ್ಞಾನಿಕ, ಕೈಗಾರಿಕಾ ಸಂಶೋಧನಾ ಮಂಡಳಿ ಸಹಯೋಗ
  • ಪ್ರಸಕ್ತ ಆವೃತ್ತಿಯು ಭಾರತವನ್ನು ಜಾಗತಿಕ ನವೋದ್ಯಮ ಶಕ್ತಿಕೇಂದ್ರವನ್ನಾಗಿ ರೂಪಿಸುವ ಪ್ರಯಾಣಕ್ಕೆ ಮತ್ತಷ್ಟು ಬಲ
ಮೈಸೂರು: ನವೋದ್ಯಮ ಆಧಾರಿತ ಆರ್ಥಿಕ ಬೆಳವಣಿಗೆ, ತಾಂತ್ರಿಕ ಸ್ವಾವಲಂಬನೆಗೆ ಉತ್ತೇಜಿಸುವ ಸಲುವಾಗಿ ‘ಸಂಶೋಧನೆ, ಕೈಗಾರಿಕೆ, ಸ್ಟಾರ್ಟಪ್ ಮತ್ತು ಉದ್ಯಮಶೀಲತೆ (ರೈಸ್) ರಾಷ್ಟ್ರೀಯ ಸಮಾವೇಶ-2026’ ಅನ್ನು ಜೂ.13 ಮತ್ತು 14ರಂದು ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್ ರಸ್ತೆಯಲ್ಲಿರುವ ವಿ.ಎಂ.ಘಾಟ್ಗೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಅಂಗಸಂಸ್ಥೆಗಳಾದ ಸಿಎಸ್‌ಐಆರ್, ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯ, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ), ಫೋರ್ಥ್ ಪ್ಯಾರಡೈಮ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ನಡೆಯಲಿದೆ.
‘ವಿಕಸಿತ ಭಾರತ 2047ಕ್ಕಾಗಿ ನವೋದ್ಯಮ, ಉದ್ಯಮಶೀಲತೆ ಬೆಳವಣಿಗೆ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಈ ಸಮಾವೇಶವು ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು, ಸ್ಟಾರ್ಟಪ್‌ಗಳು, ಶೈಕ್ಷಣಿಕ ಸಂಸ್ಥೆಗಳು, ನೀತಿ ನಿರೂಪಕರು, ಹೂಡಿಕೆದಾರರು, ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ಕರೆತರಲಿದೆ ಎಂದು ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಗಿರಿಧರ್ ಪರ್ವತಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಮ್ಮು, ಹೈದರಾಬಾದ್, ಮುಂಬೈ, ಲಖನೌ ಮತ್ತು ಚೆನ್ನೈಗಳಲ್ಲಿ ನಡೆದ ಹಿಂದಿನ ಆವೃತ್ತಿಗಳ ಯಶಸ್ಸಿನ ಮೇಲೆ ರೂಪುಗೊಂಡಿರುವ ಈ ಸಮಾವೇಶ ಈಗ ದೇಶದ ಪ್ರಮುಖ ರಾಷ್ಟ್ರೀಯ ನವೋದ್ಯಮ ವೇದಿಕೆಯಾಗಿ ಬೆಳೆದಿದೆ. ಪ್ರಸಕ್ತ ಆವೃತ್ತಿಯು ಭಾರತವನ್ನು ಜಾಗತಿಕ ನವೋದ್ಯಮ ಶಕ್ತಿಕೇಂದ್ರವನ್ನಾಗಿ ರೂಪಿಸುವ ಪ್ರಯಾಣಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದೂ ಹೇಳಿದರು
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಖಾತೆಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಸಮಾವೇಶ ಉದ್ಘಾಟಿಸುವರು. ಜತೆಗೆ, ಕೈಗಾರಿಕಾ ವಲಯದ ಮುಖಂಡರು, ನವೋದ್ಯಮ ಸಂಸ್ಥಾಪಕರು, ಉದ್ಯಮಿಗಳೊಂದಿಗೆ ಸಂವಾದಿಸಲಿದ್ದಾರೆ. ಸಿಎಸ್‌ಐಆರ್ ಮಹಾನಿರ್ದೇಶಕಿ, ಡಿಎಸ್‌ಐಆರ್ ಕಾರ್ಯದರ್ಶಿ ಡಾ.ಎನ್.ಕಲೈಸೆಲ್ವಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
‘ಸಂಪೂರ್ಣ ಸರ್ಕಾರ- ಸಂಪೂರ್ಣ ಸಮಾಜ- ಸಂಪೂರ್ಣ ವಿಜ್ಞಾನ ಮತ್ತು ನವೋದ್ಯಮ’ ಎಂಬ ಪರಿಕಲ್ಪನೆಯಡಿ ಇದು ಹಮ್ಮಿಕೊಳ್ಳಲಾಗಿದ್ದು, ವೈಜ್ಞಾನಿಕ ಸಂಶೋಧನೆವನ್ನು ವಾಣಿಜ್ಯೋತ್ಪನ್ನಗಳು, ತಂತ್ರಜ್ಞಾನಗಳು, ಉದ್ಯಮಗಳಾಗಿ ಪರಿವರ್ತಿಸುವ ಸಂಕೇತವನ್ನು ಸೂಚಿಸಲಿದೆ. ಪ್ರಯೋಗಾಲಯಗಳು, ವಿಶ್ವವಿದ್ಯಾಲಯಗಳು, ಕೈಗಾರಿಕೆಗಳು, ಸ್ಟಾರ್ಟಪ್‌ಗಳ ನಡುವಿನ ಸಹಯೋಗವನ್ನೂ ಬಲ ಪಡಿಸಲಿದೆ ಎಂದು ಹೇಳಿದರು.
ಸಿಎಸ್‌ಐಆರ್, ಇಸ್ರೋ, ಡಿಎಸ್‌ಟಿ, ಡಿಬಿಟಿ, ಐಸಿಎಆರ್, ಐಸಿಎಂಆರ್, ಎಂಒಇಎಸ್ ಸೇರಿದಂತೆ ಪ್ರಮುಖ ಸಂಸ್ಥೆಗಳ ಸಹಕಾರ ನೀಡಲಿದ್ದು, ಅಂದಾಜು 100 ಸ್ಟಾರ್ಟ್‌ಅಪ್‌ಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ), ತಂತ್ರಜ್ಞಾನ ಪ್ರದರ್ಶಕರು ತಮ್ಮ ಅತ್ಯಾಧುನಿಕ ಆವಿಷ್ಕಾರಗಳು, ತಂತ್ರಜ್ಞಾನ ಪ್ರದರ್ಶಿಸಲಿದ್ದಾರೆ. ತಂತ್ರಜ್ಞಾನ ವರ್ಗಾವಣೆ, ವಾಣಿಜ್ಯೀಕರಣ, ಕೈಗಾರಿಕಾ ಸಹಭಾಗಿತ್ವ, ಹೂಡಿಕೆ ಜಾಲತಾಣ ನಿರ್ಮಾಣ, ಉದ್ಯಮಶೀಲತೆಯ ಅಭಿವೃದ್ಧಿಗೆ ಈ ಸಮಾವೇಶವು ಉತ್ತಮ ಅವಕಾಶ ಕಲ್ಪಿಸಿಕೊಡುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಬೆಳವಣಿಗೆಗಾಗಿ ಏರೋಸ್ಪೇಸ್ ತಂತ್ರಜ್ಞಾನಗಳು, ವಿಜ್ಞಾನ ಸಂವಹನ, ಸಮಾಜ ಮತ್ತು ನೈತಿಕತೆಯ ದೃಷ್ಟಿಯಿಂದ ಕೃತಕ ಬುದ್ಧಿಮತ್ತೆ (ಎಐ), ಕೃಷಿ-ಆಹಾರ ಕುರಿತು ಪ್ರಯೋಗಾಲಯದಿಂದ ಮಾರುಕಟ್ಟೆವರೆಗೆ ಮಾರ್ಗಸೂಚಿ ನಿರ್ಮಾಣ, ಸ್ಟಾರ್ಟ್‌ಅಪ್ ಅಭಿವೃದ್ಧಿ-ಉದ್ಯಮಶೀಲತೆ, ವೆಂಚರ್ ಕ್ಯಾಪಿಟಲ್, ಹೂಡಿಕೆ, ನವೋದ್ಯಮ ಪರಿಸರ ವ್ಯವಸ್ಥೆಗಳು, ಶೈಕ್ಷಣಿಕ ಸಂಶೋಧನೆಯನ್ನು ಕೈಗಾರಿಕಾ ಅಗತ್ಯಗಳಿಗೆ ಹೊಂದಾಣಿಕೆ ಕುರಿತು ಅಧಿವೇಶನಗಳು, ಚರ್ಚೆಗಳು ನಡೆಯಲಿವೆ. ಐಐಎಸ್‌ಸಿ, ಇಸ್ರೋ, ಬೋಸ್ಚ್, ಎಲ್ ಆ್ಯಂಡ್ ಟಿ ಡಿಫೆನ್ಸ್ ಸೇರಿದಂತೆ ಅನೇಕ ಪ್ರಮುಖ ಕೈಗಾರಿಕೆ, ಶೈಕ್ಷಣಿಕ ಸಂಸ್ಥೆಗಳ ತಜ್ಞರು, ಪ್ರತಿನಿಧಿಗಳು ಭಾಗವಹಿಸಲಿದ್ದಾರೆ  ಎಂದು ತಿಳಿಸಿದರು.
ಈ ಸಮ್ಮೇಳನವು ಪ್ರಯೋಗಾಲಯದ ಸಂಶೋಧನೆ, ಮಾರುಕಟ್ಟೆ ಸಿದ್ಧ ಪರಿಹಾರಗಳ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ. ವಿಜ್ಞಾನಿಗಳು, ಉದ್ಯಮಿಗಳು, ಕೈಗಾರಿಕೆಗಳು, ಹೂಡಿಕೆದಾರರ ನಡುವಿನ ಸಹಯೋಗವನ್ನು ಉತ್ತೇಜಿಸಲಿದೆ. ನವೋದ್ಯಮಗಳು ಸಮಾಜಕ್ಕೆ ಶೀಘ್ರ ತಲುಪಲು, ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ತಾಂತ್ರಿಕ ಪ್ರಗತಿಗೆ ಕೊಡುಗೆ ನೀಡಲು ಈ ಸಮಾವೇಶ ನೆರವಾಗಲಿದೆ ಎಂದು ಅಭಿಪ್ರಾಯಿಸಿದರು.
 ಸಿಎಸ್‌ಐಆರ್-ಎನ್‌ಎಎಲ್ ಏರೋಸ್ಪೇಸ್ ತಂತ್ರಜ್ಞಾನಗಳು, ಉನ್ನತ ಇಂಜಿನಿಯರಿಂಗ್ ವ್ಯವಸ್ಥೆಗಳ ಪರಿಣತಿಯನ್ನು ಪ್ರದರ್ಶಿಸಲಿದ್ದು, ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ಸಹ ಆಹಾರ ವಿಜ್ಞಾನ, ಪೌಷ್ಟಿಕತೆ, ಆಹಾರ ಸುರಕ್ಷತೆ, ಕೃಷಿ-ಆಹಾರ ತಂತ್ರಜ್ಞಾನ ಪರಿಚಯಿಸಲಿದೆ ಎಂದು ಮಾಹಿತಿ ನೀಡಿದರು.
ಈ ಸಮಾವೇಶದಿಂದ ಹೊಸ ಸಹಭಾಗಿತ್ವಗಳು, ತಂತ್ರಜ್ಞಾನ ಪರವಾನಗಿ ಅವಕಾಶಗಳು, ಸ್ಟಾರ್ಟ್‌ಅಪ್ ಬೆಂಬಲ ವ್ಯವಸ್ಥೆಗಳು, ಹೂಡಿಕೆ ಮಾರ್ಗಗಳು, ಸಹಯೋಗಾತ್ಮಕ ಯೋಜನೆ ರೂಪುಗೊಳ್ಳಲಿವೆ ಎಂಬ ನಿರೀಕ್ಷೆ ಇದೆ. ವಿಜ್ಞಾನ-ತಂತ್ರಜ್ಞಾನದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಲು ವಿದ್ಯಾರ್ಥಿಗಳು ಮತ್ತು ಯುವ ನವೋದ್ಯಮಿಗಳನ್ನು ಪ್ರೇರೇಪಿಸುವ ವೇದಿಕೆಯಾಗಿಯೂ ಇದು ಕಾರ್ಯನಿರ್ವಹಿಸಲಿದೆ ಎಂದು ಅಭಿಪ್ರಾಯಿಸಿದರು.
ಸಂಸ್ಥೆಯ ವಿಜ್ಞಾನಿಗಳಾದ ಪ್ರೊ.ಆರ್.ಎಸ್.ಮಾಚೆ, ಡಾ.ವಿಕಾಸ್ ಸಿಂಗ್ ಚೌಹಾನ್, ಡಾ.ಎ.ಎ.ಇನಾಮ್ದಾರ್, ಎಂ.ವಿ.ರಘುನಂದನ್, ಡಾ.ಟಿ.ಆರ್.ರಾಮಪ್ರಸಾದ್, ಡಾ.ಆರ್.ಸುಹಾಸ್, ಅರುಣ್‌ಕುಮಾರ್ ಇದ್ದರು.