ನಗರದಲ್ಲಿ ಸೋಮವಾರ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿದರು. ಟಿ.ಎಸ್.ಶ್ರೀವತ್ಸ, ಎಲ್.ನಾಗೇಂದ್ರ, ಸುಬ್ಬಣ್ಣ, ಶಿವಕುಮಾರ್, ಎಂ.ಜಿ.ಮಹೇಶ್ ಇನ್ನಿತರರಿದ್ದರು. 
ಮೈಸೂರು

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ: ರಾಜ್ಯ ಸರ್ಕಾರದ ಬೂಟಾಟಿಕೆ ಬಯಲು

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಿಡಿ
  • ಕುರ್ಚಿ ಕಿತ್ತಾಟ ಬೀದಿಗೆ ಬರಲಿದೆ
ಮೈಸೂರು: ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಕೈಹಾಕಿರುವ ಕಾಂಗ್ರೆಸ್ ಸರ್ಕಾರದ ಬೂಟಾಟಿಕೆ ಈಗ ಬಯಲಾಗಿದ್ದು, ದುಡ್ಡು ಉಳಿಸಲು ಫಲಾನುಭವಿಗಳ ಸಂಖ್ಯೆಯನ್ನೇ ಕಡಿಮೆ ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಿಡಿಕಾರಿದರು.
ರಾಜ್ಯ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿದೆ. 8 ಲಕ್ಷ ಕೋಟಿ ರೂ. ಸಾಲದಿಂದ ಖಜಾನೆಯೇ ಖಾಲಿಯಾಗಿದೆ. ಹೀಗಾಗಿ, ಗ್ಯಾರಂಟಿ ಯೋಜನೆಗಳಿಗೆ ಕತ್ತರಿಹಾಕಲು ಮುಂದಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು. 
ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ 14 ಸದಸ್ಯರು 14 ರೀತಿ ಮಾತನಾಡುತ್ತಿದ್ದಾರೆ. ಖಾತೆ ಕ್ಯಾತೆ ಶುರುವಾಗಿದೆ. ಇನ್ನೂ ಸ್ವಲ್ಪ ದಿನ ಕಾದರೆ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಕುರ್ಚಿ ಕಿತ್ತಾಟ ಬೀದಿಗೆ ಬರಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾಂಗ್ರೆಸ್ ಸರ್ಕಾರ ಕಾರಣ. ಇದುವೇ ಅದರ ಕೊಡುಗೆ ಸಹ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬೆಲೆ ಏರಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ ಎಂದು ಕಿಡಿಕಾರಿದರು.

ತೈಲ ಬಿಕ್ಕಟ್ಟಿಗೆ ಕಾಂಗ್ರೆಸ್ ಕಾರಣ

ಪಶ್ಚಿಮ ಏಷ್ಯಾದ ಸಂಘರ್ಷದಿಂದ ತೈಲ, ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಅಮೆರಿಕದಲ್ಲಿ 200-300 ಪಟ್ಟು ತೈಲ ದರ ಏರಿಕೆಯಾಗಿದೆ. ಭಾರತದ ತೈಲ ಕಂಪನಿಗಳಿಗೆ ನಷ್ಟವಾದರೂ ಜನಸಾಮಾನ್ಯರಿಗೆ ಹೊರೆಯಾಗದಂತೆ ಇವುಗಳ ದರ ಏರಿಕೆಯನ್ನು ನಿಯಂತ್ರಿಸಿದೆ. ಸಂಕಷ್ಟ ಕಾಲದಲ್ಲಿ ತೈಲ, ಗ್ಯಾಸ್ ಬೆಲೆಯನ್ನು ಸ್ವಲ್ಪಮಟ್ಟದಲ್ಲಿ ಹೆಚ್ಚಿಸಲಾಗಿದೆ. ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಡಾ.ಸಿ.ಎನ್.ಅಶ್ವತ್ಥನಾರಾಯಣ ಸಮರ್ಥಿಸಿಕೊಂಡರು.
ಇಂದಿನ ತೈಲ ಬಿಕ್ಕಟ್ಟಿಗೆ ಕಾಂಗ್ರೆಸ್ ಕಾರಣ. ದೇಶ ವಿಭಜನೆ ಮಾಡಿ ಇಂಧನದ ಪೈಪ್‌ಲೈನ್‌ಗಳು ನೇರವಾಗಿ ಭಾರತಕ್ಕೆ ಬರದಂತೆ ಮಾಡಲಾಗಿದೆ. ಇದರಿಂದ ಸಾಗಾಟ ದರವೇ ಹೆಚ್ಚಾಗಿದೆ. ಹಿಂದೆ ಕಾಂಗ್ರೆಸ್ ಮಾಡಿರುವ ತಪ್ಪುಗಳನ್ನು ಬಿಜೆಪಿ ಈಗ ಸರಿಪಡಿಸುತ್ತಿದೆ ಎಂದು ಹೇಳಿದರು.

ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ: 

ವೈದ್ಯಕೀಯ ಕೋರ್ಸ್‌ನ ಪ್ರವೇಶಕ್ಕೆ ಸಂಬಂಧಿಸಿದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಜವಾಬ್ದಾರಿ ಹೊತ್ತುಕೊಂಡಿರುವ ವ್ಯಕ್ತಿಯೇ ಕಾರಣ. ಅವರಿಂದ ತಪ್ಪಾಗಿದೆ. ಈ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿ, ಮತ್ತೆ ಲೋಪ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಮರುಪರೀಕ್ಷೆಯನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ಮತದಾನ ಪಟ್ಟಿಯ ಸಮಗ್ರ ಪರಿಶೀಲನೆಯು(ಎಸ್‌ಐಆರ್) ಬಾಂಗ್ಲಾ ದೇಶದ ನುಸುಳುಕೋರರನ್ನು ಹೊರ ಹಾಕಲು ನಡೆದಿರುವ ಪ್ರಕ್ರಿಯೆ. ಇದು ಕಾಂಗ್ರೆಸ್ ಸೇರಿದಂತೆ ದೇಶದ ಜನರ ಆಗ್ರಹವೂ ಆಗಿತ್ತು. ಅನರ್ಹರನ್ನು ಕಿತ್ತು ಹಾಕಿ ಪಟ್ಟಿಯನ್ನು ಶುದ್ಧೀಕರಣ ಮಾಡಲಾಗುತ್ತಿದೆ ಎಂದು ಚುನಾವಣಾ ಆಯೋಗದ ಕ್ರಮವನ್ನು ಸಮರ್ಥಿಸಿಕೊಂಡರು.
ನರೇಂದ್ರ ಮೋದಿ ಅವರು ಸುದೀರ್ಘ ಅವಧಿಯ ಪ್ರಧಾನಿ. ಅವರ 12 ವರ್ಷದ ಅಧಿಕಾರ ಅವಧಿಯಲ್ಲಿ ದೇಶ ಬಹಳಷ್ಟು ಸಾಧನೆ ಮಾಡಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ, ಮೋದಿಯವರ ಸಾಧನೆಯ ಪಟ್ಟಿಯನ್ನು ಮಂಡಿಸಿದರು.
ಜನಪರ ಅಭಿವೃದ್ಧಿ ಕೆಲಸ ಮಾಡಿರುವ ಮೋದಿ, ದೇಶದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ. ಇದರೊಂದಿಗೆ ನಂಬಿಕೆ, ವಿಶ್ವಾಸ ಗಳಿಸಿದ್ದಾರೆ. ದೇಶದ ಸಾರ್ವಭೌಮತೆ, ಅಖಂಡತೆ, ಶಾಂತಿ-ಸುವ್ಯವಸ್ಥೆ ಕಾಪಾಡಿದ ಅಪ್ರತಿಮ ನಾಯಕ ಮೋದಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ಒದಗಿಸಿದ್ದಾರೆ ಎಂದು ಹೇಳಿದರು.
ಮನೆ, ವಿದ್ಯುತ್, ಶೌಚಗೃಹ, ಆಹಾರ, ಗ್ಯಾಸ್ ಇನ್ನಿತರ ಸವಲತ್ತು ಕಲ್ಪಿಸಿಕೊಟ್ಟು ಜನಸಾಮಾನ್ಯರ ಬದುಕು ಉತ್ತಮ ಗೊಳ್ಳಲು ಮೋದಿ ಕಾರಣರಾಗಿದ್ದಾರೆ. 2 ಕೋಟಿ ಆಯುಷ್ಮಾನ್ ಆರೋಗ್ಯ ಕಾರ್ಡ್, ಪಡಿತರ ಕಾರ್ಡ್ ವಿತರಣೆ, ರಸ್ತೆ, ಹೆದ್ದಾರಿಗಳ ಅಭಿವೃದ್ಧಿ, ದೇಶದ ವಿಮಾನನಿಲ್ದಾಣಗಳ ಸಂಖ್ಯೆಯನ್ನು 75ರಿಂದ 150ಕ್ಕೆ ಹೆಚ್ಚಿಸಿದ್ದಾರೆ ಎಂದು ವಿವರಿಸಿದರು

ಕೃಷಿಕರ ಆದಾಯ ದ್ವಿಗುಣ: 

ರೈತರ ಬದುಕಿಗೂ ಕೇಂದ್ರ ಸರ್ಕಾರ ಶಕ್ತಿ ತುಂಬಿದೆ. ಕಿಸಾನ್ ಆಸರೆ, ಕಿಸಾನ್ ಕ್ರೆಡಿಟ್, ಕಿಸಾನ್ ಕಾರ್ಡ್ ಸೇರಿದಂತೆ ಇನ್ನಿತರ ಸೌಲಭ್ಯದ ಮೂಲಕ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸಿದೆ. ಯುವ ಜನರಲ್ಲಿ ಕೌಶಲವೃದ್ಧಿಗೂ ಕಾರಣವಾಗಿದೆ. ಸ್ವಯಂ ಉದ್ಯೋಗಕ್ಕಾಗಿ ಮುದ್ರಾ ಯೋಜನೆ ಮೂಲಕ 57 ಲಕ್ಷ ಕೋಟಿ ರೂ.ಸಾಲ ಕೊಡಲಾಗಿದೆ. 4 ಕೋಟಿ ಮನೆ ನಿರ್ಮಿಸಲಾಗಿದೆ. ಮೇಕಿಂಗ್ ಇಂಡಿಯಾ ಯೋಜನೆಯೊಂದಿಗೆ ಕೈಗಾರಿಕಾ ಕ್ಷೇತ್ರಕ್ಕೆ ಶಕ್ತಿ ತುಂಬಲಾಗಿದ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ, ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಮಾಜಿ ಮೇಯರ್‌ಗಳಾದ ಶಿವಕುಮಾರ್, ಸಂದೇಶಸ್ವಾಮಿ, ಮುಖಂಡರಾದ ಅನಿಲ್ ಥಾಮಸ್, ಎಂ.ಜಿ.ಮಹೇಶ್  ಇನ್ನಿತರರಿದ್ದರು