ನಗರದ ನಂಜನಗೂಡು ರಸ್ತೆಯ ಶಕ್ತಿಧಾಮದ ಎದುರು ಅಕ್ರಮ ಪಾರ್ಕಿಂಗ್ ಅನ್ನು ಜಿಲ್ಲಾಡಳಿತದಿಂದ ತೆರವುಗೊಳಿಸಲಾಯಿತು. 
ಮೈಸೂರು

ಅಕ್ರಮ ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಸರ್ವೇ ನಂ. 87ರಲ್ಲಿ ಸುಮಾರು 38 ಗುಂಟೆ ಜಾಗ
  • ಬೈಕ್, ಸ್ಕೂಟರ್ ನಿಲ್ದಾಣ ಮಾಡಿಕೊಂಡು ಜನರಿಂದ ಹಣ ವಸೂಲಿ
ಮೈಸೂರು:ವಿದ್ಯಾರ್ಥಿನಿಲಯಕ್ಕೆ ಮೀಸಲಾದ ಜಾಗವನ್ನು ಖಾಸಗಿ ವ್ಯಕ್ತಿಗಳು ಮಾಡಿಕೊಂಡಿದ್ದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಮುಂಜಾನೆಯೇ ಪೊಲೀಸರ ಬಂದೋಬಸ್ತ್‌ನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ತೆರವು ಕಾರ್ಯ ನಡೆಸಿದರು.
ನಗರದ ನಂಜನಗೂಡು ರಸ್ತೆಯ ಶಕ್ತಿಧಾಮದ ಎದುರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಸರ್ವೇ ನಂ. 87ರಲ್ಲಿ ಸುಮಾರು 38 ಗುಂಟೆ ಜಾಗ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದು, ಈ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಬೈಕ್, ಸ್ಕೂಟರ್ ನಿಲ್ದಾಣ ಮಾಡಿಕೊಂಡು ಜನರಿಂದ ಹಣ ವಸೂಲಿ ಮಾಡುತ್ತಿದ್ದರು.
2011ರಲ್ಲಿ ಸದರಿ ಜಾಗವನ್ನ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ/ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡದ ಉದ್ದೇಶಕ್ಕಾಗಿ ಕಾಯ್ದಿರಿಸಿತ್ತು. ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಅನುಭವಿಸುತ್ತಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಒತ್ತುವರಿ ತೆರುವಿಗೆ ಆದೇಶಿಸಿದ್ದರು
.
ಜಿಲ್ಲಾಧಿಕಾರಿ ಆದೇಶದಂತೆ ಶುಕ್ರವಾರ ಮುಂಜಾನೆ ತಹಸೀಲ್ದಾರ್ ಮಹೇಶ್‌ಕುಮಾರ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಘವೇಂದ್ರ, ನಗರ ಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕಣ್ಣ ಅವರು ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ತೆರವು ಮಾಡಿಸಿ ಸಮಾಜಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದರು.