ರಂಗನಾಥ್ ಮೈಸೂರು ವಿರಚಿತ ‘ಹೃದಯವಂತ’ ಕೃತಿಯನ್ನು ಡಾ.ಡಿ.ಕೆ.ರಾಜೇಂದ್ರ, ’ಸ್ನೇಹಶೀಲ’ ಕೃತಿಯನ್ನು ಎಚ್. ನಿವೇದಿತಾ ಬಿಡುಗಡೆ ಮಾಡಿದರು. ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಅಂಶಿ ಪ್ರಸನ್ನಕುಮಾರ್, ಕೆ.ರಘುರಾಂ ವಾಜಪೇಯಿ ಇತರರಿದ್ದರು. 
ಮೈಸೂರು

ಕವಿಗಳಿಗೆ ಸಹೃದಯತೆ ಇದ್ದಲ್ಲಿ ಮಾತ್ರ ಸ್ಪಂದನೆ ಸಾಧ್ಯ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ನಿರ್ದೇಶಕ ಡಾ.ಡಿ.ಕೆ.ರಾಜೇಂದ್ರ ಅಭಿಮತ

ಕವಿಗಳಿಗೆ ಸಹೃದಯತೆ ಇದ್ದಲ್ಲಿ ಮಾತ್ರ ಸ್ಪಂದನೆ ಸಾಧ್ಯ ಎಂದು ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ನಿರ್ದೇಶಕ, ಖ್ಯಾತ ಜಾನಪದ ತಜ್ಞ ಡಾ.ಡಿ.ಕೆ.ರಾಜೇಂದ್ರ ಅಭಿಪ್ರಾಯಪಟ್ಟರು.

ಹೊಯ್ಸಳ ಕನ್ನಡ ಸಂಘ, ಸವಿಗನ್ನಡ ಬಳಗವು ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರಿಗೆ ಕಾವ್ಯಾಭಿನಂದನೆ ಕಾರ್ಯಕ್ರಮದಲ್ಲಿ ರಂಗನಾಥ್ ಮೈಸೂರು ಅವರ ‘ಹೃದಯವಂತ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು.
ಕವಿಗಳು ಮನಸ್ಸು-ಮನಸ್ಸು ಕೂಡಿಸುವ ಕೆಲಸ ಮಾಡಬೇಕು. ಆಗಮಾತ್ರ ಸಮಾಜಕ್ಕೆ ಉಪಯೋಗವಾಗುತ್ತದೆ ಎಂದರು.
‘ಹೃದಯವಂತ’ ಕೃತಿಯು ಮಡ್ಡೀಕೆರೆ ಗೋಪಾಲ್ ಅವರನ್ನು ಕುರಿತದ್ದು. ಇಲ್ಲಿ ಕೇವಲ ರಂಗನಾಥ್ ಮೈಸೂರು ಮಾತ್ರವಲ್ಲದೇ ಬೇರೆ ಬೇರೆಯವರು ಮಡ್ಡೀಕೆರೆ ಅವರ ಬಗ್ಗೆ ಹೇಳಿರುವ ಮಾತುಗಳ ಆಧಾರದ ಮೇಲೆ ಈ ಕೃತಿ ರಚಿಸಲಾಗಿದೆ. ಖ್ಯಾತ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ ಅವರ ’ಇರಬೇಕು ಇರುವಂತೆ...’ ಕವನದ ಸಾಲಿಗೆ ಅನ್ವರ್ಥವಾಗಿರುವ ಮಡ್ಡೀಕೆರೆ ಗೋಪಾಲ್ ಅವರನ್ನು ಕುರಿತ ಕೃತಿಗೆ ‘ಹೃದಯವಂತ’ ಶೀರ್ಷಿಕೆ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.
ಮೇಲುಕೋಟೆ ವಂಗೀಪುರ ನಂಬಿಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಭಾಗವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿ, ಅಭಿನಂದನೆ ಸ್ವೀಕರಿಸಿದರು.