ಎಐಎಂಎಸ್‌ಎಸ್ ವತಿಯಿಂದ ಚಿಕ್ಕ ಗಡಿಯಾರದ ಬಳಿ ಮಹಿಳಾ ದಿನಾಚರಣೆಯ ಅಂಗವಾಗಿ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು. ನಳಿನಾ, ಆಸಿಯಾ ಬೇಗಂ, ಜಿ.ಪುಷ್ಪ, ಪದ್ಮಶ್ರೀ, ಗಾಯಿತ್ರಿ, ಉಷಾ ಇನ್ನಿತರರಿದ್ದರು. 
ಮೈಸೂರು

ಹೆಣ್ಣು ಮಕ್ಕಳನ್ನು ಘನತೆಯಿಂದ ಗೌರವಿಸಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ನಳಿನಾ ಸಲಹೆ
  • ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ
ಮೈಸೂರು: ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅಪರಾಧಗಳ ವಿರುದ್ಧ ಇಡೀ ಸಮಾಜವೇ ಧ್ವನಿಯೆತ್ತಬೇಕು. ಹೆಣ್ಣು ಮಕ್ಕಳನ್ನು ಘನತೆಯಿಂದ ಗೌರವದಿಂದ ನಡೆಸಿಕೊಳ್ಳಬೇಕಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್) ಜಿಲ್ಲಾಧ್ಯಕ್ಷೆ ನಳಿನಾ ಹೇಳಿದರು.
ಮಹಿಳಾ ದಿನಾಚರಣೆ ಅಂಗವಾಗಿ ಎಐಎಂಎಸ್‌ಎಸ್ ವತಿಯಿಂದ ಚಿಕ್ಕ ಗಡಿಯಾರದ ಬಳಿ ಭಾನುವಾರ ಆಯೋಜಿಸಿದ್ದ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ, ಪುಸ್ತಕ ಮಾರಾಟ ಕಾರ್ಯಕ್ರಮದಲ್ಲಿ ಮಹಿಳಾ ದಿನದ ರೂವಾರಿ ಕ್ಲಾರ ಜಟ್ಕಿನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಮಹಿಳಾ ದಿನಾಚರಣೆಯು ಹೋರಾಟದ ಇತಿಹಾಸವನ್ನು ಹೊಂದಿದೆ. 1908ರಲ್ಲಿ ಅಮೆರಿಕಾದ ನ್ಯೂಯಾರ್ಕ್ ನಗರದ ಸಿದ್ಧ ಉಡುಪಿನ ಕಾರ್ಖಾನೆ ಹೆಣ್ಣು ಮಕ್ಕಳನ್ನು ಮಾಲೀಕರ ಅಮಾನವೀಯ ಶೋಷಣೆ ಅವರನ್ನು ಹೋರಾಟದ ಕಣಕ್ಕೆ ತಳ್ಳಿತು. ಕೊರೆಯುವ ಚಳಿಯನ್ನು ಲೆಕ್ಕಿಸದೆ, ಲಾಟಿ-ಗುಂಡಿನೇಟನ್ನು ಮಹಿಳೆಯರು ದಿಟ್ಟತನದಿಂದ ಎದುರಿಸಿದರು. 
ಸತತ 13 ವಾರಗಳ ಕಾಲ ನಡೆದ ಈ ಹೋರಾಟದ ಸ್ಫೂರ್ತಿ ಮಹಿಳಾ ವಿಮೋಚನೆಯ ಪತಾಕೆಯನ್ನು ಎತ್ತಿ ಹಿಡಿಯಿತು. ಕೆಲವೊಂದು ಹಕ್ಕುಗಳನ್ನು ಗೆದ್ದುಕೊಂಡು, ಅಸ್ಮಿತೆಯನ್ನು ಕಂಡುಕೊಂಡ ದಿನವನ್ನು ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್ 1910ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಘೋಷಿಸಿ ವಿಶ್ವ ಮಾನ್ಯತೆ ನೀಡಿದರು ಎಂದರು.
 ಹೋರಾಟದ ದಿಕ್ಸೂಚಿಯಾದ ಈ ದಿನವನ್ನು ಮಹಿಳೆಯರು ತಾವು ನಡೆದು ಬಂದ ದಾರಿಯನ್ನು ಅವಲೋಕಿಸಿ, ಮುಂದೆ ಸಾಧಿಸಬೇಕಾಗಿರುವ ಪ್ರಗತಿಯ ಗುರಿಯನ್ನು ತಲುಪಲು ಸಂಕಲ್ಪ ತೊಡಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಆಸಿಯಾ ಬೇಗಂ ಮಾತನಾಡಿ, ಪ್ರತಿ ವರ್ಷ ಮಾ.8ರಂದು ಮಹಿಳಾ ದಿನವನ್ನು ಆಚರಿಸಬೇಕಾಗಿರುವುದು ಕೇವಲ ಒಂದು ಸಂಪ್ರದಾಯದಂತೆ ಅಥವಾ ಸಂಭ್ರಮವಾಗಿ ಅಲ್ಲ.
 ಬದಲಿಗೆ ಈ ದಿನ ಪುರುಷ ಪ್ರಧಾನ ಸಮಾಜದ ಧೋರಣೆಯ ವಿರುದ್ಧ ಸಮರ ಸಾರಲು ವೈಚಾರಿಕ ಆಂದೋಲನ ನಡೆಸುವ ಪಣತೊಡಬೇಕಿದೆ. ಮಹಿಳಾ ಹಕ್ಕುಗಳ ಬಗ್ಗೆ, ಸಮಾನತೆ ಬಗ್ಗೆ ಅರಿವು ಮೂಡಿಸುವ ಮತ್ತು  ಅಸಮಾನತೆಯ ಬೇರುಗಳನ್ನು ಪತ್ತೆ ಹಚ್ಚಿ, ಅವಳ ಮೇಲೆ ಹೇರಲ್ಪಟ್ಟ ಅನ್ಯಾಯಗಳ ವಿರುದ್ಧ ಧೈರ್ಯ ಹಾಗೂ ಸ್ಥೈರ್ಯದಿಂದ ಧ್ವನಿ ಎತ್ತಲು ಈ ದಿನ ಪ್ರೇರಣೆವಾಗಿದೆ ಎಂದರು.
 ನಿತ್ಯ ಅತ್ಯಾಚಾರ, ದೌರ್ಜನ್ಯ, ಹಿಂಸೆ ಅಗೌರವ, ಅಪಮಾನಗಳಿಗೆ ಸಾವಿರಾರು ಮಹಿಳೆಯರು ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಶಿಕ್ಷಣ-ಆರೋಗ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಖಾತ್ರಿಪಡಿಸಬೇಕು. ಅಶ್ಲೀಲ ಸಿನಿಮಾ ಸಾಹಿತ್ಯವನ್ನು ನಿರ್ಬಂಧಿಸುವ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಕಳೆದ 3 ವರ್ಷಗಳಲ್ಲಿ 1775 ಬಾಲ್ಯವಿವಾಹ ಪ್ರಕರಣ ದಾಖಲಾಗಿವೆ. ಕೇವಲ 2024-25ರಲ್ಲಿ 700 ಬಾಲ್ಯವಿವಾಹಗಳು ನಡೆದಿವೆ. ಮಂಡ್ಯ, ಮೈಸೂರು ಮತ್ತು ಬೆಂಗಳೂರು ಭಾಗಗಳಲ್ಲಿ ಕೇವಲ 2 ವರ್ಷಗಳಲ್ಲಿ 900 ಹೆಣ್ಣು ಭ್ರೂಣ ಹತ್ಯೆ ಮಾಡಲಾಗಿದೆ. ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್ ಪ್ರಕಾರ 80,813 ಬಾಲ ಗರ್ಭಿಣಿ ಪ್ರಕರಣಗಳು ದಾಖಲಾಗಿವೆ ಎಂದು ಆತಂಕ ವ್ಯಕ್ತ ಪಡಿಸಿದರು.
ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಸ್ಕೂಲ್ ಹೆಸರಿನಲ್ಲಿ ಬಡಜನರ ಮತ್ತು ಬಡ ಕುಟುಂಬದಿಂದ ಬರುವ ಮಕ್ಕಳ ಶಿಕ್ಷಣದ ಬಾಗಿಲುಗಳನ್ನು ಶಾಶ್ವತವಾಗಿ ಮುಚ್ಚುತ್ತಿವೆ. 
ಇದರ ಅಂತಿಮವಾಗಿ ಗುರಿಯಾಗುವುದು ಹೆಣ್ಣು ಮಕ್ಕಳೇ. ಬಡ ಜನ ಮತ್ತು ಮಹಿಳೆಯರ ವಿರೋಧಿ ಸರ್ಕಾರ ಹಾಗೂ ಅವರ ನೀತಿಗಳ ವಿರುದ್ಧ, ಹೆಣ್ಣೆಂದರೆ ಪುರುಷನ ಆಸ್ತಿ, ಭೋಗದ ವಸ್ತು ಎಂಬ ಪುರುಷ ಪ್ರಧಾನ ಧೋರಣೆ ಮತ್ತು ಅಮಾನವೀಯ ವ್ಯವಸ್ಥೆಯ ವಿರುದ್ಧ ನಾವೆಲ್ಲ ಸುದೀರ್ಘವಾದ ಸಂಗ್ರಾಮಕ್ಕೆ ಸಜ್ಜಾಗಬೇಕಿದೆ ಎಂದು ಹೇಳಿದರು. 
ಕಾರ್ಯದರ್ಶಿ ಜಿ.ಪುಷ್ಪ, ಜಿಲ್ಲಾ ಸಮಿತಿಯ ಸದಸ್ಯೆಯರಾದ ಪದ್ಮಶ್ರೀ, ಗಾಯಿತ್ರಿ, ಉಷಾ ಇನ್ನಿತರರು ಉಪಸ್ಥಿತರಿದ್ದರು.