ಬೆಟ್ಟದಪುರ ಪೊಲೀಸ್ ಠಾಣೆಯ ಬಳಿ ನಿರ್ಮಾಣಗೊಂಡಿರುವ ಪೊಲೀಸ್ ಸಿಬ್ಬಂದಿಯವರ ವಸತಿ ಗೃಹ ನೂತನ ಕಟ್ಟಡವನ್ನು ಕೆ.ವೆಂಕಟೇಶ್ ಉದ್ಘಾಟಿಸಿದರು. ಮಲ್ಲಿಕಾರ್ಜುನ ಬಾಲದಂಡಿ, ನಿತಿನ್ ವೆಂಕಟೇಶ್, ಹೊಲದಪ್ಪ, ಸಿ.ಮಲ್ಲಿಕ್, ಎಲ್.ನಾಗೇಶ್, ರವಿ, ಎಂ.ಕೆ.ದೀಪಕ್, ಡಿ.ಎನ್.ಅಜಯ್ ಕುಮಾರ್, ರವಿಕುಮಾರ್, ನಿತಿನ್ ಇದ್ದರು. 
ಮೈಸೂರು

ಜಮೀನು ವ್ಯಾಜ್ಯ ಬಂದಾಗ ಎಚ್ಚರಿಕೆಯಿಂದ ಬಗೆಹರಿಸಿ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಸಚಿವ ಕೆ.ವೆಂಕಟೇಶ್ ಸಲಹೆ
ಬೆಟ್ಟದಪುರ : ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಜಮೀನು ಸಮಸ್ಯೆಗಳು ನಿಮ್ಮ ಬಳಿ ಬಂದಾಗ ಪೊಲೀಸರು ಸ್ವಲ್ಪ ಎಚ್ಚರಿಕೆಯಿಂದ ಬಗೆಹರಿಸಿಕೊಡಬೇಕು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಸಲಹೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯ ಬಳಿ ನಿರ್ಮಾಣಗೊಂಡಿರುವ 12 ಪೊಲೀಸ್ ವಸತಿ ಗೃಹಗಳ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಜನರು ನಮ್ಮ ಬಳಿಗೆ ಜಮೀನು ಗಲಾಟೆ ವಿಚಾರಗಳನ್ನು ತಂದಾಗ ಹೇಗೆ ಬಗೆಹರಿಸಬೇಕು ಎಂದು ತಿಳಿಯುವುದಿಲ್ಲ. ಹಾಗಾಗಿ ಇಂತಹ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳು ವಿಶೇಷ ನಿಗಾ ವಹಿಸಿ ಸಮಸ್ಯೆ ಬಗೆಹರಿಸಿಕೊಡಿ ಎಂದರು.
ಬೆಟ್ಟದಪುರದ ಠಾಣೆಯ ಪಕ್ಕದಲ್ಲಿಯೇ ಸುಸಜ್ಜಿತವಾದ ಸುಮಾರು 12 ವಸತಿ ಇರುವ ಕಟ್ಟಡ ನಿರ್ಮಾಣವಾಗಿದ್ದು, ಇಂದು ಉದ್ಘಾಟನೆ ಮಾಡಲಾಗಿದೆ. ಠಾಣೆಯ ಪಕ್ಕದಲ್ಲಿಯೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಇರುವುದರಿಂದ ಜನರ ಸೇವೆಗೆ ಇನ್ನಷ್ಟು ಅನುಕೂಲವಾಗಲಿದೆ. ಈ ಠಾಣೆಯಲ್ಲಿ ಸುಮಾರು 34 ಪೊಲೀಸ್ ಸಿಬ್ಬಂದಿ ಇದ್ದಾರೆ. ಹಾಗಾಗಿ ಇನ್ನು ಉಳಿದ ಸಿಬ್ಬಂದಿಗೂ ವಸತಿಗೃಹ ನಿರ್ಮಾಣ ಮಾಡುವ ಬಗ್ಗೆ ಇಲಾಖೆಯೂ ಆಸಕ್ತಿ ತೋರಿಸಿದರೆ ಅದಕ್ಕೆ ಬೇಕಾದ ಜಾಗದ ವ್ಯವಸ್ಧೆ ಮಾಡಿಕೊಡುತ್ತೇವೆ. ಅಲ್ಲದೆ, ಈ ಬಗ್ಗೆ ಸಂಬಂಧಪಟ್ಟ ಸಚಿವರ ಜತೆ ನಾವು ಮಾತನಾಡುತ್ತೇವೆ. ಬೆಟ್ಟದಪುರ ಸೇರಿದಂತೆ ಪಿರಿಯಾಪಟ್ಟಣ ತಾಲೂಕಿನ ಒಟ್ಟಾರೆ ಪೊಲೀಸರು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಈ ಹಿಂದೆ ಬೆಟ್ಟದಪುರದಲ್ಲಿದ್ದ ವಸತಿ ಗೃಹಗಳು ವಾಸಕ್ಕೆ ಯೋಗ್ಯವಿಲ್ಲದ ಹಿನ್ನೆಲೆಯಲ್ಲಿ 2024ರಲ್ಲಿ ಠಾಣೆಯ ಪಕ್ಕದಲ್ಲಿಯೇ ವಸತಿ ಗೃಹ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ತಿಂಗಳ ಹಿಂದೆ ಪೂರ್ಣಗೊಂಡು ಕಾರ್ಯರೂಪಕ್ಕೆ ಬಂದಿದೆ. ವಸತಿಗೃಹ ಠಾಣೆಯ ಸಮೀಪದಲ್ಲಿಯೇ ಇರುವುದರಿಂದ ಸಮಸ್ಯೆ ಏನಾದರೂ ಆದಾಗ ಸಿಬ್ಬಂದಿಯನ್ನು ಬೇಗ ಕರೆಸಿಕೊಳ್ಳಬಹುದು. ಇದರಿಂದ ಜನರ ಸೇವೆಗೆ ಅನುಕೂಲವಾಗಲಿದೆ. ಪೊಲೀಸ್ ಇಲಾಖೆ ಇತ್ತೀಚಿನ ದಿನಗಳಲ್ಲಿ ಜನಸ್ನೇಹಿ ಪೊಲೀಸ್ ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ. ಕಳೆದ ವರ್ಷದಿಂದ ಮನೆ ಮನೆಗೆ ಪೊಲೀಸ್ ಮತ್ತು ಆಸರೆ ಎಂಬ ಕಾರ್ಯಕ್ರಮ ಮಾಡಲಾಗುತ್ತಿದೆ. ಡ್ರಗ್ಸ್ ಮತ್ತು ಗಾಂಜಾ ಸೇವನೆಗೆ ಯಾರು ಬಲಿಯಾಗಿರುತ್ತಾರೆ ಅಂತಹವರನ್ನು ಹೊರ ತರಲು ಸನ್ಮಿತ್ರ ಪಡೆ ಎಂಬ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಸಾರ್ವಜನಿಕರು ಕೂಡ ಪೊಲೀಸ್ ಇಲಾಖೆಯೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸಬೇಕು, ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಆಶ್ರಯ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ಅಪರ ಪೊಲೀಸ್ ಅಧೀಕ್ಷಕರಾದ ಸಿ.ಮಲ್ಲಿಕ್, ಎಲ್.ನಾಗೇಶ್, ಹುಣಸೂರು ಡಿವೈಎಸ್ಪಿ ರವಿ, ವೃತ್ತ ನಿರೀಕ್ಷಕ ಎಂ.ಕೆ.ದೀಪಕ್, ಪಿಎಸ್‌ಐ ಡಿ.ಎನ್.ಅಜಯ್ ಕುಮಾರ್, ರವಿಕುಮಾರ್, ಗುತ್ತಿಗೆದಾರ ನಿತಿನ್, ತಹಸೀಲ್ದಾರ್ ಜೆ. ನಿಸರ್ಗ ಪ್ರಿಯಾ , ಲೋಕೋಪಯೋಗಿ ಇಲಾಖೆ ಎಇಇ ಯೋಗಾನಂದ, ಎಇ ದಿನೇಶ್, ಲ್ಯಾಂಡ್ ಆರ್ಮಿ ಇಂಜಿನಿಯರ್‌ಗಳಾದ ವಿಜಯ್, ಸುಗಂಧರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ ಸ್ವಾಮಿ, ರಹಮತ್ ಜಾನ್ ಬಾಬು, ಅರ್ಚಕ ಸತೀಶ್ ಕಶ್ಯಪ್, ಮುಖಂಡರಾದ ಅನಿಲ್ ಕುಮಾರ್, ಪುಟ್ಟರಾಜು, ಅನಿತಾ ತೊಟ್ಟಪ್ಪಶೆಟ್ಟಿ, ಸರಸ್ಪತಿ, ಶೀಲ್ಪಾ, ಪ್ರಕಾಶ್ ಸೇರಿದಂತೆ ಹಲವು ಮುಖಂಡರು, ಗ್ರಾಮಸ್ಥರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.