ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್)ದಲ್ಲಿ ಆಯೋಜಿಸಿರುವ ಎರಡು ದಿನಗಳ ಕಾರ್ಯಾಗಾರಕ್ಕೆ ಪ್ರೊ. ಡಿ.ವಿ.ಪರಮಶಿವಮೂರ್ತಿ ಚಾಲನೆ ನೀಡಿದರು. ಪ್ರೊ. ಶ್ರೀನಿವಾಸ ಪಾಡಿಗಾರ್, ಪ್ರೊ.ಬಸವರಾಜ ಕೋಡಗುಂಟಿ, ಡಾ. ಎಲ್.ಆರ್. ಪ್ರೇಮ್ಕುಮಾರ್, ಪ್ರೊ. ಎನ್.ಎಂ. ತಳವಾರ ಇದ್ದರು. 
ಮೈಸೂರು

ಕನ್ನಡದ ಮಹತ್ವ ಇನ್ನಷ್ಟು ತಿಳಿಯಲು ಸಂಶೋಧನೆ ಅಗತ್ಯ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಸಂಶೋಧನೆಗಳು ಹೆಚ್ಚು ನಡೆದಾಗ ಕನ್ನಡದ ಭಾಷೆಯ ಮಹತ್ವ ಇನ್ನಷ್ಟು ತಿಳಿಯಬಹುದು
  • ಪ್ರಾಚೀನ ಕರ್ನಾಟಕವು ನೆರೆ ರಾಜ್ಯಗಳೊಂದಿಗೆ ಹೊಂದಿದ್ದ ಸಾಂಸ್ಕೃತಿಕ ಸಂಬಂಧ, ಕಲೆ, ವಾಸ್ತುಶಿಲ್ಪ ಹಾಗೂ ಪ್ರಾಂತ್ಯಗಳ ವಿಚಾರಗಳನ್ನು ಅರ್ಥೈಸಿಕೊಳ್ಳಲು ಶಾಸನಗಳು ಅಗತ್ಯ

ಮೈಸೂರು:

ಬೇರೆ ಭಾಷೆಗಳ ಲಿಪಿಯ ಜತೆಗೆ ಕನ್ನಡ ಲಿಪಿ ಯಾವ ರೀತಿಯ ಬಾಂಧವ್ಯ ಸಾಧಿಸಿದೆ ಎಂಬುದನ್ನು ತಿಳಿಯಲು ಇನ್ನಷ್ಟು ತೌಲನಿಕ ಹೆಚ್ಚು ಅಧ್ಯಯನ ನಡೆಯಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಹೇಳಿದರು.

ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್), ಉನ್ನತ ಶಿಕ್ಷಣ ಇಲಾಖೆಯ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಿಂದ ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ‘ಕನ್ನಡ ನಾಡು ಮತ್ತು ಹೊರನಾಡಿನ ಕನ್ನಡ ಶಾಸನಗಳು’ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಲಿಪಿಯ ಬೆಳವಣಿಗೆ ಅದರ ಸ್ವರೂಪ ಬೇರೆ ಭಾಷೆಗಳಲ್ಲಿ ಯಾವ ರೀತಿ ಇದ್ದು, ಆ ಭಾಷೆಯ ಬೆಳವಣಿಗೆಗೆ ಹೇಗೆ ಸಹಕಾರಿ ಆಗಿದೆ ಎನ್ನುವುದನ್ನು ಶಾಸನಗಳ ತೌಲನಿಕ ಅಧ್ಯಯದಿಂದ ನಮಗೆ ತಿಳಿಯುತ್ತದೆ. ಆದ್ದರಿಂದ ಈ ಕುರಿತ ಸಂಶೋಧನೆಗಳು ಹೆಚ್ಚು ನಡೆದಾಗ ಕನ್ನಡದ ಭಾಷೆಯ ಮಹತ್ವ ಇನ್ನಷ್ಟು ತಿಳಿಯಬಹುದು ಎಂದು ಹೇಳಿದರು.
ವಿದ್ಯಾಭ್ಯಾಸದಲ್ಲಿ ಕರ್ನಾಟಕ ಉಚ್ಚಾಯ ಸ್ಥಿತಿಯಲ್ಲಿತ್ತು. ಈಗಿನ ವಿಶ್ವವಿದ್ಯಾಲಯಗಳ ರೀತಿಯಲ್ಲೇ 9ನೇ ಶತಮಾನದಲ್ಲಿ ಘಟಿಕಾಸ್ಥಾನಗಳು ಬಳಕೆಯಲ್ಲಿತ್ತು. ಪ್ರಾಚೀನ ಕರ್ನಾಟಕವು ನೆರೆ ರಾಜ್ಯಗಳೊಂದಿಗೆ ಹೊಂದಿದ್ದ ಸಾಂಸ್ಕೃತಿಕ ಸಂಬಂಧ, ಕಲೆ, ವಾಸ್ತುಶಿಲ್ಪ ಹಾಗೂ ಪ್ರಾಂತ್ಯಗಳ ವಿಚಾರಗಳನ್ನು ಅರ್ಥೈಸಿಕೊಳ್ಳಲು ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಶಾಸನಗಳು ಅತ್ಯಂತ ಮಹತ್ವಪೂರ್ಣವಾಗಿವೆ ಎಂದರು.
ನಾಡಿನಲ್ಲಿ ದೊರೆಯುವ ಬಹುತೇಕ ಶಾಸನಗಳು ದಾನ ಶಾಸನಗಳಾಗಿವೆ. ದಾನ ಎಂಬುದು ಕೇವಲ ಶಾಸ್ತ್ರಕ್ಕಾಗಿ ಅಲ್ಲದೆ, ಅಶಕ್ತ ಜನರನ್ನು ಕೈಹಿಡಿದು ಎತ್ತಿದ ವಿಚಾರಕ್ಕೆ ಶಾಸನಗಳು ಪುರಾವೆ ಒದಗಿಸುತ್ತವೆ. ಇಂತಹ ದಾನ ಶಾಸನಗಳು ಹೊರರಾಜ್ಯಗಳಲ್ಲಿಯೂ ಇವೆಯೇ ಎಂಬುದನ್ನು ಕೂಲಂಕಷವಾಗಿ ಅಧ್ಯಯನ ಮಾಡಬೇಕಿದೆ ಎಂದು ಸಲಹೆ ನೀಡಿದರು.
ತಮಿಳುನಾಡಿನ ಧಾರ್ಮಿಕ ಸಂಘರ್ಷಗಳೊಂದಿಗೆ ಕರ್ನಾಟಕದ ಸಂಘರ್ಷಗಳನ್ನು ತುಲನೆ ಮಾಡಿ ನೋಡಬಹುದಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದ ಪ್ರಮುಖ ಶಾಸನ ತಜ್ಞರನ್ನು ಒಂದೆಡೆ ಸೇರಿಸಿ ಹೊಸ ಸಂಶೋಧನೆಗೆ ಈ ಕೇಂದ್ರ ಮುನ್ನುಡಿ ಬರೆದಿದೆ ಎಂದು ಶ್ಲಾಘಿಸಿದರು.
ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶ್ರೀನಿವಾಸ ಪಾಡಿಗಾರ್ ಮಾತನಾಡಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಈಗಾಗಲೇ ಪ್ರಕಟಿಸಿರುವ ಆಂಧ್ರಪ್ರದೇಶದ ಕನ್ನಡ ಶಾಸನಗಳು ಸಂಪುಟಗಳಲ್ಲಿ ಕೆಲವು ದೋಷಗಳಿದ್ದು, ಅವುಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಆಂಧ್ರಪ್ರದೇಶದ ಆಲಂಪುರದ ಕೂಡವೇಲಿ ಸಂಗಮೇಶ್ವರ ದೇವಾಲಯದ ಶ್ರೀ ಉತ್ಪಾತಿ ಪಿಡುಗು ಶಾಸನಗಳು, ಬೀದರಿನ ಜಲಸಂಗಿ ಕಲ್ಲೇಶ್ವರ ದೇವಾಲಯ, ಮಹಾರಾಷ್ಟ್ರದ ಧರ್ಮಪುರಿ ಕೇದಾರೇಶ್ವರ ದೇವಾಲಯ ಹಾಗೂ ಕಂಚಿಯ ಕೈಲಾಸನಾಥ ದೇವಾಲಯಗಳಲ್ಲಿನ ಶಾಸನಗಳನ್ನು ಪ್ರದರ್ಶಿಸಿದರು.
ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಬಸವರಾಜ ಕೋಡಗುಂಟಿ ಮಾತನಾಡಿ, ಕಾರ್ಯಾಗಾರವು ಶಿಕ್ಷಕರು ಹಾಗೂ ಸಂಶೋಧಕರಿಗೆ ಹೆಚ್ಚಿನ ತಿಳಿವಳಿಕೆ ನೀಡಲಿದೆ. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಶಾಸನಗಳ ಅಧ್ಯಯನ ಕಡಿಮೆಯಿದ್ದು, 8ನೇ ಶತಮಾನದ ರಾಷ್ಟ್ರಕೂಟರ ಶಾಸನದಲ್ಲಿ ಸಮಯದ ಉಲ್ಲೇಖವಿರುವುದನ್ನು ಕಾಣಬಹುದು. ಶಾಸನಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಗ್ರಹಿಸುವ ಕೆಲಸವಾಗಬೇಕಿದೆ ಎಂದರು.
ಕನ್ನಡ ವ್ಯಾಕರಣವು ಸಂಸ್ಕೃತವನ್ನು ಅವಲಂಬಿಸಿದೆ ಎಂಬುದು ತಪ್ಪು ಗ್ರಹಿಕೆ. ಕದಂಬರ ಶಾಸನಗಳಲ್ಲಿ ವ್ಯಾಕರಣವನ್ನು ಅತ್ಯಂತ ವೈಜ್ಞಾನಿಕವಾಗಿ ಮತ್ತು ಕ್ರಮಬದ್ಧವಾಗಿ ಬಳಸಲಾಗಿದೆ. ಅಶೋಕನ ಶಾಸನಗಳು ಪ್ರಕಟವಾದ ಸನ್ನತಿ ಮತ್ತು ಕನಗನಹಳ್ಳಿ ಭಾಗದ ಜನರೇ ನಿಜವಾದ ಕನ್ನಡ ಲಿಪಿ ಸಂಯೋಜನೆ ಮಾಡಿದ್ದಾರೆ. ಪ್ರಸ್ತುತ ಧರ್ಮ ಎಂಬ ಅಂತರ್ಜಾಲದ ಮೂಲಕ ವಿದೇಶಿಯರು ದಕ್ಷಿಣ ಭಾರತದ ಶಾಸನಗಳನ್ನು ಡಿಜಿಟಲೀಕರಣಗೊಳಿಸುತ್ತಿದ್ದು, ಈ ನಿಟ್ಟಿನಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವೂ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಶಾಸ್ತ್ರೀಯ ಭಾಷೆಗಳ ಸಂಯೋಜಕ ಡಾ. ಎಲ್.ಆರ್.ಪ್ರೇಮ್ಕುಮಾರ್ ಮಾತನಾಡಿ, ಸಾವಿರಾರು ವರ್ಷಗಳ ಲಿಖಿತ ಇತಿಹಾಸವಿರುವ ಕನ್ನಡದ ಚರಿತ್ರೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಕಟ್ಟಿಕೊಡುವಲ್ಲಿ ಶಾಸನಗಳ ಪಾತ್ರ ಹಿರಿದಾಗಿದೆ. ಕ್ರಿ.ಶ. 450ರ ಹಲ್ಮಿಡಿ ಶಾಸನದಿಂದ ಹಿಡಿದು ತಾಳಗುಂದ, ಬಾದಾಮಿ, ಆತಕೂರು ಮತ್ತು ದೇಕಬ್ಬೆಯ ಶಾಸನಗಳವರೆಗೆ ಕನ್ನಡದ ಲಿಪಿ, ಭಾಷೆ ಹಾಗೂ ಕಾವ್ಯಬಂಧದ ವಿಕಾಸವನ್ನು ಕಾಣಬಹುದು ಎಂದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ಎನ್.ಎಂ. ತಳವಾರ, ಶಾಸ್ತ್ರೀಯ ಕನ್ನಡ ಸಂಸ್ಥೆಯ ಸಿಬ್ಬಂದಿ, ಶಾಸನಾಭ್ಯಾಸಕ್ತರು, ವಿದ್ವಾಂಸರು ಇದ್ದರು.