ಹೊಸ ಸಂಶೋಧನೆಗಳು, ಆವಿಷ್ಕಾರಗಳು ಹೊಸತನದಿಂದ ಕೂಡಿರಬೇಕು. ಬೌದ್ಧಿಕ ಸ್ವಾಮ್ಯ ಹಕ್ಕನ್ನು ಪಡೆದುಕೊಳ್ಳುವಂತೆ ಇರಬೇಕು ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಎಚ್.ಬಸವನಗೌಡಪ್ಪ ಅಭಿಪ್ರಾಯಪಟ್ಟರು.
ನಗರದ ಬನ್ನಿಮಂಟಪದಲ್ಲಿರುವ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಜೆಎಸ್‌ಎಸ್ ಎಎಚ್‌ಇಆರ್‌ನ ಐಪಿಆರ್ ಸೆಲ್, ಜೆಎಸ್‌ಎಸ್ ಎಸ್‌ಟಿಯುನ ಐಪಿಎಂ ಸೆಲ್ ಹಾಗೂ ಕೆಎಸ್‌ಸಿಎಸ್‌ಟಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಇನೋವೆಷನ್ ಟೂ ಟೆಕ್ನಾಲಜಿ ಟ್ರಾನ್ಸಫರ್: ಪೇಟೆಂಟ್ ಟೂ ಪ್ರಾಡಕ್ಟ್ ಮತ್ತು ಐಪಿಆರ್ ಜಾಗೃತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಧನೆಗೆ ನಿಷ್ಠೆ, ಪರಿಶ್ರಮ ಮತ್ತು ಸಕಾರಾತ್ಮಕ ಮನೋಭಾವ ಅಗತ್ಯ. ಸಾಧಿಸುವ ಸಮಯದಲ್ಲಿ ವಿಫಲತೆಗಳು ಉಂಟಾಗುತ್ತವೆ. ಆದರೆ, ಅವುಗಳನ್ನೇ ಅನುಭವದ ಪಾಠವಾಗಿಸಿಕೊಂಡು ಯಶಸ್ಸಿನ ಮೆಟ್ಟಿಲನ್ನು ಏರಬೇಕು. ಅನೇಕ ಸಲ ಗುರಿ ಮಟ್ಟಲು ಆಗದೇ ಇರಬಹುದು. ಆದರೆ, ಗುರಿ ಮುಟ್ಟುವವರೆಗೂ ವಿರಮಿಸಿದೆ ಹಿಡಿದ ಕೆಲಸವನ್ನು ಮುಗಿಸಬೇಕು ಎಂದರು.
ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ಕೈಗೊಳ್ಳುವ ಸಂಶೋಧನೆಗಳು ಹಾಗೂ ಆವಿಷ್ಕಾರಗಳು ಸಮಾಜಮುಖಿಯಾಗಿರುವುದು ಅವಶ್ಯವಾಗಿದೆ. ಸಂಶೋಧಕರು ಹಾಗೂ ಹೊಸತನ್ನು ಕಂಡು ಹಿಡಿಯುವವರು ತಮ್ಮ ಪ್ರಬಂಧಗಳನ್ನು ಹಾಗೂ ಸಂಶೋಧನಾ ವರದಿಗಳನ್ನು ಜಗತ್ತಿನ ಅತ್ಯುತ್ತಮ ಜರ್ನಲ್‌ಗಳಲ್ಲಿ ಪ್ರಕಟಿಸಿದರೂ, ಅದು ಮಾನವನ ಜೀವನೋಪಾಯವನ್ನು ಸುಧಾರಿಸದಿದ್ದರೆ ಹಾಗೂ ಭೂಮಿಯ ಮೇಲೆ ಇರುವ ಸಕಲ ಜೀವಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸದಿದ್ದರೆ, ಸಂಶೋಧನೆಗಳಿಗೆ ಅರ್ಥವೇ ಇರುವುದಿಲ್ಲ. ಆದ್ದರಿಂದ ಸಮಾಜಮುಖಿಯಾಗಿ, ಸಮಾಜಕ್ಕೆ ಉಪಯೋಗವಾಗುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಜೆಎಸ್‌ಎಸ್-ಎಎಚ್‌ಇಆರ್‌ನ ಡೀನ್ (ರಿಸರ್ಚ್) ಡಾ.ಪ್ರಶಾಂತ ವಿಶ್ವನಾಥ್, ಡೆಪ್ಯೂಟಿ ಡೀನ್ ಡಾ.ಬಾಲಮುರಳೀಧರ, ಐಪಿಎಂ ಮುಖ್ಯ ಸಂಯೋಜಕಿ ಡಾ.ಎಚ್.ಆರ್.ಚನ್ನಮ್ಮ ಇದ್ದರು.