ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿಯನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ವಿವಿಧ ಬಡಾವಣೆ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜೆ.ಮಹೇಶ್, ಪ್ರವೀಣ್, ನಾಗರಾಜು, ಮಲ್ಲಿಕಾರ್ಜುನಸ್ವಾಮಿ, ಜಗದೀಶ್, ಗಣೇಶ್ ಇತರರು ಇದ್ದರು.
- ಒಂದು ವರ್ಷದ ಹಿಂದೆ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಎಂದು ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆದು ಬಾಡಿಗೆಯನ್ನೂ ಪಾವತಿಸಲಾಗುತ್ತಿದೆ
- ರಮ್ಮನಹಳ್ಳಿಯಲ್ಲಿರುವ ಕಟ್ಟಡ ದೂರವಿದ್ದು, ಮೂಲ ಸೌಲಭ್ಯಗಳಿಲ್ಲ
ಮೈಸೂರು:ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಕಾರ್ಯಾಲಯವನ್ನು ಮಾನಸಿನಗರದಲ್ಲಿ ಈಗಾಗಲೇ ಬಾಡಿಗೆ ಪಡೆದಿರುವ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿದ ವಿವಿಧ ಬಡಾವಣೆಗಳ ನಿವಾಸಿಗಳು, ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಮಾನಸಿನಗರದ ನಂದಿನಿ ಲೇಔಟ್‌ನಲ್ಲಿ ಒಂದು ವರ್ಷದ ಹಿಂದೆ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಎಂದು ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆದು ಬಾಡಿಗೆಯನ್ನೂ ಪಾವತಿಸಲಾಗುತ್ತಿದೆ. ಆದರೆ ಇನ್ನೂ ರಮ್ಮನಹಳ್ಳಿಯ ಹಳೇ ಕಟ್ಟಡದಲ್ಲೇ ಕಚೇರಿ ಕೆಲಸ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರನ್ನು ಭೇಟಿ ಮಾಡಿದ ನಿವಾಸಿಗಳು ದೂರಿದರು.
ರಮ್ಮನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಇದ್ದ ಕಟ್ಟಡವನ್ನೇ ಪಟ್ಟಣ ಪಂಚಾಯಿತಿ ಕಾರ್ಯಾಲಯವನ್ನಾಗಿ ಬಳಸಲಾಗುತ್ತಿದೆ. ಅದು ಅತ್ಯಂತ ಕಿರಿದಾಗಿದ್ದು, ಜನರು ಬಂದು ಹೋಗಲು, ಸಿಬ್ಬಂದಿ ಕಾರ್ಯನಿರ್ವಹಿಸಲು ತೊಡಲಾಗುತ್ತಿದೆ. ಅಲ್ಲದೆ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳಿಗೆ ಈಗ ಇರುವ ಕಟ್ಟಡ ದೂರವಾಗಿದೆ ಎಂದು ಹೇಳಿದರು.
ಬಾಡಿಗೆ ಪಡೆದಿರುವುದರಿಂದ ಇಲ್ಲಿ ಕಾರ್ಯನಿರ್ವಹಣೆ ಮಾಡದಿದ್ದರೂ ಸುಮ್ಮನೆ ಬಾಡಿಗೆ ಪಾವತಿ ಮಾಡಿದಂತಾಗುತ್ತಿದೆ. ಹಾಗಾಗಿ ಸಂಬಂಧಪಟ್ಟವರು ರಮ್ಮನಹಳ್ಳಿಯಲ್ಲಿ ನಡೆಯುತ್ತಿರುವ ಕಾರ್ಯಾಲಯವನ್ನು ಮಾನಸಿನಗರದಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು ಎಂದು ನಿವಾಸಿಗಳ ಆಗ್ರಹಿಸಿದರು.
ನಿವಾಸಿಗಳಾದ ಜೆ.ಮಹೇಶ್, ಪ್ರವೀಣ್, ನಾಗರಾಜು, ಮಲ್ಲಿಕಾರ್ಜುನಸ್ವಾಮಿ, ಜಗದೀಶ್, ಗಣೇಶ್ ಇತರರು ಇದ್ದರು.