ವಿಸಿ ನಾಲೆಯ ತುರಗನೂರು ಶಾಖೆಗೆ ನೀರು ಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
- ಕರ್ನಾಟಕ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಕೆ
ಬನ್ನೂರು: ರೈತರು ವಿವಿಧ ಬಗೆಯ ಬೆಳೆ ಬೆಳೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಸಚಿವ ಚಲುವರಾಯಸ್ವಾಮಿ ಅವರು ವಿಸಿ ನಾಲೆಗಳಿಗೆ ನೀರು ಬಿಡುವುದಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದು ವಿಸಿ ನಾಲೆ ವ್ಯಾಪ್ತಿಯಲ್ಲಿ ಬನ್ನೂರು ಸಮೀಪದ ತುರಗನೂರು ಶಾಖೆ ಹಾಗೂ ಹೆಬ್ಬಕವಾಡಿ ಶಾಖೆಗಳು ಬರುವುದರಿಂದ ನೀರು ಬಿಡದೆ ಇದ್ದರೆ ಬಹಳಷ್ಟು ಅನನುಕೂಲವಾಗುತ್ತದೆ. ಇದರಿಂದ ಸರ್ಕಾರ ಈ ಭಾಗದ ನಾಲೆಗಳಿಗೆ ನೀರು ಬಿಡಲು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಸಲ್ಲಿಸಿದರು.
ತುರಗನೂರು ಶಾಖೆಯಲ್ಲಿ ನಾಲೆಯ ನೀರನ್ನೇ ಆಧರಿಸಿ ರೈತರು ಬೆಳೆಯನ್ನು ಬೆಳೆಯುವ ಪದ್ಧತಿ ಇದೆ. ನೀರು ಬಾರದೆ ಇದ್ದಲ್ಲಿ ಈ ಭಾಗದ ಸಾವಿರಾರು ಎಕರೆ ಪ್ರದೇಶಗಳು ಬರಡು ಭೂಮಿಯಾಗಲಿದೆ. ನೀರು ಬಿಡದೆ ಇದ್ದಲ್ಲಿ ರೈತರಿಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ಕಾರ್ಯವನ್ನು ಸರ್ಕಾರ ಮಾಡಲಿ ಎಂದು ಸರ್ಕಾರಕ್ಕೆ ರೈತರ ಪರವಾಗಿ ಎಚ್ಚರಿಕೆಯನ್ನು ನೀಡಿದರು.
ಜತೆಗೆ ಮೈಷುಗರ್ ಸಕ್ಕರೆ ಕಾರ್ಖಾನೆಯಿಂದ 203 ಕಬ್ಬು ಪೂರೈಸಿದ ರೈತರಿಗೆ ಇನ್ನೂ ಹಣವನ್ನು ಸಂದಾಯ ಮಾಡದೇ ಇರುವುದರಿಂದ ರೈತರಿಗೆ ಆರ್ಥಿಕ ದುಸ್ಥಿತಿ ತಲೆದೋರುತ್ತಿದೆ. ಕೂಡಲೇ ರೈತರಿಗೆ ಬಾಕಿ ಇರಿಸಿಕೊಂಡಿರುವ ಸುಮಾರು ಎರಡೂವರೆ ಕೋಟಿ ರೂ. ಹಣವನ್ನು ಪಾವತಿಸುವಂತೆ ಮಾಡಬೇಕೆಂದು ಅವರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮೂಲಸಂಘಟನೆಯ ಜಿಲ್ಲಾಧ್ಯಕ್ಷ ಹಿಂಡುವಾಳು ಚಂದ್ರಶೇಖರ್, ಶಿವಳ್ಳಿ ಚಂದ್ರು, ಬೂರನೂರು ಪುಟ್ಟಸ್ವಾಮಿ, ಸೋಶಿ ಪ್ರಕಾಶ್, ಪ್ರಭುಲಿಂಗ, ಮಂಜೇಶ್‌ಗೌಡ, ಹೇಮಂತ್, ಮಾದೇವ, ಶಿವರಾಂ, ಬಸವರಾಜ್, ಮಹೇಂದ್ರ, ತಮ್ಮಯ್ಯ ಸೇರಿದಂತೆ ಪ್ರಮುಖ ರೈತ ಮುಖಂಡರು ಇದ್ದರು.