- ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಗ್ರಹ
ಮೈಸೂರು: ಮನಮೋಹನ್ ಸಿಂಗ್ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆ ಬಡಜನರಿಗೆ ಉದ್ಯೋಗ ಖಾತ್ರಿ ನೀಡಿತ್ತು. ಅದನ್ನು ತಿದ್ದುಪಡಿ ಮಾಡಿರುವ ವಿಕಸಿತ ಭಾರತ್ ಗ್ರಾಮ ಕಾಯ್ದೆ ಕರಾಳ ಶಾಸನವಾಗಿದೆ. ಬಡವರು, ಕಾರ್ಮಿಕ ವಿರೋಧಿಯಾದ ಈ ಕಾಯ್ದೆಯನ್ನು ರದ್ದು ಮಾಡುವಂತೆ ಆಗ್ರಹಿಸಿ ಹೋರಾಟ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ಮಹಾತ್ಮ ಗಾಂಧೀಜಿ ಹೆಸರನ್ನು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಅವಮಾನ ಮಾಡಿದೆ. ಕೇಂದ್ರದ ಎನ್‌ಡಿಎ ಸರ್ಕಾರ ಅನೇಕ ಹೆಸರುಗಳನ್ನು ಬದಲಾವಣೆ ಮಾಡುತ್ತಿದೆ. ಆದರೆ, ದೇಶದ ಅಭಿವೃದ್ಧಿ, ಜನರ ಸ್ಥಿತಿ ಹಾಗೆಯೇ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ನರೇಗಾ ಯೋಜನೆ ಮಹಾತ್ಮ ಗಾಂಧೀಜಿಯ ಅಂತ್ಯೋದಯ ಮತ್ತು ಸ್ವರಾಜ್ ಆಶಯವನ್ನು ಒಳಗೊಂಡಿತ್ತು. ನರೇಗಾ ತಿದ್ದುಪಡಿ ದುಡಿಯುವ ಹಕ್ಕು, ರಾಜಕೀಯ, ಆರ್ಥಿಕ ಮತ್ತು ಸಂವಿಧಾನ ಹಕ್ಕನ್ನು ಉಲ್ಲಂಘನೆ ಮಾಡುತ್ತದೆ. ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸದೆ ತರಾತುರಿಯಲ್ಲಿ ಕಾಯ್ದೆ ತಂದಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ. ಈ ಕಾಯ್ದೆ ದುಡಿಯುವ ಹಕ್ಕಿಗೆ ಮಾರಕವಾಗಿದೆ ಎಂದರು.
ಪ್ರಧಾನಿ ಮೋದಿ ಅವರು ಕೋವಿಡ್ ಸಂಕಷ್ಟದ ಕಾಲದಲ್ಲಿ ದೀಪ ಹಚ್ಚಿ, ಜಾಗಟೆ ಬಡಿಯುವಂತೆ ಕರೆಕೊಟ್ಟರು. ಆದರೆ ನರೇಗಾ 19 ಕೋಟಿ ಜನರಿಗೆ ನೆರವಾಯಿತು. ದೇಶದಲ್ಲಿ 12 ಕೋಟಿ ಜನರು ಮತ್ತು ರಾಜ್ಯದಲ್ಲಿ 70 ಲಕ್ಷ ಜನರು ಅವಲಂಬಿತರಿದ್ದಾರೆ. ನರೇಗಾ ಉದ್ಯೋಗವನ್ನು ಅವಲಂಬಿಸಿರುವ 7 ಸಾವಿರ ನೌಕರು ಬೀದಿ ಪಾಲಾಗುತ್ತಾರೆ ಎಂದು ಆರೋಪಿಸಿದರು.
ಹೊಸ ಕಾಯ್ದೆಯಿಂದ ಗ್ರಾಮ ಸಭೆ, ಪಂಚಾಯಿತಿ ಅಧಿಕಾರ ಮೊಟಕು ಮಾಡಲಾಗಿದೆ. ದನದ ಕೊಟ್ಟಿಗೆ, ಹೊಲದ ರಸ್ತೆ ನಿರ್ಮಾಣ ಸೇರಿದಂತೆ ಯಾವುದಕ್ಕೂ ಅವಕಾಶ ಇಲ್ಲವಾಗಿದೆ. ದೇಶದ ಜನಪರವಾದ ಯೋಜನೆಯನ್ನು ನಾಶ ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದನ್ನು ಖಂಡಿಸಿ ರಾಜ್ಯದ ಮೂಲೆಮೂಲೆಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.
ನರೇಗಾ ಯೋಜನೆ ಮರುಜಾರಿಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು, ಪಂಚಾಯಿತಿಗಳ ಸ್ವಯಂ ಆಡಳಿತದ ಹಕ್ಕನ್ನು ಮರು ಸ್ಥಾಪಿಸಬೇಕು. 400 ರೂ.ಗಳ ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಖಾಸಗಿ ಸಂಸ್ಥೆಯಲ್ಲಿ ಮೀಸಲಾತಿ ಕೊಡುವುದಕ್ಕೆ ಉದ್ಯಮಿ ಕಿರಣ್ ಮಜುಂದಾರ್ ವಿರೋಧಕ್ಕೆ ಪ್ರತಿಕ್ರಿಯಿಸಿದ ಅವರು, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು. ನಾವು ಭೂಮಿ, ನೀರು ಎಲ್ಲವನ್ನೂ ಕೊಡುತ್ತೇವೆ. ಮುಂದುವರೆದರೆ ಹೇಗೆ ಉತ್ತರ ಕೊಡಬೇಕೋ ಆ ರೀತಿ ಕೊಡುತ್ತೇವೆ. ಅವರು ಸರ್ಕಾರದ ಸೌಲಭ್ಯಗಳನ್ನು ಪಡೆದವರು. ನಿಯಮಗಳಿಗೂ ಬದ್ಧರಾಗಿರಬೇಕಾಗುತ್ತದೆ. ಕೊಡದಿದ್ದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮುಖಂಡರಾದ ಭಾಸ್ಕರ್‌ಗೌಡ, ಸೋಮಶೇಖರ್, ಕೆ. ಮಹೇಶ್ ಸುದ್ದಿಗೋಷ್ಠಿಯಲ್ಲಿದ್ದರು.