- ಮೂಲಸೌಕರ್ಯಗಳಿಲ್ಲದೆ ಪರದಾಟ
- ಕ್ರೀಡಾ ಚಟುವಟಿಕೆಗಳಿಗೆ ಸಿಗದ ಸ್ಥಳಾವಕಾಶ
ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
‘ಎಜುಕೇಷನ್ ಹಬ್’ ಆಗಿರುವ ಮೈಸೂರು ಜಿಲ್ಲೆಯಲ್ಲಿ ಬಹಳಷ್ಟು ಸರ್ಕಾರಿ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡವಿಲ್ಲ. ಹೀಗಾಗಿ, ಇವುಗಳಿಗೆ ಬಾಡಿಗೆ ಕಟ್ಟಡಗಳೇ ಗತಿಯಾಗಿದ್ದು ಮೂಲಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಸ್ಥಳಾವಕಾಶದ ಕೊರತೆ, ಕಳಪೆ ನಿರ್ವಹಣೆ, ಅಗತ್ಯ ಮೂಲಸೌಲಭ್ಯಗಳ ಸಮಸ್ಯೆಗಳಿಂದ ವಿದ್ಯಾರ್ಥಿನಿಲಯಗಳು ಬಳಲುತ್ತಿವೆ. ಇದರ ನೇರ ಪರಿಣಾಮ ವಿದ್ಯಾರ್ಥಿಗಳ ಮೇಲಾಗುತ್ತಿದೆ. ಶಿಕ್ಷಣವು ಮೈಸೂರಿನ ಸಾಂಸ್ಕೃತಿಕ ಪರಂಪರೆಯ ಬೆನ್ನೆಲುಬು. ಮಹಾರಾಜರ ಕಾಲದಿಂದಲೂ ಗುಣಮಟ್ಟದ ಶಿಕ್ಷಣ, ಕೈಗೆಟುಕುವ ಜೀವನ ವೆಚ್ಚ, ಆಹ್ಲಾದಕರ ವಾತಾವರಣದಿಂದಾಗಿ ಇದು ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮಿದೆ.
ಅತ್ಯುತ್ತಮ ಮೂಲಸೌಕರ್ಯ, ಹಸಿರು ಪರಿಸರ, ಸುರಕ್ಷಿತ ವಾತಾವರಣ ಹೊಂದಿರುವ ಮೈಸೂರು, ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅತ್ಯಂತ ಸೂಕ್ತವಾಗಿದ್ದು, ಇಲ್ಲಿ ಶಿಕ್ಷಣವು ಕೇವಲ ಪದವಿ ಗಳಿಕೆಯಲ್ಲ, ಬದಲಿಗೆ ಸಮಗ್ರ ವ್ಯಕ್ತಿತ್ವ ವಿಕಸನ, ಜಾಗತಿಕ ಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
ಈ ಕಾರಣಕ್ಕೆ ವಿವಿಧೆಡೆಯಿಂದ ಇಲ್ಲಿಗೆ ಕಲಿಯಲು ವಿದ್ಯಾರ್ಥಿಗಳು ದೌಡಾಯಿಸುತ್ತಾರೆ. ಪ್ರಾಥಮಿಕದಿಂದ ಉನ್ನತ ಶಿಕ್ಷಣವೂ ಇಲ್ಲಿಯೇ ದೊರೆಯುತ್ತದೆ. ಈ ಎಲ್ಲ ಕಾರಣಗಳಿಂದ ರಾಜ್ಯದಲ್ಲೇ ಮೈಸೂರು ಶಿಕ್ಷಣಕ್ಕೆ ನೆಚ್ಚಿನ ತಾಣವಾಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಹಾಸ್ಟೆಲ್‌ಗಳಿಲ್ಲ. ಇವುಗಳಲ್ಲಿ ಬಹಳಷ್ಟು ಬಾಡಿಕೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಾಡಿಗೆ ಅವಧಿ ಮುಗಿಯುತ್ತಿದ್ದಂತೆ ಪ್ರತಿವರ್ಷ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರ ಮಾಮೂಲಿ ಎಂಬಂತಾಗಿದೆ. ಗಂಟು ಮೂಟೆಯೊಂದಿಗೆ ಸ್ಥಳಾಂತರವಾಗುವುದು ವಿದ್ಯಾರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಸ್ವಂತ ಸೂರಿಲ್ಲ:
ಜಿಲ್ಲೆಯಲ್ಲಿ 193 ಸರ್ಕಾರಿ ಹಾಸ್ಟೆಲ್‌ಗಳಿವೆ. ಈ ಪೈಕಿ 138 ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡದ ಭಾಗ್ಯ ಕಲ್ಪಿಸಿಕೊಡಲಾಗಿದೆ. 55 ವಿದ್ಯಾರ್ಥಿಗಳು ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿವೆ. ಇದರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನ ಇರುವ ವಿದ್ಯಾರ್ಥಿ ವಸತಿನಿಲಯಗಳಿಗೆ ಶಾಶ್ವತ ಸೂರಿಲ್ಲ. ಬಹುತೇಕ ಹಾಸ್ಟೆಲ್‌ಗಳು ಅರೆಕಾಲಿಕ ಕಟ್ಟಡದಲ್ಲೇ ನಡೆಯುತ್ತಿವೆ. ಜಿಲ್ಲಾದ್ಯಂತ ಬಿಸಿಎಂ ಹಾಸ್ಟೆಲ್‌ಗಳ ಸಂಖ್ಯೆ 108.
ಈ ಪೈಕಿ 49 ಬಾಲಕರ, 14 ಬಾಲಕಿಯರ ಹಾಸ್ಟೆಲ್‌ಗಳು ಸೇರಿದಂತೆ 63 ವಿದ್ಯಾರ್ಥಿನಿಲಯಗಳಿಗೆ ಶಾಶ್ವತ ಸೂರಿದೆ. ಈ ಪೈಕಿ ಮೈಸೂರು, ಪಿರಿಯಾಪಟ್ಟಣದಲ್ಲಿ ತಲಾ ಒಂದು ಹಾಸ್ಟೆಲ್‌ಗಳು ಉಚಿತ ಕಟ್ಟಡದಲ್ಲಿ ನಡೆಯುತ್ತಿವೆ. ಇದಕ್ಕೆ ಬಾಡಿಗೆ ನೀಡುತ್ತಿಲ್ಲ. 21 ಬಾಲಕರ, 22 ಬಾಲಕಿಯರ ಹಾಸ್ಟೆಲ್ ಸೇರಿದಂತೆ 43 ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ.
ಸಮಾಜ ಕಲ್ಯಾಣ ಇಲಾಖೆ ಉತ್ತಮ:
ಬಿಸಿಎಂ ಹಾಸ್ಟೆಲ್‌ಗೆ ಹೋಲಿಕೆ ಮಾಡಿದರೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳು ಉತ್ತಮ ಸ್ಥಿತಿಯಲ್ಲಿವೆ. ಜಿಲ್ಲೆಯಲ್ಲಿರುವ ಈ ಇಲಾಖೆಯ ಅಧೀನದ 85 ಹಾಸ್ಟೆಲ್‌ಗಳ ಪೈಕಿ 73 ವಿದ್ಯಾರ್ಥಿನಿಲಯಗಳಿಗೆ ಶಾಶ್ವತ ಸೂರಿದೆ. 12 ಹಾಸ್ಟೆಲ್‌ಗಳು ಮಾತ್ರ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಈ ಪೈಕಿ 7 ವಿದ್ಯಾರ್ಥಿನಿಲಯಗಳಿಗೆ ಈಗಾಗಲೇ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 47.02 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲು ಮಂಜೂರಾತಿ ದೊರೆತಿದ್ದು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಉಳಿದ 5 ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಅಂದಾಜು 35 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದ್ದು, ಇದು ಸಹ ಸ್ವೀಕೃತವಾಗಿದೆ. ಪರಿಶೀಲನಾ ಹಂತದಲ್ಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಿತ್ಯ ಕಾಡುವ ಸಮಸ್ಯೆಗಳು:
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳನ್ನು ಅನೇಕ ಸಮಸ್ಯೆಗಳು ಕಾಡುತ್ತಿವೆ. ಮೊದಲಿಗೆ ಜಾಗದ ಕೊರತೆ, ಊಟ, ಓದು, ಕ್ರೀಡೆ, ಮಲಗುವುದು, ಗ್ರಂಥಾಲಯ ಚಟುವಟಿಕೆಗಳಿಗೆ ಕಷ್ಟ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳಲ್ಲಿ ಮೈದಾನ ಇಲ್ಲ. ಇನ್ನೂ ಹೊರಾಂಗಣ ಕ್ರೀಡೆಗಳು ದೂರ. ಒಳಾಂಗಣ ಕ್ರೀಡಾ ಚಟುವಟಿಕೆಗಳಿಗೆ ಕ್ರೀಡಾ ಸಾಮಗ್ರಿಗಳು ಇವೆಯಾದರೂ ಆಡಲು ಸ್ಥಳಾವಕಾಶದ ಕೊರತೆ ಇದೆ.
ಇನ್ನೂ ಓದುವುದು, ಬರೆಯುವುದು, ಮಲಗುವುದು, ಊಟ ಮಾಡುವುದು ಸಾಮಾನ್ಯವಾಗಿ ಒಂದೇ ಕಡೆ ನಡೆಯುತ್ತದೆ. ಇನ್ನೂ ಕೆಲ ಹಾಸ್ಟೆಲ್‌ಗಳಲ್ಲಿ ನೀರಿನ ಕೊರತೆ ಕಾಡುತ್ತಿದೆ. ಹೊಸ ನಿರ್ಮಾಣಕ್ಕೆ ಅವಕಾಶ ಇಲ್ಲಿಲ್ಲ. ಒಂದೊಮ್ಮೆ ಇದ್ದರೂ ಕಟ್ಟಡದ ಮಾಲೀಕರು ಸಾಮಾನ್ಯವಾಗಿ ಪರಿವರ್ತನೆಗೆ ಸಮ್ಮತಿ ಕೊಡಲ್ಲ. ಹೀಗಾಗಿ ಬಾಡಿಗೆಗೆ ಇರುವ ಕಟ್ಟಡದಲ್ಲಿ ಜಾಗದ ಕೊರತೆಯಿಂದ ಮಂಚಗಳನ್ನು ಹಾಕಿಲ್ಲ. ಮಕ್ಕಳು ಮಲಗಲು ಚಾಪೆ ಇಲ್ಲವೇ ಜಮಖಾನ ನೀಡಲಾಗಿದೆ.
ಓದು, ಬರೆದುಕೊಳ್ಳಲು ಪ್ರತ್ಯೇಕ ಟೇಬಲ್ ಅಳವಡಿಸಲಾಗದೆ ನೆಲದ ಮೇಲೆ ಕುಳಿತು ಎಲ್ಲ ಕಾರ್ಯಗಳನ್ನು ಮಾಡಬೇಕು. ಪ್ರತ್ಯೇಕ ಊಟದ ಸಭಾಂಗಣ ಇಲ್ಲ. ಇದರಿಂದಾಗಿ ಓದುವುದು, ಬರೆಯುವ ಜಾಗದಲ್ಲೇ ಊಟ ಮಾಡಿ ಮಲಗಬೇಕು. ಪುಸ್ತಕಗಳನ್ನು ಇಡಲು ಜಾಗ ಇಲ್ಲವಾದ್ದರಿಂದ ಪುಸ್ತಕಗಳನ್ನು ಹಾಸ್ಟೆಲ್‌ಗೆ ತರಲ್ಲ. ಇವೆಲ್ಲ ಚಟುವಟಿಕೆಗಳಿಗೆ ಜಾಗದ ಕೊರತೆ ಇರುವಾಗ ಇನ್ನು ಆಟಕ್ಕೆ ಎಲ್ಲಿಂದ ತರಬೇಕು ಮೈದಾನ. ಹೀಗಾಗಿ ಕ್ರೀಡಾ ಚಟುವಟಿಕೆಗಳ ಮಾತೇ ಇಲ್ಲ ಎಂದು ವಿದ್ಯಾರ್ಥಿಯೊಬ್ಬರು ವಿಜಯಾಣಿಯೊಂದಿಗೆ ಅಳಲು ತೋಡಿಕೊಂಡರು.
ಖಾಸಗಿ ಕಟ್ಟಡ ಮಾಲೀಕರು ತಮಗೆ ಇಷ್ಟ ಬಂದಂತೆ ಕಟ್ಟಿಸಿಕೊಂಡಿರುತ್ತಾರೆ. ಸಹಜವಾಗಿ ಇಂತಹ ಕಟ್ಟಡಗಳಲ್ಲಿ ಸ್ಥಳಾವಕಾಶ ಕಡಿಮೆ ಇರುತ್ತದೆ. ಸ್ವಂತ ಕಟ್ಟಡವಾದರೆ ಎಲ್ಲ ರೀತಿಯ ಸೌಲಭ್ಯ ದೊರೆಯುವಂತೆ ರೂಪಿಸಿಕೊಳ್ಳಬಹುದು. ಇದರಿಂದ ವಿದ್ಯಾರ್ಥಿಗಳು ಹೆಚ್ಚು ಅನುಕೂಲಕರ, ಆಹ್ಲಾದಕರ ವಾತಾವರಣ ಸಿಗುತ್ತದೆ ಎಂದು ಬಿಸಿಎಂ ಅಧಿಕಾರಿಯೊಬ್ಬರು ತಿಳಿಸಿದರು.
ಸಮಸ್ಯೆಗಳೇನು...?
*ಸೂಕ್ತ ಶೌಚಗೃಹಗಳು, ಸ್ನಾನದ ಗೃಹಗಳು, ಕುಡಿಯುವ ನೀರಿನ ವ್ಯವಸ್ಥೆಯ ಕೊರತೆ
*ಚಿಕ್ಕ ಕೊಠಡಿಗಳಲ್ಲಿ ಹೆಚ್ಚು ಜನರನ್ನು ಇರಿಸುವುದರಿಂದ ಕಿರಿಕಿರಿ
*ಕಟ್ಟಡದ ಹಳೇ ರಚನೆಯಿಂದಾಗಿ ಸೋರಿಕೆ, ಸ್ವಚ್ಛತೆಯ ಸಮಸ್ಯೆಗಳು ಹೆಚ್ಚು
*ಸರಿಯಾದ ಅಡುಗೆ ಕೋಣೆ ಇಲ್ಲದಿರುವುದು ಮತ್ತು ಗುಣಮಟ್ಟದ ಆಹಾರದ ಅಭಾವ
"
ಸ್ವಂತ ಕಟ್ಟಡ ಹೊಂದುವ ಕುರಿತು ಪ್ರಯತ್ನಗಳು ನಡೆದಿವೆ. ಈ ಸಲದ ಬಜೆಟ್‌ನಲ್ಲಿ 50 ಹೊಸ ಹಾಸ್ಟೆಲ್‌ಗಳು ಘೋಷಣೆಯಾಗಿವೆ. ಇದರಲ್ಲಿ ಮೈಸೂರು ಜಿಲ್ಲೆಗೂ ದೊರೆಯಲಿದ್ದು ಎಷ್ಟು ಹಾಸ್ಟೆಲ್‌ಗಳು ಎಂಬುದು ಇನ್ನೂ ನಿರ್ಧಾರವಾಗಿಲ್ಲ.
— ರಾಘವೇಂದ್ರ, ಉಪನಿರ್ದೇಶಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
"
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ 85 ಹಾಸ್ಟೆಲ್‌ಗಳ ಪೈಕಿ 12 ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. 7 ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಇನ್ನೂ 5 ಹಾಸ್ಟೆಲ್‌ಗಳ ಕಟ್ಟಡ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ.
— ರಂಗೇಗೌಡ, ಜಂಟಿ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ