ತಿ.ನರಸೀಪುರದ ಮಾರುಕಟ್ಟೆ ರಸ್ತೆಯಲ್ಲಿ ರಸ್ತೆ ಬದಿ ವ್ಯಾಪಾರ ತೆರವು ಕಾರ್ಯಾಚರಣೆ ಪೂರ್ವಭಾವಿಯಾಗಿ ಆಯೋಜಿಸಿದ್ದ ಸಭೆಯಲ್ಲಿ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್ ಮಾತನಾಡಿದರು. ಸಿ.ಪ್ರಕಾಶ್, ಧನಂಜಯ, ಕೆ.ಸಿ.ತ್ರಿವೇಣಿ, ನಳಿನಿ, ಚಂಪಶ್ರೀ ಇತರರು ಇದ್ದರು. 
ಮೈಸೂರು

ಸೌಕರ್ಯ ಕಲ್ಪಿಸಿ ರಸ್ತೆ ಬದಿ ವ್ಯಾಪಾರಸ್ಥರ ಸ್ಥಳಾಂತರ

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್ ಭರವಸೆ
  • ವ್ಯಾಪಾರಿಗಳು, ಆಟೋ ಚಾಲಕರ ಪೂರ್ವಭಾವಿ ಸಭೆ
ತಿ.ನರಸೀಪುರ: ಸರ್ಕಾರದ ಮಾರ್ಗಸೂಚಿಯಂತೆ ರಸ್ತೆ ಬದಿಯ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸದೆ ಸೂಕ್ತ ಸ್ಥಳಾವಕಾಶವನ್ನು ಕಲ್ಪಿಸಿ, ಮೂಲ ಸೌಕರ್ಯಗಳನ್ನು ಒದಗಿಸಿ ಸ್ಥಳಾಂತರಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್ ಭರವಸೆ ನೀಡಿದರು.
ರಸ್ತೆ ಬದಿ ವ್ಯಾಪಾರ ತೆರವು ಕಾರ್ಯಾಚರಣೆಯ ಪೂರ್ವಭಾವಿಯಾಗಿ ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಭಾನುವಾರ ಆಯೋಜಿಸಿದ್ದ ರಸ್ತೆ ಬದಿಯಲ್ಲಿನ ವ್ಯಾಪಾರಿಗಳು ಹಾಗೂ ಆಟೋ ಚಾಲಕರ ಸಭೆಯಲ್ಲಿ ಮಾತನಾಡಿ, ರಸ್ತೆ ಬದಿಯ ವ್ಯಾಪಾರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳಾಂತರಕ್ಕೆ ವ್ಯಾಪಾರಿಗಳೆಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.
ರಸ್ತೆ ಬದಿಯ ವ್ಯಾಪಾರ ವಾಹನಗಳ ಸಂಚಾರ ಹಾಗೂ ಜನರ ಓಡಾಟದ ರಸ್ತೆಯನ್ನು ಅತಿಕ್ರಮಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಎಲ್ಲೆಂದರಲ್ಲಿ ನಿಲ್ಲುತ್ತಿರುವ ಆಟೋಗಳು, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿರುವುದು ಸಂಚಾರ ಸಮಸ್ಯೆಯನ್ನು ಮತ್ತಷ್ಟು ಬಿಗಾಡಿಯಿಸುವಂತೆ ಮಾಡಿದೆ. ಹಾಗಾಗಿ ಮುಂದಿನ ಹದಿನೈದು ದಿನ ಇಲ್ಲವೆ ತಿಂಗಳೊಳಗೆ ರಸ್ತೆ ಬದಿಯ ವ್ಯಾಪಾರ ಸ್ಥಳಾಂತರಕ್ಕೆ ಸೂಕ್ತ ಸ್ಥಳ ಹಾಗೂ ಆಟೋಗಳ ನಿಲ್ದಾಣಕ್ಕೆ ಜಾಗವನ್ನು ಕಲ್ಪಿಸಿಕೊಡುತ್ತೇವೆ. ಅಲ್ಲಿಯವರೆಗೂ ರಸ್ತೆ ಬದಿ ವ್ಯಾಪಾರಿಗಳು ಹಾಗೂ ಆಟೋ ಚಾಲಕರು ಸುಗಮ ಸಂಚಾರಕ್ಕೆ ಸ್ವಯಂ ಪ್ರೇರಿತವಾಗಿ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇನ್‌ಸ್ಪೆಕ್ಟರ್ ಧನಂಜಯ ಮಾತನಾಡಿ, ರಸ್ತೆ ಬದಿಯ ವ್ಯಾಪಾರ ಹಾಗೂ ಸಂಚಾರ ನಿಯಮ ಉಲ್ಲಂಘಿಸುವ ಆಟೋಗಳ ಓಡಾಟದಿಂದ ನಿತ್ಯವೂ ಸಂಚಾರ ಸಮಸ್ಯೆ ತಲೆದೂರುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿವೆ. ವಿಧವೆ, ಅಂಗವಿಕಲರ ಜೀವನಕ್ಕೆ ರಸ್ತೆ ಬದಿ ವ್ಯಾಪಾರ ಅವಲಂಬಿಸಿದ್ದರೂ ಅವರಿಗೂ ಸೂಕ್ತವಾದ ಪರ್ಯಾಯ ಸ್ಥಳವನ್ನು ಪುರಸಭೆ ಕಲ್ಪಿಸಿ ಕೊಡಲಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಇದಕ್ಕೆ ರಸ್ತೆ ಬದಿಯ ವ್ಯಾಪಾರಿಗಳು ಹಾಗೂ ಪ್ರಯಾಣಿಕ ಆಟೋಗಳ ಚಾಲಕರೆ ಕಾರಣರಾಗಿದ್ದಾರೆ. ಆದ್ದರಿಂದ ರಸ್ತೆ ಬದಿ ವ್ಯಾಪಾರ ತೆರವು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ವ್ಯಾಪಾರಿ ರಾಜು ಮಾತನಾಡಿ, ಜೀವನಕ್ಕೆ ರಸ್ತೆ ಬದಿ ವ್ಯಾಪಾರವನ್ನೇ ಅವಲಂಬಿಸಿರುವ ನೂರಾರು ವ್ಯಾಪಾರಸ್ಥರಿಗೆ ಜನರ ಸಂಚಾರ ಹಾಗೂ ವ್ಯಾಪಾರ ವಹಿವಾಟು ನಡೆಯುವ ಸ್ಥಳಕ್ಕೆ ಹೊಂದಿಕೊಂಡಂತೆ ಪರ್ಯಾಯ ಸ್ಥಳವನ್ನು ಕಲ್ಪಿಸಬೇಕು. ಜನರ ಸಂಚಾರವಿಲ್ಲದ ದೂರದಲ್ಲಿ ಹೋಗಿ ವ್ಯಾಪಾರ ಮಾಡಿ ಎಂದರೆ ತೊಂದರೆಯಾಗಲಿದೆ ಎಂದು ಹೇಳಿದರು.
ವ್ಯಾಪಾರಿ ಷಣ್ಮುಖ ಮಾತನಾಡಿ, ಸ್ಥಳಾಂತರಗೊಳಿಸಿ, ಸ್ಥಳಾವಕಾಶ ಕಲ್ಪಿಸುವ ವೇಳೆ ಈಗಿನ ನೈಜ ಬೀದಿ ವ್ಯಾಪಾರಿಗಳಿಗೆ ಅನ್ಯಾಯವಾಗದಂತೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ತರಕಾರಿ ಮಹೇಶ ಮಾತನಾಡಿ, ಲಿಂಕ್ ರಸ್ತೆಯಲ್ಲಿರುವ ಈಗಿನ ತರಕಾರಿ ಮಾರುಕಟ್ಟೆ ಮಳೆ ಸುರಿದಾಗ ಜಲಾವೃತವಾಗುವುದರಿಂದ ಮೂಲ ಸೌಕರ್ಯಗಳನ್ನು ಪುರಸಭೆಯಿಂದ ಕಲ್ಪಿಸಿ ಕೊಡಬೇಕು ಒತ್ತಾಯಿಸಿದರು.
ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಪ್ರಕಾಶ್, ಕಂದಾಯಾಧಿಕಾರಿ ಕೆ.ಸಿ.ತ್ರಿವೇಣಿ, ಕಂದಾಯ ನಿರೀಕ್ಷಕ ಕೆ.ಅಶೋಕ, ಸಮುದಾಯ ಸಂಘಟಕಿ ನಳಿನಿ, ಹಿರಿಯ ಆರೋಗ್ಯ ನಿರೀಕ್ಷಕಿ ಚಂಪಶ್ರೀ, ಕಿರಿಯ ಇಂಜಿನಿಯರ್ ಸಿದ್ದಪ್ಪ, ಪ್ರಥಮ ದರ್ಜೆ ಸಹಾಯಕಿ ಜಯಲಕ್ಷ್ಮಮ್ಮ, ಪ್ರಿಯಾಂಕಾ, ದ್ವಿತೀಯ ದರ್ಜೆ ಸಹಾಯಕರಾದ ಆಶಾ, ಗೋಪಾಲಕೃಷ್ಣ ಇತರರು ಇದ್ದರು.