ಹನಗೋಡು ಹೋಬಳಿಯ ಹಿಂಡಗುಡ್ಲು ಗ್ರಾಮದಲ್ಲಿ ವಕೀಲ ಎಚ್.ಎನ್.ವೆಂಕಟೇಶ್ ಅವರು ನಿರ್ಮಿಸಿರುವ ಮಾರಮ್ಮ ದೇವಸ್ಥಾನದ ಕಾಮಗಾರಿಯಲ್ಲಿ ತೊಡಗಿದ್ದ ಕೆಲಸಗಾರರನ್ನು ಸನ್ಮಾನಿಸಿದರು. ಡಿವೈಎಸ್‌ಪಿ ಧಮೇರ್ಂದ್ರ, ಶಿವಕುಮಾರ್, ರಮೇಶ್, ದಾ.ರಾ.ಮಹೇಶ್ ಇದ್ದರು. 
ಮೈಸೂರು

ಧಾರ್ಮಿಕ ಕ್ಷೇತ್ರಗಳು ನೆಮ್ಮದಿ ನೀಡುವ ಪವಿತ್ರ ತಾಣ

ಹಿರಿಯ ವಕೀಲ ಎಚ್.ಎನ್.ವೆಂಕಟೇಶ್ ಅಭಿಮತ

ಹನಗೋಡು: ಧಾರ್ಮಿಕ ಕ್ಷೇತ್ರಗಳು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಪವಿತ್ರ ತಾಣಗಳಾಗಿದ್ದು, ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಹಿರಿಯ ವಕೀಲ ಹಾಗೂ ಸಮಾಜ ಸೇವಕ ಎಚ್.ಎನ್.ವೆಂಕಟೇಶ್ ತಿಳಿಸಿದರು.
ಹುಟ್ಟೂರಾದ ಹನಗೋಡು ಹೋಬಳಿಯ ಹಿಂಡಗುಡ್ಲು ಗ್ರಾಮದಲ್ಲಿ ಸ್ವಂತ ಖರ್ಚಿನಲ್ಲಿ ನಿರ್ಮಿಸಿರುವ ಮಾರಮ್ಮ ದೇವಸ್ಥಾನದ ಕಾಮಗಾರಿಯಲ್ಲಿ ತೊಡಗಿದ್ದ ಕೆಲಸಗಾರರನ್ನು ಶುಕ್ರವಾರ ಸನ್ಮಾನಿಸಿ ಮಾತನಾಡಿ, ಹಳ್ಳಿಗಳಲ್ಲಿ ಹಿರಿಯರ ಸಾನ್ನಿಧ್ಯ ಇದ್ದರೆ ಸ್ವಚ್ಛತೆ ಸಹಜವಾಗಿರುತ್ತದೆ. ಮಹಿಳೆಯರು ಕುಟುಂಬದ ಸದಸ್ಯರಿಗೆ ಸ್ವಚ್ಛತೆಯ ಅರಿವು ಮೂಡಿಸಿದರೆ ಮನೆ ಮತ್ತು ಸುತ್ತಮುತ್ತಲಿನ ಪರಿಸರವೂ ಸ್ವಚ್ಛವಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೊಳ್ಳೆಗಾಲ ಡಿವೈಎಸ್‌ಪಿ ಧಮೇರ್ಂದ್ರ ಮಾತನಾಡಿ, ಹುಟ್ಟು ಮತ್ತು ಸಾವಿನ ನಡುವಿನ ಜೀವನದಲ್ಲಿ ಮಾಡಿದ ಸಮಾಜಸೇವೆ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಆ ದಾರಿಯಲ್ಲಿ ವಕೀಲ ವೆಂಕಟೇಶ್ ಅವರು ನಡೆದು ಸಮಾಜಕ್ಕೆ ಮಾದರಿಯಾಗಿದ್ದಾರೆ. ದೇವಸ್ಥಾನ ನಿರ್ಮಾಣದ ಜತೆಗೆ ಸರ್ಕಾರದಿಂದ ಅನುದಾನ ತರಿಸಿ ರಸ್ತೆ ಅಭಿವೃದ್ಧಿಗೆ ಕೈಜೋಡಿಸಿರುವುದು ಶ್ಲಾಘನೀಯ. ಅಲ್ಲದೆ, ವೆಂಕಟೇಶ್ ಅವರ ತಂದೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿರುವುದು ಸ್ಮರಣೀಯ ಎಂದರು.
ದಾಸನಪುರ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಬಿರುಗಾಳಿಯ ವೇಳೆ ಶಾಲೆಯ ಹೆಂಚುಗಳು ಕುಸಿದಾಗ ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡಿದ ಶಿಕ್ಷಕಿ ಸುಮಾ ಅವರಿಗೆ ವಕೀಲ ವೆಂಕಟೇಶ್ ಅವರು ವೈಯಕ್ತಿಕವಾಗಿ ಹತ್ತು ಸಾವಿರ ರೂ. ನಗದು ನೀಡಿ ಗೌರವಿಸಿದರು.
ಸಮಾರಂಭದಲ್ಲಿ ವಕೀಲ ವೆಂಕಟೇಶ್ ಅವರ ಹುಟ್ಟುಹಬ್ಬವನ್ನೂ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರಾದ ಶಿವಕುಮಾರ್, ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಶಿವರಾಜೇಗೌಡ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.