ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ರಹಮತ್ ತರೀಕೆರೆ, ಪ್ರೊ.ಎಸ್.ಡಿ.ಶಶಿಕಲಾ ಇದ್ದರು. 
ಮೈಸೂರು

ಧರ್ಮ, ಫಿಲಾಸಫಿಗಳು ಕಲೆಯ ಬುನಾದಿ

ಮೈಸೂರು: ಧರ್ಮ ಮತ್ತು ಫಿಲಾಸಫಿಗಳು ಕಲೆಯ ಬುನಾದಿಯಾಗಿವೆ ಎಂದು ಸಾಹಿತಿ ಪ್ರೊ.ರಹಮತ್ ತರೀಕೆರೆ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ‘ಶಾಂತಿನಾಥ ದೇಸಾಯಿಯವರ ಸಾಹಿತ್ಯದಲ್ಲಿ ಜೈನ ತಾತ್ವಿಕತೆ ಮತ್ತು ನವ್ಯಪ್ರಜ್ಞೆ’ ವಿಷಯ ಕುರಿತ ಎರಡು ದಿನಗಳ ವಿಚಾರ ಸಂಕಿರಣಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಫಿಲಾಸಫಿಯನ್ನು ವಿಸ್ತರಣೆ ಮಾಡಿದಾಗ ಎಲ್ಲ ಧರ್ಮದ ಅನೇಕ ಸಂಗತಿಗಳನ್ನು ಪ್ರಶ್ನೆ ಮಾಡುಬಹುದು. ಕುವೆಂಪು ಸೇರಿದಂತೆ ಅನೇಕರ ಸಾಹಿತ್ಯದಲ್ಲಿ ಇದನ್ನು ಗಮನಿಸಬಹುದು. ಕಲೆಯು ದರ್ಶನದ ಸೃಜನಶೀಲ ವಿಸ್ತರಣೆಯಾಗಿದೆ. ಜತೆಗೆ ಕಲೆಯೂ ಧರ್ಮದ ವಿಮರ್ಶಾತ್ಮಕ ವಿಸ್ತರಣೆಯೂ ಹೌದು. ಕಲೆಯಲ್ಲಿ ಫಿಲಾಸಫಿ ಇರುತ್ತದೆ. ಆದರೆ ಧರ್ಮದ ವಿಮರ್ಶೆಯಲ್ಲಿ ಫಿಲಾಸಫಿ ವಿಸ್ತರಣೆಯಾಗಿರುತ್ತದೆ ಎಂದರು.
ಕಲೆಯು ಧರ್ಮ ಮತ್ತು ದರ್ಶನವನ್ನು ಮೀರಿದಾಗ ಸೃಜನಶೀಲ ಸೀಮೋಲ್ಲಂಘನೆ ಎನ್ನುತ್ತೇವೆ. ಪಂಪ, ರನ್ನ, ಜನ್ನ ಎಲ್ಲರೂ ತಮ್ಮ ಸಾಹಿತ್ಯದಲ್ಲಿ ಸೃಜನಶೀಲ ಸೀಮೋಲ್ಲಂಘನೆ ಮಾಡಿದ್ದಾರೆ. ಕಲೆಯಲ್ಲಿ ಸೀಮೋಲ್ಲಂಘನೆ ಆಗಲೇ ಬೇಕು. ಸೃಜನಶೀಲ ಸೀಮೋಲ್ಲಂಘನೆ ಮಾಡದವರು ಕಲಾವಿದರಲ್ಲ ಎಂದರು.
ವಚನಗಳಲ್ಲಿ ಮುಕ್ತ ಜಿಜ್ಞಾಸೆ ಕಾಣಬಹುದು. ಹಾಗಾಗಿ, ಶರಣರ ವಚನಗಳು ಫಿಲಾಸಫಿಯೂ ಹೌದು. ಕೆಲೆಯೂ ಹೌದು. ಜಾತ್ರೆ, ಯಾಗ, ಯಜ್ಞ, ಪೂಜೆ, ಬಲಿ, ಉತ್ಸವ, ರೋಜಾ, ನಮಾಜ್ ಎಲ್ಲವೂ ಧರ್ಮ. ಆದರೆ ಇವುಗಳು ಪ್ರಶ್ನಾತೀತವಲ್ಲ. ಎಲ್ಲ ವಿಷಯದಲ್ಲೂ ಫಿಲಾಸಫಿಯಲ್ಲಿ ಮುಕ್ತ ಜಿಜ್ಞಾಸೆಗೆ ಅವಕಾಶ ಇದೆ ಎಂದರು.
ಬಳಿಕ ‘ಶಾಂತಿನಾಥ ದೇಸಾಯಿಯವರ ಸಾಹಿತ್ಯದಲ್ಲಿ ವ್ಯಕ್ತಿ ವಿಶಿಷ್ಟತೆ ಮತ್ತು ಆಧುನಿಕ ಯುವ ಸಂವೇದನೆ’ ವಿಷಯ ಕುರಿತು ಕವಯತ್ರಿ ಸಿಂಧುರಾವ್, ‘ಶಾಂತಿನಾಥ ದೇಸಾಯಿಯವರ ಕಥನ ಸಾಹಿತ್ಯ ಮತ್ತು ಜೈನ ಸಂವೇದನೆ’ ವಿಷಯ ಕುರಿತು ಸಂಸ್ಕೃತಿ ಚಿಂತಕ ರೇಣುಕಾರಾಧ್ಯ ವಿಚಾರ ಮಂಡಿಸಿದರು.
ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷೆ ಪ್ರೊ.ಎಸ್.ಡಿ.ಶಶಿಕಲಾ ಇದ್ದರು.