ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಸಲ್ಲಿಸಿದರು.
- ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯ
- ಕೇಂದ್ರ ಸಚಿವ ಅಶ್ವಿನ್ ವೈಷ್ಣವ್‌ಗೆ ಮನವಿ
ಮೈಸೂರು: ಅನಿವಾರ್ಯ ಕಾರಣಗಳಿಂದ ನನೆಗುದಿಗೆ ಬಿದ್ದಿರುವ ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ಮರು ಚಾಲನೆ ನೀಡಬೇಕು. ಪ್ರಮುಖವಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಮಧ್ಯ ಪ್ರವೇಶಿಸಬೇಕು ಎಂದು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಸಚಿವರಿಗೆ ಮನವಿ ಸಲ್ಲಿಸಿರುವ ಅವರು, ಕೆಲ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಯೋಜನೆ ನಿಧಾನಗತಿಯಲ್ಲಿ ಸಾಗಿದೆ. ಮೈಸೂರು (ಬೆಳಗೊಳ)- ಕುಶಾಲನಗರ (89 ಕಿಮೀ) ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದ್ದರೂ ಕಾರಣಾಂತರಗಳಿಂದ ಸ್ಥಗಿತಗೊಂಡಿದೆ. ಈ ನಿಟ್ಟಿನಲ್ಲಿ ಸಚಿವರು ಮಧ್ಯಪ್ರವೇಶಿಸಬೇಕೆಂದು ಕೋರಿದರು.
ಕೊಡಗು ಜಿಲ್ಲೆಗೆ ಸೂಕ್ತ ರೈಲು ಸಂಪರ್ಕವಿಲ್ಲದೆ ಪ್ರಮುಖ ಪ್ರವಾಸೋದ್ಯಮ ಮತ್ತು ತೋಟಗಾರಿಕೆ ಕ್ಷೇತ್ರಗಳ ಆರ್ಥಿಕತೆಗೆ ತೊಂದರೆಯಾಗುತ್ತಿದೆ. ಸಂಪೂರ್ಣವಾಗಿ ಸ್ಯಾಚುರೇಟೆಡ್ ರಸ್ತೆ ಸಂಪರ್ಕದ ಮೇಲೆ ಬೆಳೆಗಾರರು ಅವಲಂಬಿತಾಗಿದ್ದಾರೆ. ಈ ಯೋಜನೆಯು ಕೊಡಗು ಜಿಲ್ಲೆಗೆ ಸುಸ್ಥಿರ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೇರಳ ಅವಕಾಶ ಒದಗಿಸುತ್ತದೆ. ಕೃಷಿ-ತೋಟಗಾರಿಕೆ ಪೂರೈಕೆ ಸರಪಳಿ ಬಲಪಡಿಸುತ್ತದೆ. ಕೊಡಗನ್ನು ಮೈಸೂರು ಮತ್ತು ಬೆಂಗಳೂರಿನ ಬೆಳವಣಿಗೆಯ ಕಾರಿಡಾರ್‌ಗಳೊಂದಿಗೆ ಸಂಯೋಜಿಸುತ್ತದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯವು ಕ್ರಮ ಕೈಗೊಳ್ಳಬೇಕು. ರೈಲ್ವೆ ಸಚಿವಾಲಯ ಹಾಗೂ ಅಧಿಕಾರಿಗಳ ಜತೆಗೆ ನಿರಂತರ ಫಾಲೋಅಪ್ ಮಾಡಿ ಎರಡೂ ಯೋಜನೆ ಕಾರ್ಯರೂಪಕ್ಕೆ ತರಲು ಎಲ್ಲ ರೀತಿಯಲ್ಲೂ ಕ್ರಮ ಕೈಗೊಳ್ಳಲಾಗುವುದು. ನನ್ನ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ಸಂಸದರು ತಿಳಿಸಿದ್ದಾರೆ.
ಮನವಿಯನ್ನು ಸ್ವೀಕರಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಸದ ಮಾಹಿತಿ ನೀಡಿದ್ದಾರೆ.
ಹೈಸ್ಪೀಡ್ ರೈಲಿಗೆ ಮೈಸೂರು ಸೇರಿಸಲು ಆಗ್ರಹ
ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಯೋಜನೆ ಘೋಷಿಸಲಾಗಿದೆ. ಆದರೆ, ಮೈಸೂರು ಕೈ ಬಿಡಲಾಗಿದೆ. ರೈಲ್ವೆ ಸಚಿವರು ಕೂಡಲೇ ಮಧ್ಯ ಪ್ರವೇಶಿಸಿ ಈ ಯೋಜನೆಗೆ ಸಾಂಸ್ಕೃತಿಕ ನಗರಿಯನ್ನೂ ಸೇರಿಸಬೇಕು ಎಂದು ಸಂಸದರು ಮನವಿ ಮಾಡಿದರು.
ಮೈಸೂರು ಈಗ ಪ್ರಮುಖ ಪ್ರವಾಸಿ ತಾಣವಾಗಿದೆ. ಐಟಿ ಹಬ್ ಆಗುತ್ತಿದೆ. ರಾಜಧಾನಿ ಬೆಂಗಳೂರಿನೊಂದಿಗೆ ಸೂಕ್ತ ಸಂಪರ್ಕ ಜಾಲ ಹೊಂದಿದರೆ ಆರ್ಥಿಕ ಪ್ರಗತಿಯಾಗಲಿದೆ. ಬೆಂಗಳೂರನ್ನು ಮೆಟ್ರೋಪಾಲಿಟನ್ ವಲಯದಿಂದ ದಟ್ಟಣೆ ಕಡಿಮೆ ಮಾಡಲು ಈ ವಿಸ್ತರಣೆ ನೆರವಾಗಲಿದೆ. ಹಲವು ದಿನಗಳ ಬೇಡಿಕೆಯನ್ನು ಈಡೇರಿಸಲು ಸಚಿವರು ಮಂದಾಗಬೇಕು ಎಂದು ಕೋರಿದ್ದಾರೆ..