ಜಮ್ಮುವಿನ ವಿಜಯಪುರದ ನಜ್ವಾಲ್‌ನಲ್ಲಿರುವ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಬಿ.ಸುರೇಶ್, ಡಾ.ಸಿ.ಜಿ.ಬೆಟಸೂರಮಠ, ಎಸ್.ಪಿ. ಮಂಜುನಾಥ್, ಶ್ರೀಜಯರಾಜೇಂದ್ರರು ಇದ್ದರು.
- ಉತ್ತಮ ಬಾಂಧವ್ಯ ಜ್ಞಾನ ಸಂಪಾದಿಸಲು ಸಹಕಾರಿಯಾಗಿ ಜೀವನ ರೂಪಿಸಿಕೊಳ್ಳಲು ಸಾಧ್ಯ
- ಶಿಕ್ಷಣ ಪಡೆಯಲು ಕಟ್ಟಡ, ಇನ್ನಿತರ ಸೌಲಭ್ಯಗಳಿಗಿಂತ ಕಲಿಕೆ ಆಸಕ್ತಿ ಮುಖ್ಯ
ಮೈಸೂರು:ಫಾರ್ಮಸಿ ಪದವೀಧರರಿಗೆ ಅಪಾರ ಅವಕಾಶಗಳಿದ್ದು, ಅದಕ್ಕೆ ಅಗತ್ಯವಾದ ರೀತಿಯಲ್ಲಿ ಜ್ಞಾನ ಹಾಗೂ ಅನುಭವ ಬೆಳೆಸಿಕೊಳ್ಳಬೇಕು ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಎಎಚ್‌ಇಆರ್) ಕುಲಪತಿ ಡಾ.ಬಿ.ಸುರೇಶ್ ಸಲಹೆ ನೀಡಿದರು.
ಜಮ್ಮುವಿನ ವಿಜಯಪುರದ ನಜ್ವಾಲ್‌ನಲ್ಲಿರುವ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಪಡೆಯಲು ಕಟ್ಟಡ, ಇನ್ನಿತರ ಸೌಲಭ್ಯಗಳಿಗಿಂತ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಉತ್ತಮ ಬಾಂಧವ್ಯ ಜ್ಞಾನ ಸಂಪಾದಿಸಲು ಸಹಕಾರಿಯಾಗಿ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ದೂರದೃಷ್ಟಿಯ ಉತ್ತಮ ಧ್ಯೇಯ ಮತ್ತು ಆಶಯಗಳನ್ನಿಟ್ಟುಕೊಂಡು ಸಕಾರಾತ್ಮಕವಾಗಿ ತೊಡಗಿಸಿಕೊಂಡರೆ ಎಲ್ಲ ರೀತಿಯ ಯಶಸ್ಸು ಪಡೆಯಲು ಸಾಧ್ಯ. ಡಾ.ಅಬ್ದುಲ್ ಕಲಾಂ ಅವರು ಹೇಳುತ್ತಿದ್ದಂತೆ ಉತ್ತಮ ಕನಸುಗಳನ್ನು ಕಂಡು ಅದನ್ನು ಆಚರಣೆಗೆ ತರಲು ಪ್ರಯತ್ನಿಸಿದರೆ ಫಲ ಕಾಣಲು ಸಾಧ್ಯವಾಗುತ್ತದೆ ಎಂದರು.
ಪರಮಪೂಜ್ಯ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾರ್ಗದರ್ಶನ ಹಾಗೂ ಆಶೀರ್ವಾದಗಳೊಂದಿಗೆ ಸಂಸ್ಥೆಯನ್ನು ಜಮ್ಮುವಿನಲ್ಲಿ ಉತ್ತಮ ರೀತಿಯಲ್ಲಿ ಬೆಳೆಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಮಾತನಾಡಿ, ಸದ್ಯದಲ್ಲಿಯೇ ಜಮ್ಮುವಿನಲ್ಲಿ ಸಂಸ್ಥೆಗೆ ನಿವೇಶನವನ್ನು ಪಡೆಯಲಿದ್ದು, ಆದಷ್ಟು ಜಾಗ್ರತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗವುದು ಎಂದು ತಿಳಿಸಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸರ್ವರಿಗೂ ಆಶೀರ್ವದಿಸಿದರು. ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಸುತ್ತೂರು ಮಠದ ಕಿರಿಯ ಶ್ರೀಗಳಾದ ಶ್ರೀ ಜಯರಾಜೇಂದ್ರ, ಸಂಸ್ಥೆಯ ಶಿವಶಂಕರ್, ಪಿ.ರಾಜಣ್ಣ, ಕಾಲೇಜಿನ ಪ್ರಾಂಶುಪಾಲ ಡಾ.ಪಿ. ದೊರೆಸ್ವಾಮಿ, ಪ್ರಾಧ್ಯಾಪಕ ಡಾ.ಶುಮೈಲ್, ಮೈಸೂರು, ಊಟಿಯ ಫಾರ್ಮಸಿ ಕಾಲೇಜುಗಳ ವಿದ್ಯಾರ್ಥಿಗಳು, ಸ್ಥಳೀಯ ಗಣ್ಯರು ಇದ್ದರು.