ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮೈಸೂರು ವಿಭಾಗದಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸಿದರು. ಕೆ.ಎಂ.ಮುನಿಗೋಪಾಲ್ ರಾಜು, ಕೆ.ಬಲರಾಮ್, ಶಿವರಾಮ್, ವರದರಾಜ್, ಸುನೀಲ್, ಜಿ.ರೇಣುಕಾ, ಶರಣಮ್ಮ ಎಸ್.ಜಂಗಿನ, ಲಿಂಗರಾಜಮ್ಮ, ಎ.ಆರ್.ಮೃತ್ಯುಂಜಯ, ಪೂರ್ಣಚಂದ್ರ ತೇಜಸ್ವಿ, ಮೋಹನ್ ಇತರರು ಇದ್ದರು. 
ಮೈಸೂರು

ವಿದ್ಯುತ್ ಅವಘಡ ಶೂನ್ಯಕ್ಕೆ ಇಳಿಸುವುದು ಅತ್ಯಂತ ಮುಖ್ಯ: (ಸೆಸ್ಕ್) ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ

ಪ್ರಮುಖ ಮುಖ್ಯಾಂಶಗಳು

  • ಅವಘಡಗಳು ನಡೆಯದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಿದೆ.
  • ಸೆಸ್ಕ್ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಗಳ ಪ್ರಮಾಣವನ್ನು ಶೂನ್ಯಕ್ಕೆ ತರುವ ಗುರಿ ಸಾಧಿಸಬಹುದು
ಮೈಸೂರು:ವಿದ್ಯುತ್ ಅವಘಡಗಳ ಪ್ರಮಾಣ ತಪ್ಪಿಸಿ ಅದನ್ನು ಶೂನ್ಯಕ್ಕೆ ಇಳಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧ್ಯಕ್ಷರಾದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ(659) ಮೈಸೂರು ವಿಭಾಗದಿಂದ ರಾಜೇಂದ್ರನಗರದ ಕವಿಪ್ರನಿ ನೌಕರರ ಸಮುದಾಯದ ಭವನದಲ್ಲಿ ಆಯೋಜಿಸಿದ್ದ ವಸತಿಗೃಹ ಶಂಕುಸ್ಥಾಪನೆ, ನವೀಕೃತ ಸಮುದಾಯ ಭವನ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯುತ್ ಅವಘಡದಿಂದ ಹಲವು ಪ್ರಾಣ ಹಾನಿ, ಆಸ್ತಿ ಹಾನಿಯಾಗುವ ಪ್ರಸಂಗಗಳು ನಡೆಯುತ್ತಿರುತ್ತವೆ. ಅವುಗಳನ್ನು ತಪ್ಪಿಸಿ ಅವಘಡಗಳು ನಡೆಯದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಿದೆ. ಸೆಸ್ಕ್ ವ್ಯಾಪ್ತಿಯ ಪ್ರತಿಯೊಬ್ಬ ಪವರ್‌ಮನ್‌ಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ವಿದ್ಯುತ್ ಅವಘಡಗಳಿಂದ ಜೀವಹಾನಿ, ಆಸ್ತಿ ನಷ್ಟದ ಜತೆಗೆ ಮೃತರ ಕುಟುಂಬದ ಸಂಕಷ್ಟಕ್ಕೆ ಕಾರಣವಾಗಲಿದೆ. ಆದ್ದರಿಂದ ಪವರ್ ಮನ್‌ಗಳು ಕೆಲಸ ಮಾಡುವಾಗ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಾರ್ಯನಿರ್ವಹಿಸಬೇಕಿದೆ. ಇದರಿಂದ ವಿದ್ಯುತ್ ಅವಘಡಗಳ ಪ್ರಮಾಣ ತಗ್ಗಿಸಬಹುದಾಗಿದ್ದು, ಬಹುಮುಖ್ಯವಾಗಿ ಸೆಸ್ಕ್ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಗಳ ಪ್ರಮಾಣವನ್ನು ಶೂನ್ಯಕ್ಕೆ ತರುವ ಗುರಿ ಸಾಧಿಸಬಹುದು ಎಂದರು.
ಯಾವುದೇ ಸಂಸ್ಥೆಯ ಪ್ರಗತಿ ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರೂ ಪರಿಸ್ಪರ ಸಹಕಾರ ಮನೋಭಾವದಿಂದ ಕೈಜೋಡಿಸಿ, ಕಾರ್ಯನಿರ್ವಹಿಸಿದರೆ ಮಾತ್ರ ಸಂಸ್ಥೆ ಪ್ರಗತಿ ಸಾಧಿಸಲಿದೆ. ಸೆಸ್ಕ್ ಸದಾಕಾಲ ಸಿಬ್ಬಂದಿಯೊಂದಿಗೆ ಇರಲಿದ್ದು, ಸಂಸ್ಥೆಯ ಉಳಿವು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಬೇಕು ಎಂದರು.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್‌ರಾಜು ಮಾತನಾಡಿ, ಪವರ್‌ಮನ್‌ಗಳು ನಮ್ಮ ಸಂಸ್ಥೆಯ ಶಕ್ತಿಯಾಗಿದ್ದು, ಯೋಧರಂತೆ 24 ಗಂಟೆಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡುವುದರಿಂದ ಸಂಸ್ಥೆಗೆ ಒಳ್ಳೆಯ ಹೆಸರು ಬರಲು ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪವರ್‌ಮನ್‌ಗಳು ಹಾಗೂ ಅವರ ಕುಟುಂಬಕ್ಕೆ ನೆರವಾಗಲು ಕ್ಯಾಶ್‌ಲೆಸ್ ಹೆಲ್ತ್ ಕಾರ್ಡ್ ನೀಡಲಾಗಿದೆ. ಪವರ್‌ಮನ್‌ಗಳ ಸುರಕ್ಷತೆ ದೃಷ್ಟಿಯಿಂದ ಸುರಕ್ಷಿತಾ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಆದ್ದರಿಂದ ವಿದ್ಯುತ್ ಅಪಘಾತಗಳನ್ನು ತಪ್ಪಿಸುವತ್ತ ನಿಗಾ ವಹಿಸಬೇಕಿದ್ದು, ಇದಕ್ಕಾಗಿ ಹೆಚ್ಚಿನ ನಿರ್ವಹಣೆ ಮಾಡುವ ಮೂಲಕ ವಿದ್ಯುತ್ ಅಪಘಾತ ಆಗದಂತೆ ಕ್ರಮವಹಿಸಬೇಕಿದೆ ಎಂದರು.
ಕೆಪಿಟಿಸಿಎಲ್ ನೌಕರರ ಸಂಘ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ಬಲರಾಮ್ ಮಾತನಾಡಿ, ರಾಜ್ಯದ ಇತರ ಎಸ್ಕಾಂಗಳಿಗೆ ಹೋಲಿಸಿದರೆ ಸೆಸ್ಕ್‌ನಲ್ಲಿ ಸಿಬ್ಬಂದಿ ಸುರಕ್ಷತೆ ಸೇರಿದಂತೆ ವರ್ಗಾವಣೆ, ಬಡ್ತಿ, ಅನುಕಂಪದ ಆಧಾರದ ಕೆಲಸ ಎಲ್ಲ ಸೌಲಭ್ಯಗಳು ಲಭಿಸುತ್ತಿದೆ. ಇದರ ಜತೆಗೆ ನೌಕರರಿಗೆ ಸೂಕ್ತ ತರಬೇತಿ ಕಲ್ಪಿಸಿ, ಕೆಳ ಕ್ರಮದ ಸಿಬ್ಬಂದಿಗೂ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ಯಾವುದೇ ಕಾರಣಕ್ಕೂ ವಿದ್ಯುತ್ ನಿಗಮಗಳು ಖಾಸಗೀಕರಣ ಆಗಬಾರದು, ಈ ಬಗ್ಗೆ ಸಿಬ್ಬಂದಿ ಆಘಾತಕ್ಕೆ ಸಿಲುಕಿದ್ದಾರೆ. ಖಾಸಗೀಕರಣ ಆದರೆ ಜನರಿಗೆ ಈಗ ನೀಡುತ್ತಿರುವ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ವಿದ್ಯುತ್ ನಿಗಮಗಳು ಯಾವುದೇ ಕಾರಣಕ್ಕೂ ಖಾಸಗೀಕರಣ ಆಗಬಾರದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟ ಪವರ್‌ಮನ್ ಎ.ಜೆ.ವರುಣ್‌ಕುಮಾರ್ ಅವರ ಕುಟುಂಬಕ್ಕೆ 1.06 ಕೋಟಿ ರೂ.ಗಳ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕಾರಿಸಲಾಯಿತು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಮ್, ಖಜಾಂಚಿ ವರದರಾಜ್, ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಸುನೀಲ್, ಮುಖ್ಯ ಆರ್ಥಿಕ ಅಧಿಕಾರಿ ಜಿ.ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕಿ (ತಾಂತ್ರಿಕ) ಶರಣಮ್ಮ ಎಸ್.ಜಂಗಿನ, ಪ್ರಧಾನ ವ್ಯವಸ್ಥಾಪಕಿ(ಆಂತರಿಕ ಲೆಕ್ಕಪರಿಶೋಧನೆ) ಲಿಂಗರಾಜಮ್ಮ, ಮುಖ್ಯ ಇಂಜಿನಿಯರ್ ಎ.ಆರ್.ಮೃತ್ಯುಂಜಯ, ಪೂರ್ಣಚಂದ್ರ ತೇಜಸ್ವಿ, ಮೋಹನ್ ಇತರರು ಇದ್ದರು.