ಎನ್‌ಟಿಎ ರದ್ದುಪಡಿಸಬೇಕು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಎಐಡಿಎಸ್‌ಒನಿಂದ ಕೆಂಪು ಕಾರ್ಡ್ ಪ್ರದರ್ಶನ ಚಳವಳಿ ಹಮ್ಮಿಕೊಳ್ಳಲಾಗಿತ್ತು. ಚಂದ್ರಕಲಾ, ಚಂದ್ರಿಕಾ, ಹೇಮಾ, ಅಂಜಲಿ, ನಂದೀಶ್, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಇದ್ದರು. 
ಮೈಸೂರು

ಮೈಸೂರಿನಲ್ಲಿ ಕೆಂಪು ಕಾರ್ಡ್ ಪ್ರದರ್ಶನ ಚಳವಳಿ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ಇತಿಹಾಸದ ಉದ್ದಕ್ಕೂ ಅನ್ಯಾಯದ ವಿರುದ್ಧ ನಡೆಯುವ ಚಳವಳಿಯನ್ನು ಹತ್ತಿಕ್ಕಲಾಗುತ್ತಿದೆ
  • ಇಡೀ ಶಿಕ್ಷಣ ವ್ಯವಸ್ಥೆ ಕೋಚಿಂಗ್ ಮಾಫಿಯಾದ ಕೈಗೊಂಬೆಯಾಗಿದೆ.
ಮೈಸೂರು:ಎನ್‌ಟಿಎ ರದ್ದುಪಡಿಸಬೇಕು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಎಐಡಿಎಸ್‌ಒನಿಂದ ಕೆಂಪು ಕಾರ್ಡ್ ಪ್ರದರ್ಶನ ಚಳವಳಿ ನಡೆಸಲಾಯಿತು.
ಜಿಲ್ಲಾಧಿಕಾರಿ ಹಳೇ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಸಾರ್ವಜನಿಕ ಶಿಕ್ಷಣ ಉಳಿಯಬೇಕು. ವಿದ್ಯಾರ್ಥಿಗಳು ಭವಿಷ್ಯ ರೂಪಿಸಬೇಕು ಎನ್ನುವ ಘೋಷಣೆ ಕೂಗಿದರು.
ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಚಂದ್ರಕಲಾ ಮಾತನಾಡಿ, ನ್ಯಾಯಕ್ಕಾಗಿ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಾಂತಿಯುತವಾಗಿ ಸೇರಿ ಹೋರಾಟ ಮಾಡುತ್ತಿದ್ದಾಗ ಕೇಂದ್ರ ಸರ್ಕಾರದಡಿ ಇರುವ ದೆಹಲಿ ಪೊಲೀಸರು ಪ್ರತಿಭಟಿಸುತ್ತಿದ್ದವರ ಮೇಲೆ ಲಾಠಿ ಚಾರ್ಜ್, ಅಶ್ರು ವಾಯು ಮತ್ತು ಶಾಕ್ ಬ್ಯಾಟನ್‌ಗಳಿಂದ ದಾಳಿ ನಡೆಸಿದ್ದಾರೆ ಎಂದು ದೂರಿದರು.
ಪೊಲೀಸರ ದಾಳಿಯಿಂದಾಗಿ ನೂರಾರು ಯುವಕರು ಗಾಯಗೊಂಡಿದ್ದಾರೆ ಮತ್ತು ಅನೇಕರನ್ನು ವಶಕ್ಕೆ ಪಡೆಯಲಾಗಿದೆ. ಇಷ್ಟೇ ಅಲ್ಲದೆ ರಾಷ್ಟ್ರೀಯ ಸುರಕ್ಷತಾ ಕಾಯ್ದೆಯಡಿ ಪ್ರತಿಭಟನಾಕಾರನ್ನು ಬಂಧಿಸಲು ಕೇಂದ್ರ ಗೃಹ ಸಚಿವಾಲಯವು ಆದೇಶಿಸಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಪೆಟ್ಟು ನೀಡಿದಂತಿದೆ ಎಂದು ದೂರಿದರು.
ಆದರೆ ಇತಿಹಾಸದ ಉದ್ದಕ್ಕೂ ಅನ್ಯಾಯದ ವಿರುದ್ಧ ನಡೆಯುವ ಚಳವಳಿಯನ್ನು ಹತ್ತಿಕ್ಕಲು ಹೋದ ಪಕ್ಷಗಳ ಸರ್ಕಾರ ನೆಲಕಚ್ಚಿವೆ. ಅದೇ ಗತಿ ಬಿಜೆಪಿಗೂ ಮುಂದಿನ ದಿನಗಳಲ್ಲಿ ಕಾದಿದೆ ಎಂದು ಎಚ್ಚರಿಸಿದರು.
ಸಾಮಾಜಿಕ ಹೋರಾಟಗಾರ ಉಗ್ರ ನರಸಿಂಹೇಗೌಡ ಮಾತನಾಡಿ, ಇಂದು ಎಲ್ಲ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡುವ ಜರೂರಿದೆ. ಇಡೀ ಶಿಕ್ಷಣ ವ್ಯವಸ್ಥೆ ಕೋಚಿಂಗ್ ಮಾಫಿಯಾದ ಕೈಗೊಂಬೆಯಾಗಿದೆ. ಇದರ ವಿರುದ್ಧ ನಡೆಯುತ್ತಿರುವ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ದಾಳಿ, ಅದರಲ್ಲೂ ಹೆಣ್ಣುಮಕ್ಕಳೊಂದಿಗೆ ಅಸಭ್ಯ ವರ್ತನೆ ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಧ್ಯಾಪಕಿ ಲತಾ ಮೈಸೂರು ಮಾತನಾಡಿ, ನೀಟ್ ಹಗರಣದ ವಿರುದ್ಧ ನಡೆಯುತ್ತಿರುವ ಈ ಹೋರಾಟ ಮತ್ತೊಂದು ಸ್ವಾತಂತ್ರ್ಯ ಚಳವಳಿಯ ಭಾವ ನೀಡುತ್ತಿದೆ. ನೀಟ್ ಮೂಲಕ ದೊಡ್ಡ ಲಾಭದ ಮಾರುಕಟ್ಟೆ ಸೃಷ್ಟಿಸಿರುವ ಕಾರ್ಪೋರೆಟ್ ಕುಳವನ್ನು ಬಯಲಿಗೆಳೆಯಬೇಕಿದೆ ಎಂದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಚಂದ್ರಿಕಾ, ಹೇಮಾ, ಅಂಜಲಿ, ನಂದೀಶ್, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.