ಮಾನಸ ಗಂಗೋತ್ರಿಯ ವಿಜ್ಞಾನ ಭವನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಗಣ್ಯರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಜಿ.ಲಕ್ಷ್ಮೀಕಾಂತ್ ರೆಡ್ಡಿ, ಕೆ.ಆರ್.ಶಂಕರ್, ಬಿ.ರಂಗೇಗೌಡ ಇದ್ದರು. 
ಮೈಸೂರು

ಮೀಸಲಾತಿ ಅನ್ವಯ ನೌಕರರನ್ನ್ನು ನೇಮಕಾತಿ ಮಾಡಿಕೊಳ್ಳಿ

ಅವಿನಾಶ್ ಜೈನಹಳ್ಳಿ
ಮೈಸೂರು: ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಿಸಿಕೊಳ್ಳುವಾಗ ಮೀಸಲಾತಿ ಪ್ರಕಾರ ನೇಮಕ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದರು.
ಮಾನಸ ಗಂಗೋತ್ರಿಯ ವಿಜ್ಞಾನ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಧಿನಿಯಮ ಕುರಿತು ಜಿಲ್ಲಾ, ತಾಲೂಕು ಮತ್ತು ನಗರಪಾಲಿಕೆ ವ್ಯಾಪ್ತಿಯ ಅನುಷ್ಠಾನ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆಯಾಯ ವರ್ಗಕ್ಕೆ ರೋಸ್ಟರ್ ಪದ್ಧತಿ ಪ್ರಕಾರ ಮೀಸಲಿಡುವಂತೆ ಮಾಡಬೇಕು ಎಂದು ಹೇಳಿದರು.
ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಿದ್ದರೂ ಒಂದೇ ಏಜೆನ್ಸಿಯಲ್ಲಿ ಕೆಲಸ ಮಾಡುವವರೇ ಮುಂದುವರಿದುಕೊಂಡು ಬರುವುದರಿಂದ ಹೊಸಬರಿಗೆ ಅವಕಾಶ ಸಿಗದಂತಾಗಲಿದೆ. ಮೈಸೂರು ವಿವಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಈ ಪರಿಸ್ಥಿತಿ ಇರುವುದರ ಬಗ್ಗೆ ಕಂಡುಬಂದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹೊರಗುತ್ತಿಗೆಯ ನೇಮಕದಲ್ಲೂ ಕಡ್ಡಾಯವಾಗಿ ಮೀಸಲಾತಿ ಪ್ರಕಾರ ನೇಮಕಕ್ಕೆ ಗಮನಹರಿಸಬೇಕು ಎಂದು ಸೂಚಿಸಿದರು.
ಇಲಾಖೆಗಳಲ್ಲಿ ಹೊರಗುತ್ತಿಗೆ ಏಜೆನ್ಸಿಯನ್ನು ಮುಂದುವರಿಸುವಾಗ ಅಧಿಕಾರಿಗಳು ಸೂಕ್ಷ್ಮತೆ ಅರಿಯಬೇಕು. ಕಾನೂನಿನ ಉದ್ದೇಶ ಗಮನಿಸಬೇಕು. ಬಹಳ ವರ್ಷಗಳಿಂದ ಹಿಂದುಳಿದ ಈ ಸಮಾಜವನ್ನು ಮೇಲೆತ್ತಲು ತಂದಿರುವ ಕಾಯ್ದೆ ಬಗ್ಗೆ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಡುವ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಆಯಾಯ ಸಮಾಜಗಳ ಬಡಾವಣೆಗಳ ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸುವ ಜತೆಗೆ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ವೈಯಕ್ತಿಕ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಯಾವುದೇ ಸಮಸ್ಯೆ ಉಂಟಾಗಲ್ಲ. ಜಾತಿ ಪ್ರಮಾಣ ಇರುವುದನ್ನು ಗಮನಿಸಲಾಗುತ್ತದೆ. ಆದರೆ, ಲೋಕೋಪಯೋಗಿ, ನೀರಾವರಿ, ವಿದ್ಯುತ್ ಇಲಾಖೆಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ಸಾಮಾನ್ಯ ಜನರು ವಾಸಿಸುವ ಬಡಾವಣೆಗಳಿಗೆ ಯೋಜನೆ ರೂಪಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಕೆ.ಆರ್.ಶಂಕರ್ ಮಾತನಾಡಿ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಗಳಲ್ಲಿ ಇರುವ ಅಧಿನಿಯಮದ ಪ್ರಮುಖ ಅಂಶಗಳನ್ನು ವಿವರಿಸುವ ಮೂಲಕ ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕು. ಕ್ರಿಯಾ ಯೋಜನೆ ರೂಪಿಸುವಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿವೆ ಎಂದರು.