ಡಾ.ಎಚ್.ಸಿ.ಮಹದೇವಪ್ಪ 
ಮೈಸೂರು

ರೇಷ್ಮೆ ಕಾರ್ಖಾನೆಯಲ್ಲಿ ಕ್ರೀಡಾಂಗಣ ನಿರ್ಮಾಣ ಕುರಿತು ಮರುಪರಿಶೀಲನೆ

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟನೆ
  • ತಿ.ನರಸೀಪುರದಲ್ಲಿರುವ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ
  • ರೇಷ್ಮೆ ಕಾರ್ಖಾನೆಗೆ ತೊಂದರೆಯಾದರೆ ಆ ಜಾಗದಲ್ಲಿ ಕ್ರೀಡಾಂಗಣ ಮಾಡುವುದಿಲ್ಲ.
ಮೈಸೂರು:  ತಿ.ನರಸೀಪುರದಲ್ಲಿ ರೇಷ್ಮೆ ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಕುರಿತು ಮರುಪರಿಶೀಲನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೇಷ್ಮೆ ಮಾರುಕಟ್ಟೆ ವಿಸ್ತರಣೆಗೆ ಮೀಸಲಿಟ್ಟಿರುವ, ಈವರೆಗೂ ಉಪಯೋಗಿಸದ ಒಂದೂವರೆ ಎಕರೆ ಜಾಗವನ್ನು ಕ್ರೀಡಾಂಗಣಕ್ಕೆ ಬಳಸಲು ತೀರ್ಮಾನ ಮಾಡಿದ್ದು, ಈಗ ಆ ಆದೇಶವನ್ನು ಮರುಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.
ತಿ.ನರಸೀಪುರದಲ್ಲಿರುವ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಅನಗತ್ಯವಾಗಿ ಕೆಲವರು ಗೊಂದಲ ಸೃಷ್ಟಿಸಿದ್ದಾರೆ. ರೇಷ್ಮೆ ಕಾರ್ಖಾನೆಗೆ ತೊಂದರೆಯಾದರೆ ಆ ಜಾಗದಲ್ಲಿ ಕ್ರೀಡಾಂಗಣ ಮಾಡುವುದಿಲ್ಲ. ನಮಗೆ ರೇಷ್ಮೆ ಕಾರ್ಖಾನೆ ಮುಖ್ಯ. ಸರ್ಕಾರಕ್ಕೆ ಈ ವಿಚಾರದಲ್ಲಿ ಯಾವ ಪ್ರತಿಷ್ಠೆ ಇಲ್ಲ. ಕೆಲವರು ಈ ಇಂತಹ ವಿಚಾರದಲ್ಲಿ ಹುಡುಗಾಟ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾರ್ಮಿಕರು, ಸಾರ್ವಜನಿಕರು ಆತಂಕಪಡುವುದು ಬೇಡ. ರೇಷ್ಮೆ ಕಾರ್ಖಾನೆ ಬೆಳವಣಿಗೆಗೆ ನಮ್ಮ ಸರ್ಕಾರ ಒತ್ತು ಕೊಟ್ಟಿದೆ. ವಿಚಾರ ಗೊತ್ತಿಲ್ಲದವರು ಬಾಯಿಗೆ ಬಂದಹಾಗೆ ಮಾತನಾಡಿದರೆ ಏನೂ ಮಾಡುವುದು ಹೇಳಿ?ರೇಷ್ಮೆ ಕಾರ್ಖಾನೆಗೆ ಕುಂದುಬಾರದಂತೆ ಕಾಪಾಡುವುದು ನಮ್ಮ ಜವಾಬ್ದಾರಿ. ಇದರಲ್ಲಿ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಅವರು ರಾಜಕೀಯಕ್ಕಾಗಿ ಗೊಂದಲ ಸೃಷ್ಟಿಸಿದ್ದಾರೆ. ಕ್ರೀಡಾ ಅಧಿಕಾರಿಗಳು ಮತ್ತು ರೇಷ್ಮೆ ಅಧಿಕಾರಿಗಳ ಜತೆಗೆ ಸಭೆ ಮಾಡಿದ್ದು, ತೀರ ಅನಿವಾರ್ಯ ಇಲ್ಲವಾದರೆ ಈ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದಿಲ್ಲ ಎಂದು ತಿಳಿಸಿದರು.

ಹೈಕಮಾಂಡ್ ತೀರ್ಮಾನ 

ಅಧಿಕಾರ ಹಂಚಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾನು ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ಮಾತನಾಡಲ್ಲ. ಯಾರು ನನ್ನ ಬಗ್ಗೆ ಏನೇ ಹೇಳಿಕೆ ನೀಡಿದರೂ ಅದರ ಬಗ್ಗೆ ಉತ್ತರ ಕೊಡುವುದಿಲ್ಲ. ಪಕ್ಷದ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೇರೆ ವಿಚಾರಗಳು ನನಗೆ ಗೊತ್ತಿಲ್ಲ ಎಂದು ಹೇಳಿದರು.
ಯುದ್ಧ ಪೀಡಿತ ಕೊಲ್ಲಿ ಪ್ರದೇಶದಲ್ಲಿ ಮೈಸೂರಿನವರು ಸಿಲುಕಿರುವ ಬಗ್ಗೆ ಮಾಹಿತಿ ಇಲ್ಲ. ರಾಜ್ಯ ಸರ್ಕಾರ ಕನ್ನಡಿಗರ ರಕ್ಷಣೆಗೆ ಕ್ರಮ ಕೈಕೊಂಡಿದೆ. ಮುಖ್ಯಮಂತ್ರಿ ಈ ಬಗ್ಗೆ ಮಾತನಾಡಿ ಕ್ರಮ ವಹಿಸಿದ್ದಾರೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.