ನೂತನವಾಗಿ ಪುನರ್ ನಿರ್ಮಿಸಿರುವ ವರಕೋಡು ಶ್ರೀ ಬೀರೇಶ್ವರಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಪೂಜಿಸಲಾಯಿತು 
ಮೈಸೂರು

ವರಕೋಡು ಗ್ರಾಮದ ಶ್ರೀಬೀರೇಶ್ವರಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ

ಮೈಸೂರು: ತಾಲೂಕಿನ ವರಕೋಡು ಗ್ರಾಮದಲ್ಲಿರುವ ಶ್ರೀಬೀರೇಶ್ವರಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಕುಂಭಾಭಿಷೇಕದ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ವಿವಿಧ ಪೂಜಾ ಕೈಂಕರ್ಯ ನಡೆಸಲಾಗುತ್ತಿದೆ.
ವರಕೋಡು ಗ್ರಾಮದಲ್ಲಿರುವ ಶ್ರೀ ಬೀರೇಶ್ವರಸ್ವಾಮಿ ದೇವಾಲಯವನ್ನು ಪುನರ್ ನಿರ್ಮಿಸಿರುವ ದೇವಾಲಯದ ಆವರಣದಲ್ಲಿ ಮಾ.೧೦ರಿಂದ ವಿವಿಧ ಪೂಜಾ ಕಾರ್ಯ ಜರುಗುತ್ತಿದ್ದು, ಶಾಸ್ತ್ರೋಕ್ತವಾಗಿ ಗರ್ಭಗುಡಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಅರ್ಚಕ ಗಣೇಶ್ ದೀಕ್ಷಿತ್ ಅವರ ನೇತೃತ್ವದಲ್ಲಿ ಗುಡ್ಡಪ್ಪ ಶಿವು, ಮಹದೇವ ಸೇರಿದಂತೆ ಇನ್ನಿತರರ ಸಮ್ಮುಖದಲ್ಲಿ ಶಿವಲಿಂಗ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಿದ್ದು, ದಿನವಿಡಿ ಧಾರ್ಮಿಕ ಕಾರ್ಯ ನೇರವೇರಿಸಲಾಗಿದೆ.
ಇಂದು ಬೆಳಗ್ಗೆ ದೇವಾಲಯದ ಆವರಣದಲ್ಲಿ ಗಣಪತಿ ಹೋಮ, ಮೂಲದೇವರ ಪ್ರಾರ್ಥನೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ ಜರುಗಿತು. ಸಂಜೆ ೬ ಗಂಟೆಗೆ ವರಕೋಡು ಪುರಾತನ ಕಲ್ಯಾಣಿಯಿಂದ ಮಂಗಳವಾದ್ಯದೊಂದಿಗೆ ಗಡಿಕೂಟಗಳು ಮೆರವಣಿಗೆ ಮೂಲಕ ಬೀರೇಶ್ವರಸ್ವಾಮಿ ದೇವಾಲಯದ ಆವರಣಕ್ಕೆ ಆಗಮಿಸಿದವು. ಬಳಿಕ ದೇವಾಲಯದ ಮುಂಭಾಗವಿರುವ ಕೊಳದಲ್ಲಿ ಶಾಸ್ತ್ರೋಕ್ತವಾಗಿ ದೀಪದಾರತಿ ಬೆಳಗಲಾಯಿತು.
ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದು, ಇದರೊಂದಿಗೆ ದುದ್ದಗೆರೆ, ತಾಯೂರು, ಸಿದ್ದರಾಮನಹುಂಡಿ, ಕಾಳಿಸಿದ್ದನಹುಂಡಿ, ಬಿದರಹಳ್ಳಿಹುಂಡಿ, ಅಹಲ್ಯ ಗಡಿ ಗ್ರಾಮದ ದೇವರಕೂಟ, ಪೂಜೆ, ಬಸವ ಹಾಗೂ ವೀರಮಕ್ಕಳು ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ವಿವಿಧ ಧಾರ್ಮಿಕ ಕಾರ್ಯಕ್ರಮ

ಮಾ.೧೨ರಂದು ಬೆಳಗ್ಗೆ ೭.೩೦ಕ್ಕೆ ಕಾಗಿನೆಲೆ ಮಹಾಸಂಸ್ಥಾನದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನಿಧ್ಯದಲ್ಲಿ, ವರಕೋಡು ಗಡಿ ಗುರುಮಠದ ಶ್ರೀ ಗುರುಸ್ವಾಮಿ, ಗುರುದೇವು ಹಾಗೂ ಗಡಿ ದೇವಾಲಯದ ಗುಡ್ಡಪ್ಪರ ಸಮ್ಮುಖದಲ್ಲಿ ಬೀರೇಶ್ವರಸ್ವಾಮಿ ದೇವಾಲಯದಲ್ಲಿ ಗಣಪತಿ ಪೂಜೆ, ನವಗ್ರಹ ಪೂಜೆ, ಗೋಪೂಜೆ, ಯೋಗಶಾಲ ಪ್ರವೇಶ ನಡೆಯಲಿದೆ. ಬಳಿಕ ಕಲ್ಯಾಣಿಯಿಂದ ೧೦೧ ಹೆಣ್ಣು ಮಕ್ಕಳೊಂದಿಗೆ ಖೇಲು ಬಸವದೇವರ ಮೇಲೆ ಮಜ್ಜನ, ನಂದಿ ಧ್ವಜ, ಪೂಜಾ ಕುಣಿತ, ಬಸವ ಸತ್ತಿಗೆ ಸೂರಿಪಾನಿ, ವೀರಗಾಸೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ಬಳಿಕ ಬೀರೇಶ್ವರಸ್ವಾಮಿ ದೇವಾಲಯದಲ್ಲಿ ಪ್ರಸಾದ ವಿತರಣೆ ಜರುಗಲಿದೆ. ಪೂಜಾ ಮಹೋತ್ಸವ ಅಂಗವಾಗಿ ಅಂದು ಸಂಜೆ ೭ ಗಂಟೆಗೆ ಮೂಡಲಹುಂಡಿ ಗ್ರಾಮದಲ್ಲಿ `ದಕ್ಷಯಜ್ಞ ಅಥವಾ `ಭೃಗುಮುನಿಯ ಗರ್ವಭಂಗ ಪೌರಾಣಿಕ ನಾಟಕ ಪ್ರದರ್ಶನ ಜರುಗಲಿದೆ.
ಮಾ.೧೩ರಂದು ಮುಂಜಾನೆ ೫.೧೦ರಿಂದ ೬.೧೦ರೊಳಗೆ ಸಲ್ಲುವ ಬ್ರಾಹ್ಮಿ ಮುಹೂರ್ತದಲ್ಲಿ ಬೀರೇಶ್ವರಸ್ವಾಮಿ ಲಿಂಗ ಪ್ರತಿಷ್ಠಾಪನೆ, ಕುಂಭ ಕಳಸ ಪ್ರತಿಷ್ಠಾಪನೆ, ಕುಂಭಾಭಿಷೇಕ ನೆರವೇರಲಿದೆ. ನಂತರ ಮಧ್ಯಾಹ್ನ ೧ ಗಂಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ. ಮಾ.೧೪ರಂದು ಬೆಳಗ್ಗೆ ೯ ಗಂಟೆಗೆ ಕೂಟ ವಿಸರ್ಜನೆಯಾಗಲಿದೆ.

ಬೀರೇಶ್ವರ ದೇವಾಲಯ ಉದ್ಘಾಟಿಸಲಿರುವ ಸಿಎಂ ಸಿದ್ದರಾಮಯ್ಯ

ಪುನರ್ ನಿರ್ಮಿಸಿರುವ ಬೀರೇಶ್ವರ ಸ್ವಾಮಿ ದೇವಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮಾ.೧೩ರಂದು ಬೆಳಗ್ಗೆ ೧೧ ಗಂಟೆಗೆ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿಲಿರುವ ಸಿಎಂ ಸಿದ್ದರಾಮಯ್ಯ ದೇವಾಲಯದ ಸಮೀಪವೇ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬೆಳಗ್ಗೆ ೧೧.೪೦ಕ್ಕೆ ಆಗಮಿಸಲಿದ್ದಾರೆ. ಬಳಿಕ ದೇವಾಲಯಕ್ಕೆ ಬಂದು, ಕಾಗಿನೆಲೆ ಮಹಾಸಂಸ್ಥಾನದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ನೂತನ ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಚಿವ ಭೈರತಿ ಸುರೇಶ್, ಸಂಸದ ಸುನೀಲ್ ಬೋಸ್, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.