ಕರ್ನಾಟಕ ರಣಜಿ ತಂಡದ ಯುವ ಬ್ಯಾಟರ್ ರೋಹನ್ ಎ. ಪಾಟೀಲ್, ನಿಧಾನಗತಿಯ ಪಿಚ್‌ನಲ್ಲಿ ತಾಳ್ಮೆಯ ಬ್ಯಾಟಿಂಗ್ ಮೂಲಕ 72 ರನ್ ಗಳಿಸಿ ಗಮನ ಸೆಳೆದಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಿದ ಅವರು, ಜತೆಯಾಟದ ನೆರವಿನಿಂದ ಇನಿಂಗ್ಸ್ ಕಟ್ಟುವ ಮಹತ್ವವನ್ನು ಎತ್ತಿಹಿಡಿದಿದ್ದಾರೆ.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಪ್ರವಾಸಿ ತ್ರಿಪುರ ತಂಡಗಳ ನಡುವಿನ ರಣಜಿ ಪಂದ್ಯದಲ್ಲಿ ರೋಹನ್ ಎ. ಪಾಟೀಲ್ ಹಿರಿಯರ ಅನುಪಸ್ಥಿಯಲ್ಲೂ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ.
ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ್ದು, ರನ್ ಗಳಿಸುವ ಆತುರಕ್ಕಿಂತ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಬೀಸಿದ ಅವರು, ಜತೆಯಾಟದ ಮಹತ್ವವನ್ನೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಸಂಬಂಧ ಮಂಗಳವಾರ ಸಂಜೆ ‘ವಿಜಯವಾಣಿ’ಯೊಂದಿಗೆ ಮಾತನಾಡಿದರು.
ತಂಡದಲ್ಲಿ ಹಿರಿಯ ಆಟಗಾರರು ಇಲ್ಲದಿರುವಾಗ ಯುವ ಆಟಗಾರರ ಮೇಲೆ ಹೆಚ್ಚಿನ ಹೊಣೆಗಾರಿಕೆ ಬೀಳುತ್ತದೆ. ಆ ಜವಾಬ್ದಾರಿಯನ್ನು ಒತ್ತಡವಾಗಿ ಪರಿಗಣಿಸುವ ಬದಲು, ಸಾಮರ್ಥ್ಯ ಪ್ರದರ್ಶಿಸುವ ಅವಕಾಶವಾಗಿ ನೋಡಬೇಕು ಎಂಬುದು ರೋಹನ್ ನಿಲುವು. ಹಿರಿಯ ಆಟಗಾರರು ಇಲ್ಲದಿದ್ದಾಗ ಜವಾಬ್ದಾರಿ ಹೆಚ್ಚುತ್ತದೆ. ಆ ಅವಕಾಶವನ್ನು ಗುರುತಿಸಿ, ಜವಾಬ್ದಾರಿ ಹೊತ್ತು ಪ್ರದರ್ಶನ ನೀಡಬೇಕು. ಇಂತಹ ಜವಾಬ್ದಾರಿ ಸಿಕ್ಕಾಗ ನಮಗೆ ಸಂತೋಷವಾಗುತ್ತದೆ. ಹಿರಿಯರು ಇಲ್ಲದಿದ್ದಾಗ ನಾವು ಮುಂದೆ ಬಂದು ತಂಡಕ್ಕಾಗಿ ಆಡಬೇಕು. ಇದರಿಂದ ನಮ್ಮ ಆಟದಲ್ಲೂ ಪ್ರಬುದ್ಧತೆ ಬರುತ್ತದೆ ಎಂದರು.
ನಿಧಾನಗತಿಯ ಪಿಚ್‌ನಲ್ಲಿ ರನ್ ಗಳಿಸುವುದು ಸುಲಭವಲ್ಲ. ಅದರಲ್ಲೂ ಬೌಲರ್‌ಗಳು ನಿಧಾನವಾಗಿ ಚೆಂಡೆಸೆಯುವಾಗ ನೇರ ಹೊಡೆತಗಳನ್ನು ಆಡಲು ಎಚ್ಚರಿಕೆ ಅಗತ್ಯ. ಇಂತಹ ಸಂದರ್ಭದಲ್ಲಿ ಆತುರದ ಆಟಕ್ಕೆ ಮುಂದಾಗದೆ, ವಿಕೆಟ್‌ನ ಅಡ್ಡಲಾಗಿ ಚೆಂಡನ್ನು ಹೊಡೆಯುವ ಮೂಲಕ ರನ್ ಗಳಿಸಲು ಸಾಧ್ಯವಾಯಿತು. ಇದು ಆತ್ಮವಿಶ್ವಾಸ ಹೆಚ್ಚಿಸಿತು ಎಂದ ಅವರು ತಾಳ್ಮೆಯೇ ಯಶಸ್ಸಿನ ಮಂತ್ರ ಎಂಬುದನ್ನು ತೋರಿಸಿಕೊಟ್ಟರು.
ಕೆ.ವಿ.ಅನೀಶ್ ಅವರೊಂದಿಗಿನ ಜತೆಯಾಟ ನನಗೆ ಸಾಕಷ್ಟು ನೆರವಾಯಿತು. ವಿಕೆಟ್‌ನ ಅಡ್ಡಲಾಗಿ ರನ್ ಗಳಿಸಲು ಆರಂಭಿಸಿದಾಗ ಆತ್ಮವಿಶ್ವಾಸ ಹೆಚ್ಚಾಯಿತು. ಇಂತಹ ಪಿಚ್‌ಗಳಲ್ಲಿ ಕೆಟ್ಟ ಎಸೆತಕ್ಕಾಗಿ ಕಾಯಬೇಕು. ಅವಕಾಶ ಸಿಕ್ಕಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ಪಿನ್ನರ್‌ಗಳು ಕೂಡ ನಿಧಾನವಾಗಿ ಬೌಲಿಂಗ್ ಮಾಡುತ್ತಿದ್ದರಿಂದ, ಅವರ ಬೌಲಿಂಗ್‌ಗೆ ತಕ್ಕಂತೆ ಆಡಿದೆ ಎಂದು ಬ್ಯಾಟಿಂಗ್ ತಂತ್ರವನ್ನು ರೋಹನ್ ವಿವರಿಸಿದರು.
ಚೆಂಡು ನಿಧಾನವಾಗಿ ಬರುತ್ತಿದ್ದುದರ ಜತೆಗೆ ಕೆಲವು ಎಸೆತಗಳು ಕೆಳಮಟ್ಟದಲ್ಲಿ ಬರುತ್ತಿದ್ದರೂ, ರೋಹನ್ ಪಿಚ್‌ಅನ್ನು ಬ್ಯಾಟಿಂಗ್‌ಗೆ ಪ್ರತಿಕೂಲವೆಂದು ಪರಿಗಣಿಸಲಿಲ್ಲ. ಅವರ ಪ್ರಕಾರ, ಅದು ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಬ್ಬರಿಗೂ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ನೀಡುವ ವಿಕೆಟ್. ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಆಡಿದರೆ ರನ್ ಗಳಿಸಲು ಸಾಧ್ಯ ಎಂಬುದು ಅವರ ಅಭಿಪ್ರಾಯ.
ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡಿರುವ ಆಟಗಾರರು ರಣಜಿ ಕ್ರಿಕೆಟ್‌ನಂತಹ ಸುದೀರ್ಘ ಮಾದರಿಯ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸುವುದೇ ದೊಡ್ಡ ಸವಾಲು. ಆದರೆ, ತಮ್ಮನ್ನು ವೈಟ್‌ಬಾಲ್ ಕ್ರಿಕೆಟ್‌ಗೆ ಮಾತ್ರ ಸೀಮಿತಗೊಳಿಸುವ ದೃಷ್ಟಿಕೋನವನ್ನು ರೋಹನ್ ಒಪ್ಪುವುದಿಲ್ಲ. ನಾನು ವೈಟ್‌ಬಾಲ್ ಕ್ರಿಕೆಟ್ ಆಡುತ್ತೇನೆ. ಆದರೆ ರೆಡ್‌ಬಾಲ್ ಕ್ರಿಕೆಟ್‌ನಲ್ಲೂ ಆಡಿದ್ದೇನೆ. ಅಂತಿಮವಾಗಿ ಆಯ್ಕೆ ನಮ್ಮ ಪ್ರದರ್ಶನವನ್ನು ಅವಲಂಬಿಸಿರುತ್ತದೆ. ಉತ್ತಮವಾಗಿ ಆಡಿದರೆ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಾದರೂ, ಯಾವುದೇ ಕ್ರಮಾಂಕದಲ್ಲಾದರೂ ಅವಕಾಶ ಪಡೆಯಬಹುದು ಎಂದು ಆತ್ಮವಿಶ್ವಾಸದಿಂದ ಹೇಳಿದರು.
ಎದುರಾಳಿ ತಂಡದ ಬ್ಯಾಟಿಂಗ್ ಬಲವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ತಂಡ ದೊಡ್ಡ ಮೊತ್ತದತ್ತ ಗಮನ ಹರಿಸಿದೆ. 150 ಅಥವಾ 180 ರನ್‌ಗಳಿಗೆ ಸೀಮಿತವಾಗುವುದಕ್ಕಿಂತ 200ರಿಂದ 250 ರನ್ ಮುನ್ನಡೆ ಪಡೆಯುವ ಉದ್ದೇಶವಾಗಿದೆ. ಬೌಲಿಂಗ್ ವಿಭಾಗದ ಮೇಲೆ ವಿಶ್ವಾಸವಿಟ್ಟಿರುವ ರೋಹನ್, ಎದುರಾಳಿಯನ್ನು ಬೇಗ ಆಲೌಟ್ ಮಾಡುವ ಸಾಮರ್ಥ್ಯವೂ ತಂಡಕ್ಕಿದೆ ಎಂದು ಅಭಿಪ್ರಾಯಪಟ್ಟರು. ಇತರ ಆಟಗಾರರೂ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಬಲ್ಲರು. ಜೊತೆಗೆ ನಮ್ಮ ಬೌಲಿಂಗ್ ವಿಭಾಗದ ಮೇಲೆ ವಿಶ್ವಾಸವಿದ್ದು, ಎರಡು ಸೆಷನ್‌ಗಳೊಳಗೆ ಎದುರಾಳಿಯನ್ನು ಆಲೌಟ್ ಮಾಡಬಹುದು ಎಂಬ ನಿರೀಕ್ಷೆಯಿದೆ ಎಂದರು.
ಇನಿಂಗ್ಸ್‌ನಲ್ಲಿ ಇಂತಿಷ್ಟೇ ರನ್ ಗಳಿಸಬೇಕೆಂಬ ವೈಯಕ್ತಿಕ ಗುರಿ ನಿಗದಿಪಡಿಸಿಲ್ಲ ಎಂದು ರೋಹನ್ ಸ್ಪಷ್ಟಪಡಿಸಿದರು. ಪಿಚ್‌ನ ಪರಿಸ್ಥಿತಿ, ಪಂದ್ಯದ ಸ್ಥಿತಿ ಹಾಗೂ ರನ್ ಗಳಿಸುವ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಯೋಜನೆ ರೂಪಿಸುವುದಾಗಿ ತಿಳಿಸಿದರು. ನಾವು ಯಾವುದೇ ನಿರ್ದಿಷ್ಟ ಗುರಿ ಇಟ್ಟುಕೊಂಡಿಲ್ಲ. ಮೊದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಎಷ್ಟು ರನ್ ಗಳಿಸಬಹುದು ಎಂಬುದನ್ನು ನೋಡಬೇಕು. ಪಂದ್ಯದ ಸ್ಥಿತಿಗೆ ಅನುಗುಣವಾಗಿ ಯೋಜನೆ ರೂಪಿಸುತ್ತೇವೆ ಎಂದರು.