ಮೈಸೂರು ರೌಂಡ್ ಟೇಬಲ್-21 ಮತ್ತು ಮೈಸೂರು ಲೇಡಿಸ್ ಸರ್ಕಲ್-9ನಿಂದ ನಗರದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಬಾಲದಂಡಿ, ಸುಂದರರಾಜ್, ಶುಶ್ರೂತ್ ಬೆಳಗೂರ್, ಸೂರಜ್ ಕೃಷ್ಣಂ, ಸುನಿಲ್ ಶಂಕರ್, ನಾಗಶ್ರೀ ನಿಖಿಲೇಶ್, ಅಕ್ಷಯ್ ಕೋನೆರಿ, ಎಸ್.ಶ್ರೀನಿಜಾ ಇತರರು ಇದ್ದರು.
- ಸೇವೆಯನ್ನು ಗುರುತಿಸಿದರೆ ಇನ್ನಷ್ಟು ಉತ್ತಮ ಕೆಲಸ ಮಾಡಲು ಸ್ಫೂರ್ತಿ ದೊರೆಯುತ್ತದೆ
- ಪೊಲೀಸರೂ ಮನುಷ್ಯರೇ. ಕೆಲವೊಮ್ಮೆ ಅವರಿಂದಲೂ ತಪ್ಪಾಗುವುದು ಸಹಜ
ಮೈಸೂರು:ಪೊಲೀಸರ ಕರ್ತವ್ಯ ಮತ್ತು ಸೇವೆಯನ್ನು ಗುರುತಿಸುವವರು ತೀರಾ ವಿರಳ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಮೈಸೂರು ರೌಂಡ್ ಟೇಬಲ್-21 ಮತ್ತು ಮೈಸೂರು ಲೇಡಿಸ್ ಸರ್ಕಲ್-9ನಿಂದ ನಗರದ ವಿಂಡ್ ಚೀಮ್ಸ್ ಸಭಾಂಗಣದಲ್ಲಿ ಪೊಲೀಸ್ ಸಿಬ್ಬಂದಿಗೆ ಆಯೋಜಿಸಿದ್ದ ‘ನೈಟ್ಸ್ ಇನ್ ಖಾಕಿ’ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಬಹಳ ಕಷ್ಟದ ಕೆಲಸ. ಹೀಗಾಗಿ ಇಂತಹ ಕೆಲಸ ಮಾಡುವವರನ್ನು ಗುರುತಿಸಿ, ಪ್ರೊತ್ಸಾಹಿಸುವ ಅಗತ್ಯ ಬಹಳ ಇದೆ. ಪೊಲೀಸ್ ಇಲಾಖೆಯ ಕಡೆಗೆ ಬೆರಳು ತೋರಿಸಿ ಮಾತನಾಡುವವರೇ ಜಾಸ್ತಿ. ಪೊಲೀಸರ ಸೇವಾಕಾರ್ಯ ಗುರುತಿಸಿ ಮಾತನಾಡಿಸುವವರು ತೀರಾ ಕಡಿಮೆ ಎಂದರು.
ಪೊಲೀಸ್ ಸಿಬ್ಬಂದಿ ತಮ್ಮ ವೈಯಕ್ತಿಕ ಜೀವನವನ್ನು ಬದಿಗೊತ್ತಿ ವರ್ಷದ ಎಲ್ಲ ಕಾಲದಲ್ಲೂ ಸೇವೆ ಮಾಡುತ್ತಿರುತ್ತಾರೆ. ಯಾವ ಹೊತ್ತಿನಲ್ಲೂ ಕರ್ತವ್ಯದ ಕರೆ ಬಂದಾಗ ಸನ್ನದ್ಧರಾಗಿ ಬರುತ್ತಾರೆ. ಸೇವೆಯನ್ನು ಗುರುತಿಸಿದರೆ ಇನ್ನಷ್ಟು ಉತ್ತಮ ಕೆಲಸ ಮಾಡಲು ಸ್ಫೂರ್ತಿ ದೊರೆಯುತ್ತದೆ ಎಂದು ಹೇಳಿದರು.
ಎಲ್ಲ ಧರ್ಮದವರು ಅವರವರ ಧರ್ಮದ ಹಬ್ಬಗಳನ್ನು, ಆಚರಣೆಗಳನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಆದರೆ ಪೊಲೀಸರು ಮಾತ್ರ ಯಾವುದೇ ಹಬ್ಬ ಮಾಡದೆ ಬಂದೋಬಸ್ತ್ ಕಾರ್ಯ, ಸಂಚಾರ ನಿರ್ವಹಣೆ ಮಾಡುತ್ತಾರೆ ಎಂದರು.
ಈ ಸಮಯದಲ್ಲಿ ಅವರು ತಮ್ಮ ಕುಟುಂಬದ ಜತೆ ಹಬ್ಬ ಆಚರಣೆಯ ಸಮಯವನ್ನು ತ್ಯಾಗ ಮಾಡಿ, ಕರ್ತವ್ಯ ನಿರ್ವಹಣೆಯಲ್ಲಿ ಭಾಗಿಯಾಗುತ್ತಾರೆ. ವೈಯಕ್ತಿಕ ಜೀವನವನ್ನು ಬದಿಗಿರಿಸುತ್ತಾರೆ ಎಂದರು.
ಪೊಲೀಸರೂ ಮನುಷ್ಯರೇ. ಅವರಿಂದಲೂ ತಪ್ಪಾಗುವುದು ಸಹಜ. ಯಾರೋ ಒಂದಿಬ್ಬರು ಮಾಡಿದ ತಪ್ಪನ್ನು ಇಡೀ ಇಲಾಖೆಯೇ ಮಾಡಿದಂತೆ ದೂಷಣೆ ಮಾಡುವುದು ಸರಿಯಲ್ಲ. ಸಣ್ಣ ತಪ್ಪನ್ನೇ ಎತ್ತಿ ತೋರಿಸುವ ಪ್ರವೃತ್ತಿ ಮುಂದುವರಿ ದಿರುವುದು ವಿಷಾದನೀಯ ಎಂದರು.
ನಗರ ಉಪ ಪೊಲೀಸ್ ಆಯುಕ್ತ ಸುಂದರರಾಜ್ ಮಾತನಾಡಿ, ಸನ್ಮಾನ, ಪ್ರಶಸ್ತಿಗಳು ಜವಾಬ್ದಾರಿಯನ್ನು ಇನ್ನು ಹೆಚ್ಚಿಸುತ್ತವೆ. ಇನ್ನೂ ಮುಂದೆ ಪ್ರಶಸ್ತಿ ಪಡೆದವರು ಮೈಯಲ್ಲ ಕಣ್ಣಾಗಿ ಕೆಲಸ ಮಾಡಬೇಕು. ಹಲವು ಬಾರಿ ಆಲೋಚನೆ ಮಾಡಿ ಮುಂದೆ ಹೆಜ್ಜೆ ಇಡಬೇಕು ಎಂದು ಕಿವಿಮಾತು ಹೇಳಿದರು. ರೌಂಡ್ ಟೇಬಲ್ 13ರ ವಲಯ ಅಧ್ಯಕ್ಷ ಶುಶ್ರೂತ್ ಬೆಳಗೂರ್, ಸೂರಜ್ ಕೃಷ್ಣಂ, ಸುನಿಲ್ ಶಂಕರ್, ಲೇಡಿಸ್ ಸರ್ಕಲ್‌ನ ವಲಯಾಧ್ಯಕ್ಷೆ ನಾಗಶ್ರೀ ನಿಖಿಲೇಶ್, ಮೈಸೂರು ರೌಂಡ್‌ಟೇಬಲ್ 21ರ ಅಧ್ಯಕ್ಷ ಅಕ್ಷಯ್ ಕೋನೆರಿ, ಲೇಡಿಸ್ ಸರ್ಕಲ್ -9ರ ಅಧ್ಯಕ್ಷೆ ಎಸ್.ಶ್ರೀನಿಜಾ ಇತರರು ಇದ್ದರು.
ಪೊಲೀಸ್ ಸಿಬ್ಬಂದಿ ಎನ್.ಮಹೇಶ್, ಎ.ಬಾಲಸುಬ್ರಮಣ್ಯ, ಲಿಂಗರಾಜಪ್ಪ, ಕೆ.ಜೆ.ಸುರೇಶ್, ಕೆ.ಅಜ್ರಾ, ವನಜಾಕ್ಷಿ, ಎಂ.ಡಿ.ಪ್ರದೀಪ್, ಎ.ಎನ್.ಲೋಕೇಶ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.