ಹುಣಸೂರಿನ ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಶಾಸಕ ಹರೀಶ್‌ಗೌಡ ಹಾಗೂ ಮುಖಂಡರು.
ಭೂ ರಹಿತ ಲಕ್ಷಾಂತರ ಕುಟುಂಬಗಳಿಗೆ ಭೂಮಿ ಕಲ್ಪಿಸಿದ, ಶೋಷಿತ, ಅಲೆಮಾರಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಪರಿಶಿಷ್ಟ ಸಮುದಾಯಗಳಿಗೆ ಶಕ್ತಿ ತುಂಬಿದ, ರಾಜಕೀಯ ಅಧಿಕಾರ ಕಲ್ಪಿಸಿದ ದೇವರಾಜ ಅರಸು ನಮ್ಮ ನಾಡಿನ ಆಸ್ತಿ, ಅಸ್ಮಿತೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಬಣ್ಣಿಸಿದರು.
ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸರ 111ನೇ ಜಯಂತಿ ಅಂಗವಾಗಿ ಬಿಸಿಎಂ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವರಾಜ ಅರಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಅರಸರ ಮನೆ ಪಾಳು ಬಿದ್ದಿದ್ದು, ಎರಡು ವರ್ಷಗಳ ಹಿಂದೆಯೇ ಮನೆಯನ್ನು ಸ್ಮಾರಕವಾಗಿಸಲು 20 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದೆ. ಆದರೆ ಅವರ ಕುಟುಂಬದವರು ಸಿದ್ಧರಿರಲಿಲ್ಲ. ಈಗಲೂ ಕುಟುಂಬದವರು ಒಪ್ಪಿದಲ್ಲಿ ಸ್ಮಾರಕವಾಗಿಸಲು ಸಿದ್ಧ ಎಂದರು.
ಹುಣಸೂರಿನ ಅರಸು ಭವನ ನನೆಗುದಿಗೆ ಬಿದ್ದಿರುವ ಪತ್ರಿಕಾ ವರದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಮೇಲೆ ಒತ್ತಡ ಹಾಕಿ ಒಂದು ಕೋಟಿ ರೂ. ಅನುದಾನದಡಿ ಒಳಾಂಗಣ ಸೇರಿದಂತೆ ಎಲ್ಲ ಕಾಮಗಾರಿಗಳು ಮುಗಿದಿದೆ. ಮುಂಭಾಗದ ಆವರಣದಲ್ಲಿ ಇಂಟರ್ ಲಾಕ್, ಪಾರ್ಕ್ ಹಾಗೂ ಉದ್ಯಾನವನ ನಿರ್ಮಿಸಲು ಒಂದು ಕೋಟಿ ರೂ. ಅಗತ್ಯವಿದ್ದು, ಸರ್ಕಾರದಿಂದ ಮಂಜೂರು ಮಾಡಿಸಿ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
225 ಕೋಟಿ ರೂ. ವೆಚ್ಚದಡಿ ಉಂಡವಾಡಿ ಯೋಜನೆ ಮೂಲಕ 170 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ, ಮರೂರು ಮತ್ತು ಕೆ.ಎಂ.ವಾಡಿ ನಾಲಾ ಆಧುನೀಕರಣ ಯೋಜನೆ ಸಾಕಾರಗೊಳ್ಳುತ್ತಿದೆ. 71ಕೋಟಿ ವೆಚ್ಚದ ನಗರದ ಯುಜಿಡಿ ಯೋಜನೆಗೆ ಒಳಚರಂಡಿ ಮಂಡಳಿ ಒಪ್ಪಿಗೆ ನೀಡಿದ್ದು, ಸಂಪುಟ ಅನುಮೋದನೆ ಕೊಡಿಸುವಂತೆ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ ಎಂದರು.
ಕಳೆದ 15 ವರ್ಷಗಳಿಂದ ಗ್ರಾಮಗಳ ವಿವಾದದಿಂದ ನನೆಗುದಿಗೆ ಬಿದ್ದಿದ್ದ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡದ ನಿವೇಶನ ಸಮಸ್ಯೆಯನ್ನು ಬಗೆಹರಿಸಿದ್ದು, ಕಟ್ಟಡ ನಿರ್ಮಾಣವಾಗುತ್ತಿದೆ ಎಂದರು.
ನಗರಸಭೆ ಪೌರಾಯುಕ್ತೆ ಎಂ.ಮಾನಸಾ, ಬಿಸಿಎಂ ಅಧಿಕಾರಿ ಆರತಿ, ಬಿಇಒ ಕಾಳನಾಯಕ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಶರವಣ, ಮಾಜಿ ಸದಸ್ಯರಾದ ಕೃಷ್ಣರಾಜಗುಪ್ತ, ಸತೀಶ, ರಾಣಿ, ಜಿ.ಪಂ.ಮಾಜಿ ಸದಸ್ಯ ಫಜಲುಲ್ಲಾ, ಜೆಡಿಎಸ್ ಅಧ್ಯಕ್ಷ ಸುರೇಂದ್ರ, ಕಾರ್ಯದರ್ಶಿ ಸತೀಶ್‌ಪಾಪಣ್ಣ, ಮುಖಂಡರಾದ ಕಿರಂಗೂರು ಬಸವರಾಜು, ತಟ್ಟೆಕೆರೆ ಶ್ರೀನಿವಾಸ್, ಬಿಳಿಕೆರೆ ಮಧು, ಶಬರೀಶ್, ಕೆಂಪೇಗೌಡ ಬಸವಲಿಂಗಯ್ಯ, ನಿಂಗರಾಜ ಮಲ್ಲಾಡಿ ಸೇರಿದಂತೆ ಅನೇಕರಿದ್ದರು.