ಪೀಪಲ್ಸ್ ಪಾರ್ಕ್ ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಕಲ್ಪಿತ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಬೆಂಗಳೂರಿನ ಉಪ ಆಯುಕ್ತೆ ಸ್ಮಿತಾ ರಾವ್ ಮಾತನಾಡಿದರು. ಬಿ.ಮಂಜುನಾಥ, ರಮೇಶ್ ನರಸಯ್ಯ, ಸುಮಾ ಬಿ.ಕೋಡಿಹಳ್ಳಿ ಇದ್ದರು. 
ಮೈಸೂರು

ದಿನಪತ್ರಿಕೆ ಓದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಅಬಕಾರಿ ಇಲಾಖೆಯ ಬೆಂಗಳೂರಿನ ಉಪ ಆಯುಕ್ತೆ ಸ್ಮಿತಾ ರಾವ್ ಅಭಿಮತ
ಮೈಸೂರು: ದಿನಪತ್ರಿಕೆಗಳನ್ನು ನಿತ್ಯ ಓದಬೇಕು. ಅದರಲ್ಲೂ ಸಂಪಾದಕೀಯ ಅಂಕಣಗಳು ಓದುವುದು ಜ್ಞಾರ್ನಾಜನೆಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುತ್ತದೆ ಎಂದು ಅಬಕಾರಿ ಇಲಾಖೆಯ ಬೆಂಗಳೂರಿನ ಉಪ ಆಯುಕ್ತೆ ಸ್ಮಿತಾ ರಾವ್ ಹೇಳಿದರು.
ಪೀಪಲ್ಸ್ ಪಾರ್ಕ್ ನಗರ ಕೇಂದ್ರ ಗ್ರಂಥಾಲಯ ವತಿಯಿಂದ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಕುರಿತು ಸೋಮವಾರ ಆಯೋಜಿಸಿದ್ದ ಕಲ್ಪಿತ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವಸ್ತುಗಳ ಸೇವನೆ ಯುವಕರಲ್ಲಿ ವ್ಯಾಪಿಸುತ್ತಿದ್ದು, ಪೊಲೀಸ್ ಇಲಾಖೆಯಂತೆಯೇ ಅಬಕಾರಿ ಇಲಾಖೆಗೂ ಅದನ್ನು ನಿಗ್ರಹಿಸುವುದು ದೊಡ್ಡ ಸವಾಲಾಗಿದೆ ಎಂದರು.
ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಪೊಲೀಸ್ ಇಲಾಖೆಗೆ ಸೇರಲು ಇಚ್ಛಿಸಿರುವುದು ಪ್ರಶಂಸಾರ್ಹ. ಇಂದಿನ ಪರಿಸ್ಥಿತಿ ಸಾಕಷ್ಟು ಬದಲಾಗಿದ್ದು, ಅಪರಾಧ ಪತ್ತೆಯಲ್ಲಿ ಹೊಸ ಸವಾಲು ಎದುರಾಗುತ್ತಿವೆ. ಅಪರಾಧಿ ಯಾರೆಂದು ತಿಳಿಯಲಾಗದ ಹಾಗೂ ಅಪರಾಧ ಎಲ್ಲಿಂದ ಎಸಗಲಾಗುತ್ತದೆ ಎಂದು ತಿಳಿಯುವುದು ಕಷ್ಟದ ಕೆಲಸವಾಗಿದೆ ಎಂದು ಹೇಳಿದರು.
ಪೊಲೀಸ್ ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ಮಹಿಳೆಯರು ವೃತ್ತಿ ಮತ್ತು ವೈಯಕ್ತಿಕ ಜೀವನದ ಸಮತೋಲನ ಕಾಪಾಡಿಕೊಂಡು  ಎದುರಾಗುವ ಸಮಸ್ಯೆ ಎದುರಿಸಲು ಮಾನಸಿಕ ಸ್ಥೈರ್ಯ ಬೆಳೆಸಿಕೊಳ್ಳಬೇಕು. ದೈಹಿಕ ಆರೋಗ್ಯ ಮತ್ತು ಸಧೃಡತೆ ಕಾಪಾಡಿಕೊಂಡು ಹೋಗಬೇಕು ಎಂದರು.
ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಬಿ.ಮಂಜುನಾಥ ಮಾತನಾಡಿ, ಪೀಪಲ್ಸ್ ಪಾರ್ಕ್ ಗ್ರಂಥಾಲಯದಲ್ಲಿ ನಡೆಸುತ್ತಿರುವ ಕಲ್ಪಿತ ಪರೀಕ್ಷೆಯನ್ನು ಇತರ ಶಾಖಾ ಗ್ರಂಥಾಲಯಗಳಿಗೂ ವಿಸ್ತರಣೆ ಮಾಡಲು ಕೋರಿಕೆಗಳು ಬರುತ್ತಿವೆ. ಯಾವುದೇ ಸರ್ಕಾರದ ಸಂಸ್ಥೆಗಳು ಈ ನಿಟ್ಟಿನಲ್ಲಿ ಕ್ರಮ ವಹಿಸಿದರೆ ಅದಕ್ಕೆ ನೆರವು ನೀಡಲಾಗುವುದು ಎಂದು ತಿಳಿಸಿದರು.
ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ, ಕಲ್ಪಿತ ಪರೀಕ್ಷೆ ಮತ್ತು ತರಬೇತಿ ಕೇಂದ್ರದ ಮುಖ್ಯಸ್ಥ ರಮೇಶ್ ನರಸಯ್ಯ, ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಸುಮಾ ಬಿ.ಕೋಡಿಹಳ್ಳಿ ಉಪಸ್ಥಿತರಿದ್ದರು. ಕಲ್ಪಿತ ಪರೀಕ್ಷೆಯಲ್ಲಿ ಅಂದಾಜು 100 ಅಭ್ಯರ್ಥಿಗಳು ಹಾಜರಾಗಿದ್ದರು.