ಹುಣಸೂರು ನಗರದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ಶೈಕ್ಷಣಿಕ ವರ್ಷದ ಶಾಲಾ ಆರಂಭೋತ್ಸವ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಗೆ ಗುಲಾಬಿ ಹೂವು ನೀಡುವ ಮೂಲಕ ಸ್ವಾಗತ ಕೋರಲಾಯಿತು. ಬಿಇಒ ಕಾಳನಾಯಕ, ಬಿಆರ್‌ಸಿ ಹೇಮಲತಾ, ಎಚ್.ಎಸ್.ಸುರೇಶ್, ನರಸಿಂಹ, ಡಾ.ಮಾದುಪ್ರಸಾದ್ ಇತರರಿದ್ದರು.  
ಮೈಸೂರು

ಶಾಲೆಗಳಲ್ಲಿ ದ್ವಿಭಾಷಾ ಬೋಧನಾ ಪದ್ಧತಿ ಜಾರಿ

ಎ. ಆರ್. ರಘುರಾಮ
ಹುಣಸೂರು : ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ತಾಲೂಕಿನ 31 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ಬೋಧನಾ ಪದ್ಧತಿ ಜಾರಿಗೊಳಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯಕ ತಿಳಿಸಿದರು.
ನಗರದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ, ಪಾಲಕರ ಮತ್ತು ಶಿಕ್ಷಕರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಆಂಗ್ಲಭಾಷೆ ಕಲಿಕೆ ಕಡಿಮೆ ಎನ್ನುವ ಭಾವನೆ ದೂರಾಗಿಸಲು ಇದೀಗ ಸರ್ಕಾರ ಹತ್ತು ಹಲವು ಯೋಜನೆ ಗಳನ್ನು ಜಾರಿಗೊಳಿಸಿದೆ. ಈ ಪೈಕಿ ದ್ವಿಭಾಷಾ ಬೋಧನಾ ಪದ್ಧತಿ ಕೂಡ ಒಂದಾಗಿ. ಇದಕ್ಕಾಗಿ 80 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದರು.
31 ಶಾಲೆಗಳಿಗೂ ದ್ವಿಭಾಷಾ ಭೋಧನಾ ಪದ್ಧತಿಗೆ ಅನುಗುಣವಾದ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ. ತಾಲೂಕಿನಲ್ಲಿ ಪ್ರೌಢಶಾಲಾ ವಿಭಾಗಕ್ಕೆ 41 ಅತಿಥಿ ಶಿಕ್ಷಕರು ಮತ್ತು ಪ್ರಾಥಮಿಕ ಶಾಲಾ ವಿಭಾಗಕ್ಕೆ 75 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಇಲಾಖೆ ಅನುಮತಿನೀಡಿದೆ. ಇಂದಿನಿಂದಲೇ ಅತಿಥಿ ಶಿಕ್ಷಕರ ನೇಮಕಾತಿ ಕಾರ್ಯ ಆರಂಭಗೊಂಡಿದೆ. ತಾಲೂಕಿನಾದ್ಯಂತ ಶಿಕ್ಷಕರ ಕೊರತೆ ಎದುರಾಗದಂತೆ ಕ್ರಮವಹಿಸಲಾಗಿದೆ ಎಂದರು. ತಾಲೂಕಿನಲ್ಲಿ ಪ್ರಸ್ತುತ 10 ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಶಿಕಣ ದೊರೆಯುತ್ತಿದೆ. ಪ್ರಸ್ತುತ ಸಾಲಿಗಾಗಿ ಇನ್ನೂ 5 ಶಾಲೆಗಳಲ್ಲಿ(ಮೂಕನಹಳ್ಳಿ, ಚಿಕ್ಕಹುಣಸೂರು, ಕರಿಮುದ್ದನಹಳ್ಳಿ, ಮೋದೂರು ಮತ್ತು ಹೆಗ್ಗಂದೂರು ಶಾಲೆಗಳು) ಎಲ್‌ಕೆಜಿ ಯುಕೆಜಿ ಆರಂಭಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯಕ
ಹೇಳಿದರು.
8 ಗ್ಯಾರಂಟಿ ಯೋಜನೆಗಳು:
ಶಿಕ್ಷಣ ಇಲಾಖೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ 8 ವಿಧದ ಗ್ಯಾರಂಟಿ ಕಾರ್ಯಕ್ರಮಗಳನ್ನು ನೀಡಿದೆ. ಉಚಿತ ಪಠ್ಯಪುಸ್ತಕ, ಸ್ಮಾರ್ಟ್ ಕ್ಲಾಸ್, ಶಿಕ್ಷಕರ ರಬೇತಿ, ಸಾರಿಗೆ ವ್ಯವಸ್ಥೆ ಸೇರಿದಂತೆ ಸರ್ಕಾರಿ ಶಾಲೆಗಳಲಿ ಶೈಕ್ಷಣಿಕ ವ್ಯವಸ್ಥೆ ಬಲಪಡಿಸುವತ್ತ ಗಮನಹರಿಸಲಾಗಿದೆ ಎಂದು ಕಾಳನಾಯಕ ಹೇಳಿದರು.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ 2ರಲ್ಲಿ ಹುಣಸೂರು ತಾಲೂಕು ಜಿಲ್ಲೆಯಲ್ಲೇ ಪ್ರಥಮಸ್ಥಾನದಲ್ಲಿದ್ದು, ಒಟ್ಟಾರೆ ಫಲಿತಾಂಶದಲ್ಲಿ 9ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ತಾಲೂಕಿನ ಕಟ್ಟೆಮಳಲವಾಡಿ ಮತ್ತು ಗುರುಪುರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಯನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಕೆಪಿಎಸ್=ಶಾಲೆ ತೆರಯುವ ಮೂಲಕ ಯಾವುದೇ ಅಕ್ಕಪಕ್ಕದ ಶಾಲೆಗಳನ್ನು ಮುಚ್ಚುವ ಉದ್ದೇಶ ಇಲಾಖೆ ಹೊಂದಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
ಸಹಕಾರದಿಂದ ಉನ್ನತಿ:
ಮುಖ್ಯಶಿಕ್ಷಕ ಎಚ್.ಎಸ್.ಸುರೇಶ್ ಮಾತನಾಡಿ, ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕವೃಂದ, ಪಾಲಕರು, ಎಸ್‌ಡಿಎಂಸಿ, ಇಲಾಖೆ ಹಿರಿಯ ಅಧಿಕಾರಿಗಳ ಸಂಪೂರ್ಣ ಸಹಕಾರದಿಂದ ಶಾಲೆ ಉನ್ನತಿಯತ್ತ ಸಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ ಶಾಲೆಯಲ್ಲಿ 215 ವಿದ್ಯಾರ್ಥಿಗಳು ದಾಖಲಾಗಿದ್ದು, ಶಾಲೆಯ ಒಟ್ಟು ದಾಖಲಾತಿ 780ಕ್ಕೇರಿದ್ದು, ಜಿಲ್ಲೆಯಲ್ಲೇ ದಾಖಲಾತಿಯಲ್ಲಿ ನಮ್ಮ ಶಾಲೆ ಪ್ರಥಮಸ್ಥಾನದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶಿಕ್ಷಕ ಡಾ.ಮಾದುಪ್ರಸಾದ್ ಮಾತನಾಡಿ, 7ವರ್ಷಗಳ ಹಿಂದೆ ಕೇವಲ 19 ವಿದ್ಯಾರ್ಥಿಗಳಿದ್ದ ಶತಮಾನದ ಇತಿಹಾಸ ಹೊಂದಿರುವ ಈ ಶಾಲೆ ಇದೀಗ ಜಿಲ್ಲೆಯಾದ್ಯಂತ ತನ್ನತ್ತ ನೋಡುವಂತೆ ಮಾಡುತ್ತಿದೆ. ಇದಕ್ಕೆ ಎಲ್ಲರ ಸಹಕಾರ ದೊರಕಿರುವುದೇ ಮುಖ್ಯ ಕಾರಣವೆಂದರು. ಶಿಕ್ಷಕ ನರಸಿಂಹ ಮಾತನಾಡಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 1 ಸಾವಿರಕ್ಕೇರಿಸಬೇಕೆನ್ನುವುದೇ ನಮ್ಮೆಲ್ಲರ ಆಶಯವಾಗಿದ್ದು, ಈ ದಿಕ್ಕಿನತ್ತ ದುಡಿಯಲಿದ್ದೇವೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಕುಮಾರ್ ಮಾತನಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಅಶೋಕ್, ಎಸ್‌ಡಿಎಂಸಿ ಅಧ್ಯಕ್ಷೆ ಶುಭಾ, ಉಪಾಧ್ಯಕ್ಷ ರಫೀಕ್, ಸದಸ್ಯರಾದ ಶಿವರಾಮ್, ಸಂತೋಷ್, ವೆಂಕಟೇಶ್, ಬಿಆರ್‌ಸಿ ಹೇಮಲತಾ, ಇಸಿಒಗಳಾದ ಜಯಪ್ರಕಾಶ್, ರುದ್ರಪ್ಪ, ಕೇಶವಮೂರ್ತಿ, ಸಿಆರ್‌ಪಿ ಪ್ರಶಾಂತ್, ಶಿಕ್ಷಕ ಕೇಶವ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಮೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರವಿ ಸೇರಿದಂತೆ ಪಾಲಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಸಂವಿದಾನವೃತ್ತದಿಂದ ಶಾಲೆಯವರೆಗೆ ವಿದ್ಯಾರ್ಥಿಗಳು ಶಾಲಾ ಆರಂಭೋತ್ಸವದ ಅಂಗವಾಗಿ ಮೆರವಣಿಗೆ ಸಾಗಿಬಂದು ನಾಗರಿಕರಿಗೆ ಅರಿವುಮೂಡಿಸಿದರು.ಪುಟಾಣಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡುವ ಮೂಲಕ ಸ್ವಾಗತಕೋರಲಾಯಿತು.