ಮೈಸೂರು ಅರಮನೆ ಆವರಣದಲ್ಲಿ ಭಾನುವಾರ ರಥ ಸಪ್ತಮಿ ಪೂಜೆಯಲ್ಲಿ ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್, ತ್ರಿಷಿಕಾ ಒಡೆಯರ್ ಹಾಗೂ ಮಕ್ಕಳು ಭಾಗವಹಿಸಿ ದೇವರಿಗೆ ಪೂಜೆ ಸಲ್ಲಿಸಿದರು. 
ಮೈಸೂರು

ಮೈಸೂರು ಅರಮನೆಯಲ್ಲಿ ರಥಸಪ್ತಮಿ ಸಂಭ್ರಮ

ಮೈಸೂರು: ರಥ ಸಪ್ತಮಿ ಪ್ರಯುಕ್ತ ಭಾನುವಾರ ಮೈಸೂರು ಅರಮನೆ ಆವರಣದಲ್ಲಿ ವಿಶೇಷ ಪೂಜಾ ಕೈಂಕರ್ಯ ಶ್ರದ್ಧಾ, ಭಕ್ತಿಯೊಂದಿಗೆ ನೆರವೇರಿತು.
ಪ್ರತಿ ವರ್ಷದಂತೆ ಈ ವರ್ಷವೂ ಚಾಮುಂಡೇಶ್ವರಿ ಪ್ರಾಧಿಕಾರ ಹಾಗೂ ಅರಮನೆ ಮಂಡಳಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ ಮನೆ ಮಾಡಿತ್ತು. ಅರಮನೆ ಆವರಣದಲ್ಲಿ ನಿಲ್ಲಿಸಿದ್ದ 8 ರಥಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಕಲ ಜೀವರಾಶಿಗೂ ತನ್ನ ಬೆಳಕಿನ ಮೂಲಕ ಚೈತನ್ಯ ನೀಡುವ ಸೂರ್ಯನನ್ನು ಆರಾಧಿಸಲಾಯಿತು. ಮುಂಜಾನೆ ಅರಮನೆಯ ಮುಖ್ಯದ್ವಾರದ ಮುಂಭಾಗ ರಥಗಳನ್ನು ನಿಲ್ಲಿಸಿ ಪೂಜೆ ಸಲ್ಲಿಸಲಾಯಿತು.
ಪೂಜೆಯ ಬಳಿಕ ಶ್ರೀ ಭುವನೇಶ್ವರಿ, ಶ್ರೀ ತ್ರಿನೇಶ್ವರ ಸ್ವಾಮಿ, ಶ್ರೀ ಲಕ್ಷ್ಮೀರಮಣಸ್ವಾಮಿ, ಶ್ರೀ ಮಹಾಲಕ್ಷ್ಮೀದೇವಿ, ಶ್ರೀ ಪ್ರಸನ್ನ ಕೃಷ್ಣ, ಶ್ರೀ ವೇದವರಹಸ್ವಾಮಿ, ಶ್ರೀ ಖಿಲ್ಲೆ ವೆಂಕಟರಮಣಸ್ವಾಮಿ ಹಾಗೂ ಶ್ರೀ ಗಾಯಿತ್ರಿ ಅಮ್ಮನವರ ಉತ್ಸವ ಮೂರ್ತಿಗಳ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಅರಮನೆ ಆವರಣದಲ್ಲಿ ನಡೆದ ಪೂಜಾ ಕೈಂಕರ್ಯದಲ್ಲಿ ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್, ತ್ರಿಷಿಕಾ ಒಡೆಯರ್ ಹಾಗೂ ಮಕ್ಕಳು ಭಾಗವಹಿಸಿ ದೇವರಿಗೆ ಪೂಜೆ ಸಲ್ಲಿಸಿದರು.