ಸರಗೂರು ತಾಲೂಕಿನ ಎಂ.ಸಿ.ತಳಲು ಗ್ರಾಮದಲ್ಲಿ ಸೋಪಾನ ಕಟ್ಟೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಾಸಕ ಅನಿಲ್ ಚಿಕ್ಕಮಾದು ಭೂಮಿಪೂಜೆ ನೆರವೇರಿಸಿದರು.  
ಮೈಸೂರು

ನುಗು ಏತ ಯೋಜನೆಯಡಿ ಕೆರೆ-ಕಟ್ಟೆಗಳಿಗೆ ಶೀಘ್ರ ನೀರು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅನಿಲ್ ಚಿಕ್ಕಮಾದು
  • ನುಗು ಏತ ನೀರಾವರಿ ಯೋಜನೆಯಡಿ
  • 5 ಕೋಟಿ ರೂ.ವೆಚ್ಚ
  • ಎಂ.ಸಿ.ತಳಲು ಗ್ರಾಮ
ಸರಗೂರು: ನುಗು ಏತ ನೀರಾವರಿ ಯೋಜನೆಯಿಂದ ಶೀಘ್ರ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ನುಗು ಏತ ನೀರಾವರಿ ಯೋಜನೆಯಡಿ 5 ಕೋಟಿ ರೂ.ವೆಚ್ಚದಲ್ಲಿ ತಾಲೂಕಿನ ಎಂ.ಸಿ.ತಳಲು ಗ್ರಾಮದಲ್ಲಿ ಸೋಪಾನ ಕಟ್ಟೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಗ್ರಾಮದಿಂದ ನದಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮದಲ್ಲಿ ನುಗು ನದಿಗೆ ಅಡ್ಡಲಾಗಿ ನಿರ್ಮಿಸಲಾದ ಏತ ನೀರಾವರಿ ಯೋಜನೆಯಿಂದ ಕಾಂಡಂಚಿನ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಇದಲ್ಲದೆ ಅಂತರ್ಜಲ ಮಟ್ಟದ ಏರಿಕೆಯಾಗಲಿದೆ ಎಂದು ಹೇಳಿದರು.
ಬಿ.ಮಟಕೆರೆ, ಮುತ್ತಿಗೆಹುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶೇ.90ರಷ್ಟು ರಸ್ತೆ ಅಭಿವೃದ್ಧಿ ಕಂಡಿವೆ. ಎಲ್ಲಿಯೂ ರಸ್ತೆ ಅಭಿವೃದ್ಧಿ ಕಾಮಗಾರಿ ಬಾಕಿ ಉಳಿಯದಂತೆ ಕ್ರಮವಹಿಸಲಾಗಿದೆ. ಉಳಿಕೆ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ವಿಸ್ತೀರ್ಣದಲ್ಲಿ ನಮ್ಮದು ದೊಡ್ಡ ಕ್ಷೇತ್ರವಾಗಿದೆ. ಎಲ್ಲ ಹಳ್ಳಿಗಳಿಗೂ ಸಮಾನವಾಗಿ ಅನುದಾನ ನೀಡಬೇಕು. ಹೀಗಾಗಿ ತುಂಬ ಕಷ್ಟಕರವಾಗಲಿದೆ. ಆದರೂ ಪ್ರಾಮಾಣಿಕವಾಗಿ ಸರಗೂರಿಗೆ ತಾಲೂಕು ಆಡಳಿತ ಸೌದ, 100 ಹಾಸಿಗೆ ಆಸ್ಪತ್ರೆ, ಅಗ್ನಿಶಾಮಕ ಠಾಣೆ ನೀಡಲಾಗಿದೆ ಎಂದು ತಿಳಿಸಿದರು.
ತಾಲೂಕಿನ ಗ್ರಾಮಗಳು ಕಾಡಂಚಿನಲ್ಲಿ ಇದ್ದು, ಕಾಡು ಪ್ರಾಣಿಗಳ ಹಾವಳಿ ಜೋರಾಗಿದೆ. ಇವುಗಳ ಕಡಿವಾಣಕ್ಕೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಕ್ರಮವಹಿಸಲಾಗಿದೆ. ಕಾಡುಪ್ರಾಣಿಗಳ ಹಾನಿಯಿಂದ ಬೆಳೆ ನಷ್ಟವಾದರೆ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂಬ ಬೇಸರವಿದೆ. ಈ ಬಾರಿ ಬಜೆಟ್‌ನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ, ಹುಣಸೂರು ವೃತ್ತದಲ್ಲಿ ಸೇತುವೆ ನಿರ್ಮಾಣ, ಗಂಡತ್ತೂರು, ಗುಂಡತ್ತೂರು ಗ್ರಾಮಗಳ ನಡುವೆ ಸೇತುವೆ ನಿರ್ಮಾಣ ಸೇರಿದಂತೆ ಇತರ ಕಾಮಗಾರಿ ಮಾಡುವಂತೆ ಕೇಳಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಚಂದ್ರ ಮಾತನಾಡಿದರು. ಎಂಸಿ ತಳಲು ಗ್ರಾಮದ ಗೌಡಿಕೆ ಮಹದೇವಪ್ಪ, ಭವನೀಶ್, ನಿಜಗುಣ, ರಾಜಪ್ಪ, ಮಲ್ಲಪ್ಪ, ಪ್ರಭುಶಂಕರ್, ಮಹದೇವಕುಮಾರ್, ಕುಮಾರ್, ಸಿದ್ದು, ಶಿವಕುಮಾರ್, ನಂದೀಶ್, ಶೇಖರ್, ಮಹದೇವಗೌಡ, ಅಣ್ಣಯ್ಯಸ್ವಾಮಿ, ಎಂ.ಬಿ.ಆನಂದ್, ದೇವರಾಜು, ಜಿನ್ನಪ್ಪ, ಗುರುಸ್ವಾಮಿ, ನಾಗೇಂದ್ರ, ಸಿದ್ದರಾಜು, ಅರವಿಂದ ಇತರರಿದ್ದರು.