ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹುಣಸೂರು ತಾಲೂಕು ತಹಸೀಲ್ದಾರ್‌ರಿಗೆ ದಲಿತ ಮಹಿಳಾ ಒಕ್ಕೂಟದಿಂದ ಮನವಿ ಪತ್ರ ಸಲ್ಲಿಸಲಾಯಿತು. ಮಹದೇವಮ್ಮ, ಕೊಳಗಟ್ಟ ಕೃಷ್ಣ, ಗಿರಿಜಮ್ಮ, ರಾಜು ಇತರರಿದ್ದರು. 
ಮೈಸೂರು

ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಲಿ

ಹುಣಸೂರು: ರಾಜ್ಯದ ಬೀದರ್ ಜಿಲ್ಲೆಯಲ್ಲಿ ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ದುಷ್ಟರನ್ನು ಕೂಡಲೇ ಬಂಧಿಸಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ದಲಿತ ಮಹಿಳಾ ಒಕ್ಕೂಟ ಒತ್ತಾಯಿಸಿದೆ.
ಮಂಗಳವಾರ ತಹಸೀಲ್ದಾರ್ ಜೆ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಒಕ್ಕೂಟದ ಜಿಲ್ಲಾ ಸಂಚಾಲಕಿ ಮಹದೇವಮ್ಮ ಕಟ್ಟೆಮಳಲವಾಡಿ, ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಮಲ ನಗರದ ಪ್ರತಿಭಾವಂತ ಕಬಡ್ಡಿ ಆಟಗಾರ್ತಿ ಶೋಭಾ ರಾಣಡೆ ಎಂಬ ದಲಿತ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಅತ್ಯಂತ ಭೀಕರವಾಗಿ ಕೊಲೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರೆಬಿಳಚಿ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದ ಕಾಲನಿಯಲ್ಲಿ ವಾಸ ಮಾಡುತ್ತಿರುವ ದಲಿತ ಸಮುದಾಯದವರು ತಿರುಗಾಡುವ ರಸ್ತೆಯನ್ನು ಸವರ್ಣೀಯರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಸ್ತೆ ಸಂಪರ್ಕವನ್ನು ನಿಬರ್ಂಧಿಸಿರುವುದು ಸರಿಯಲ್ಲ.
ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೊಳಗಟ್ಟ ಕೃಷ್ಣ, ಅಹಿಂದ ಜಾಗೃತ ವೇದಿಕೆ ನಗರಾಧ್ಯಕ್ಷ ಸೋಮಣ್ಣ, ತಾಲೂಕು ಸಂಯೋಜಕ ವೇಣು, ಚಿಕ್ಕಹುಣಸೂರು ರಾಜು, ಹಿರಿಯ ಹೋರಾಟಗಾರ ಜೆ.ಮಹದೇವ್, ಮಹಿಳಾ ಸಂಘಟನಾ ಸಂಚಾಲಕಿ ಗಿರಿಜಮ್ಮ, ವೀಣಾ, ಪ್ರಭಾವತಿ ಭಾಗವಹಿಸಿದ್ದರು.