ತಿ.ನರಸೀಪುರ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯ. 
ಮೈಸೂರು

ರಂಗಸಮುದ್ರ ಗ್ರಾಪಂಗೆ ‘ಗಾಂಧಿ ಗ್ರಾಮ ಪುರಸ್ಕಾರ’

ತಿ.ನರಸೀಪುರ: ಗ್ರಾಮೀಣ ಆಡಳಿತ ಸಂಸ್ಥೆಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯಿತಿಯನ್ನು ಗುರುತಿಸಿ ರಾಜ್ಯ ಸರ್ಕಾರವು ಕೊಡಮಾಡುವ 2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ರಂಗಸಮುದ್ರ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.
ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದರ ಜತೆಗೆ ಸರ್ಕಾರದ ಯೋಜನೆಗಳನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸುವ ಪಂಚಾಯಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗುತ್ತಿದೆ.
ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಗಳಾದ ಸ್ವಚ್ಛ ಭಾರತ್ ಮಿಷನ್, ಮಹಾತ್ಮ ಗಾಂಧಿ ನರೇಗಾ ಯೋಜನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ವಸತಿ ಯೋಜನೆ, ತೆರಿಗೆ ವಸೂಲಾತಿ, ಶಾಲೆ ಮತ್ತು ಅಂಗನವಾಡಿಗಳ ಅಭಿವೃದ್ಧಿ, ಶೌಚಗೃಹಗಳ ನಿರ್ಮಾಣ, ಬೀದಿ ದೀಪ ಮತ್ತು ಮೂಲ ಸೌಕರ್ಯ,ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ನಿಷೇಧ, ಮಾನವ ಅಭಿವೃದ್ಧಿ ಸೂಚ್ಯಾಂಕ ಸೇರಿದಂತೆ ಅಭಿವೃದ್ಧಿಯಲ್ಲಿ ರಂಗಸಮುದ್ರ ಗ್ರಾಮ ಪಂಚಾಯಿತಿ ಮುಂಚೂಣಿಯಲ್ಲಿದೆ.
ಪ್ರಶಸ್ತಿಯು ಸ್ಮರಣಿಕೆ ಹಾಗೂ 7ಲಕ್ಷ ರೂ. ಮೊತ್ತದ ಸಹಾಯಧನ ಒಳಗೊಂಡಿರುತ್ತದೆ. ಬೆಂಗಳೂರಿನಲ್ಲಿ ಜರುಗುವ ಸಮಾರಂಭದಲ್ಲಿ ಸರ್ಕಾರದ ವತಿಯಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯ ಮೊತ್ತವನ್ನು ಗ್ರಾಮಗಳ ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ ಬಳಸಲಾಗುತ್ತದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಗಳ ಅಭಿವೃದ್ಧಿಯನ್ನೇ ಧ್ಯೇಯವಾಗಿರಿಸಿ ನಮ್ಮ ಪಿಡಿಒ ಮತ್ತು ಎಲ್ಲಾ ಸದಸ್ಯರ ಸಹಕಾರದಿಂದ ಉತ್ತಮ ಕಾರ್ಯಗಳನ್ನು ಮಾಡಲಾಗಿದೆ. ಅದಕ್ಕೆ ತಕ್ಕಂತೆ ಗಾಂಧಿಗ್ರಾಮ ಪುರಸ್ಕಾರ ದೊರಕಿರುವುದು ಸಂತೋಷ ಉಂಟುಮಾಡಿದೆ.

ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗಿದೆ. ಅಭಿವೃದ್ಧಿ ಕೆಲಸಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ತೆರಿಗೆ ಸಂಗ್ರಹಣೆಯಲ್ಲಿ ಶೇ.100 ಪ್ರಗತಿ ಸಾಧಿಸಿ ತಾಲೂಕಿನಲ್ಲೇ ಅಗ್ರ ಸ್ಥಾನದಲ್ಲಿರುವಂತೆ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವಂತೆ ಪ್ರಶಸ್ತಿ ಪ್ರೇರೇಪಿಸಿದೆ.