ಮೈಸೂರು: ರಂಗಾಂತರಂಗ ಮೈಸೂರು ವತಿಯಿಂದ ಫೆ.7 ರಂದು ಸಂಜೆ 5.30ಕ್ಕೆ ರಂಗಾಯಣದ ಕಿರುರಂಗ ಮಂದಿರದಲ್ಲಿ ರಂಗಾಂತರಂಗ ಮಕ್ಕಳ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ತಿಳಿಸಿದರು.
ನಾಟಕೋತ್ಸವವನ್ನು ಹಿರಿಯ ರಂಗಕರ್ಮಿ ಮೈಮ್ ರಮೇಶ್ ಉದ್ಘಾಟಿಸುವರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ವಿಜಯವಾಣಿ ಪತ್ರಿಕೆಯ ಮೈಸೂರು ಸ್ಥಾನಿಕ ಸಂಪಾದಕರಾದ ಎಂ.ಆರ್.ಸತ್ಯನಾರಾಯಣ, ಡಾ.ಎಂ.ಎಸ್.ಅನಿತಾ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆಯೋಜಕ ಕೆ.ಎಂ.ಕೀರ್ತಿರಾಜ್ ಮಾತನಾಡಿ, ತಮ್ಮ ಸಂಸ್ಥೆಯೇ ತರಬೇತಿ ನೀಡಿದ ಮಕ್ಕಳು ಪ್ರದರ್ಶನ ನೀಡಲಿದ್ದಾರೆ. ಫೆ.7ರಂದು ಸಂಜೆ 6ಕ್ಕೆ ಹುಲಿ ಬೇಟೆಯ ಹಿಂದೆ ಮುಂದೆ, ಫೆ.8ರಂದು ಮಧ್ಯಾಹ್ನ 2.30ಕ್ಕೆ ತಿಕ್ಕಲು ರಾಜ ತಿರುಬೋಕಿ ರಾಜ್ಯ, ಫೆ.8ರ ಸಂಜೆ 5.30ಕ್ಕೆ ಮುಟ್ಟಿಸಿಕೊಂಡವರು ನಾಟಕ ಪ್ರದರ್ಶನವಿದೆ. ಎಲ್ಲ ಪ್ರದರ್ಶನಕ್ಕೂ ಉಚಿತ ಪ್ರವೇಶವಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ವೆಂಕಟೇಶ್, ಭವ್ಯಾ ಇದ್ದರು.