ರಂಗರತ್ನ ಸಂಸ್ಥೆ ವತಿಯಿಂದ ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಶುಕ್ರವಾರ ರಂಗಕರ್ಮಿ ಡಾ.ಸಹನಾ ಪಿಂಜಾರ್ ಅವರಿಗೆ ರಂಗರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ.ರಾಮೇಶ್ವರಿ ವರ್ಮ, ಡಾ.ಯು.ಎ.ಶರತ್ ಅನಂತಮೂರ್ತಿ, ತರ್ನೀವ್, ಅಜಿತ್ ಹಾಗೂ ಇತರರು ಇದ್ದರು. 
ಮೈಸೂರು

ರಂಗಕರ್ಮಿ ಡಾ.ಸಹನಾ ಪಿಂಜಾರ್‌ಗೆ ರಂಗರತ್ನ ಪ್ರಶಸ್ತಿ ಪ್ರದಾನ

ಮೈಸೂರು: ರಂಗರತ್ನ ಸಂಸ್ಥೆ ವತಿಯಿಂದ ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಶುಕ್ರವಾರ ಪ್ರಶಸ್ತಿ ಪ್ರದಾನ ಹಾಗೂ ಕೃತಿ ಬಿಡುಗಡೆ ಸಮಾರಂಭ ನಡೆಯಿತು.
ಡಾ.ನ.ರತ್ನ ರಚಿಸಿರುವ ‘ಅಯಾನ್ ಶಾಂತಿ ಕುಟೀರ’ ನಾಟಕದ ಇಂಗ್ಲೀಷ್ ಅನುವಾದಿತ ಕೃತಿಯನ್ನು ಹಿರಿಯ ರಂಗಕರ್ಮಿ ಪ್ರೊ.ರಾಮೇಶ್ವರಿ ವರ್ಮ ಬಿಡುಗಡೆ ಮಾಡಿದರು. ರಂಗಕರ್ಮಿ ಡಾ.ಸಹನಾ ಪಿಂಜಾರ್ ಅವರಿಗೆ ರಂಗರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ.ಯು.ಎ.ಶರತ್ ಅನಂತಮೂರ್ತಿ ಮಾತನಾಡಿ, ಡಾ.ನ.ರತ್ನ ಅವರು ಪ್ರತಿಯೊಬ್ಬರಲ್ಲೂ ಪ್ರತಿಭೆ ಹುಡುಕುತ್ತಿದ್ದರು. ಎಲ್ಲರಿಗೂ ಅವಕಾಶ ನೀಡುತ್ತಿದ್ದರು. ನಟಿಸಲು ಪರದಾಡುತ್ತಿದ್ದ ವಿದ್ಯಾರ್ಥಿಗಳನ್ನೇ ತಿದ್ದಿ ತೀಡುವ ಮೂಲಕ ನಟನೆಯಲ್ಲಿ ಒಳ್ಳೆಯ ಪರಿಣಿತ ಹೊಂದುವಂತೆ ಮಾಡುತ್ತಿದ್ದರು ಎಂದರು.
ಹಿರಿಯ ರಂಗಕರ್ಮಿ ಪ್ರೊ.ರಾಮೇಶ್ವರಿ ವರ್ಮ ಮಾತನಾಡಿ, ಈ ಹಿಂದೆ ಹಿರಿಯ ಕಲಾವಿದರಿಗೆ ಅಭಿನಯಿಸಲು ನಾಟಕವೇ ಇರಲಿಲ್ಲ. ತಾತನ ಪಾತ್ರ ಬಿಟ್ಟರೆ ಅಜ್ಜಿಯ ಪಾತ್ರ ಇರುವುದೇ ಇಲ್ಲ ಎಂದು ಅರಿತ ನ.ರತ್ನ ಅವರು ವಯಸ್ಸಾದವರಿಗಾಗಿಯೇ ನಾಟಕ ಬರೆಯುತ್ತೇನೆ ಎಂದು ನಾಟಕ ರಚಿಸಿದರು. ಯಾರು ಯಾರು ಯಾವ ಪಾತ್ರ ಮಾಡಬೇಕೆಂದು ಅವರು ಮೊದಲೇ ನಿರ್ಧರಿಸುತ್ತಿದ್ದರು ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತ ಡಾ.ಸಹನಾ ಪಿಂಜಾರ್ ಮಾತನಾಡಿ, ನಾವು ಅಸಂಗತ ನಾಟಕಗಳನ್ನು ಕೇಳಲು ಹಾಗೂ ನೋಡಲು ಆಗುತ್ತಿರಲಿಲ್ಲ. ಕೇವಲ ಪಾಶ್ಚಾತ್ಯ ಮಾಧ್ಯಮಕ್ಕೆ ಸೀಮಿತವಾದ ಅಸಂಗತವಾದ ನಾಟಕಗಳನ್ನು ಎಲ್ಲರೂ ನೋಡುವ ಹಾಗೂ ಓದುವ ಹಾಗೆ ಮಾಡಿದ್ದು ನಾ ರತ್ನ ಅವರು. ಅವರ ‘ಗೋಡೆ ಬೇಕೆ ಗೋಡೆ’ ನಾಟಕ ಇಂದಿನ ಸಮಾಜಕ್ಕೆ ಹತ್ತಿರವಾದ ನಾಟಕವಾಗಿದೆ ಎಂದರು ಹೇಳಿದರು. ಕಾರ್ಯಕ್ರಮದಲ್ಲಿ ಬೆಲ್ಲಿ ಧ್ಯಾನ ಮಾಸ್ಟರ್ ತರ್ನೀವ್, ನಾ ರತ್ನ ಅವರ ಪುತ್ರ ಅಜಿತ್ ರತ್ನ ಇದ್ದರು.