ಮೈಸೂರು: ಭೂಮಾಫಿಯಾದರೊಂದಿಗೆ ಸೇರಿ ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಇ- ಖಾತೆ ಮಾಡಿಕೊಟ್ಟಿದ್ದ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಕಂದಾಯ ನಿರೀಕ್ಷಕ ಮಂಜುನಾಥ್ ಅವರನ್ನು ಪೌರಾಡಳಿತ ನಿರ್ದೇಶನಾಲಯ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು, ಮುಖ್ಯಾಧಿಕಾರಿ ಕೆ.ಎಸ್. ಮಹೇಶ್ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಸಾರ್ವಜನಿಕರ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ವರದಿ ಪಡೆದು ಮಂಜುನಾಥ್ ವಿರುದ್ಧ ಶಿಸ್ತು ಕ್ರಮಕ್ಕೆ ಪೌರಾಡಳಿತ ನಿರ್ದೇಶನಾಲಯಕ್ಕೆ ಶಿಫಾರಸು ಕಳುಹಿಸಿದ್ದರು. ಇದರ ಆಧಾರದ ಮೇಲೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪಿ.ಎನ್.ರವೀಂದ್ರ ಸೋಮವಾರ ಮಂಜುನಾಥ್ ವಿರುದ್ಧ ಇಲಾಖೆ ತನಿಖೆ ಕಾಯ್ದಿರಿಸಿ ತಕ್ಷಣದಿಂದಲೆ ಜಾರಿಗೆ ಬರುವಂತೆ ಅಮಾನತು ಆದೇಶ ಹೊರಡಿಸಿದ್ದಾರೆ.
ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಎಸ್. ಮಹೇಶ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್ ಒಂದು ಕಡೆ ಸಾರ್ವಜನಿಕರಿಗೆ ಖಾತೆ ಮಾಡಿಕೊಡದೆ ತೊಂದರೆ ಕೊಟ್ಟರೆ ಮತೊಂದು ಕಡೆ ಭೂಮಾಫಿಯಾದವರ ಜತೆ ಸೇರಿ ಸರ್ಕಾರಿ ಆಸ್ತಿಗಳಿಗೆ ಇ-ಖಾತೆ ಮಾಡಿಕೊಟ್ಟ ಆರೋಪ ಎದುರಿಸುತ್ತಿದ್ದಾರೆ.
ಇದರಿಂದ ಬೇಸತ್ತಿದ್ದ ಸಾರ್ವಜನಿಕರು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಲಿಖಿತ ದೂರು ನೀಡಿದ್ದರು. ಅಲ್ಲದೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಕೂಡ ಇವರ ಅಕ್ರಮದ ವಿರುದ್ಧ ಪ್ರಾದೇಶಿಕ ಆಯುಕ್ತರಿಕೆ ದೂರು ನೀಡಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು, ಈ ಇಬ್ಬರು ಮಾಡಿರುವ ಅಕ್ರಮದ ಬಗ್ಗೆ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿದ್ದರು. ವರದಿಯಲ್ಲಿ ಈ ಇಬ್ಬರು ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದು ಕಂಡುಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಅವರು ಇಬ್ಬರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದರು.
ಈ ವರದಿಯನ್ನು ಆಧರಿಸಿ ಕಂದಾಯ ನಿರೀಕ್ಷಕ ಮಂಜುನಾಥ್ ಅವರನ್ನು ಪೌರಾಡಳಿತ ನಿರ್ದೇಶನಾಲಯ ಅಮಾನತು ಮಾಡಿದೆ. ಮುಖ್ಯಾಧಿಕಾರಿ ಮಹೇಶ್ ಶ್ರೇಣಿ - 1ರ ವ್ಯಾಪ್ತಿಗೆ ಬರುವುದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.