ಎಚ್.ಡಿ.ಕೋಟೆ ತಾಲೂಕಿನ ಎಚ್.ಮಟಕೆರೆ ಗ್ರಾಮದ ಶ್ರೀ ಬಸವೇಶ್ವರಸ್ವಾಮಿಯ ಕೊಂಡೋತ್ಸವದ ವೇಳೆ ಕಂಡು ಬಂದ ಭಕ್ತಗಣ.
ಎಚ್.ಡಿ.ಕೋಟೆ: ತಾಲೂಕಿನ ಎಚ್.ಮಟಕೆರೆ ಗ್ರಾಮದ ಕಪಿಲಾ ನದಿ ತಡದಲ್ಲಿರುವ ಶ್ರೀ ರಾಮಲಿಂಗೇಶ್ವರಸ್ವಾಮಿ ಶ್ರೀಕ್ಷೇತ್ರದಲ್ಲಿ ಶಿವರಾತ್ರಿ ಅಂಗವಾಗಿ ಮೂರು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಶ್ರದ್ಧಾಭಕ್ತಿಯ ಕೊಂಡೋತ್ಸವದ ಮೂಲಕ ತೆರೆಬಿದ್ದಿತು.
ಇಲ್ಲಿನ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ, ಕಪಿಲಾ ನದಿ ಮಧ್ಯೆ ಉದ್ಭವವಾಗಿರುವ ಶ್ರೀ ಸೋಮೇಶ್ವರ ಸ್ವಾಮಿ ಗುಡಿ ಹಾಗೂ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೂರು ದಿನ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಫೆ.15ರಂದು ಶಿವರಾತ್ರಿ ಹಬ್ಬದ ಅಂಗವಾಗಿ ರಾತ್ರಿ ರಾಮಲಿಂಗೇಶ್ವರಸ್ವಾಮಿಗೆ ತೈಲಾಭಿಷೇಕ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿತು. ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮಾಭಿವೃದ್ಧಿ ಸಂಘದ ಯುವಕರಿಂದ ಬಾಳಿನ ದಾರಿ ಅಥವಾ ಸಂಸಾರ ನೌಕೆ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಗ್ರಾಮವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಸೋಮವಾರ ಸಾವಿರಾರು ಭಕ್ತರ ಜಯಘೋಷದೊಂದಿಗೆ ಶ್ರೀ ರಾಮಲಿಂಗೇಶ್ವರಸ್ವಾಮಿ ರಥೋತ್ಸವ ಜರುಗಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನದಿಂದ ಸಂಜೆಯವರೆಗೆ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿ ನಡೆಯಿತು. ಪಂದ್ಯದಲ್ಲಿ ಗೆದ್ದ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ರಾತ್ರಿ ತೆಪ್ಪೋತ್ಸವ ಜರುಗಿತು. 10 ಗಂಟೆಗೆ ಎಂ.ಬಿ.ಪ್ರಸನ್ನ ಅರ್ಪಿಸುವ ಕೃತಿಕಾ ಈವೆಂಟ್ಸ್ ಮೈಸೂರು ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಮಂಗಳವಾರ ಬೆಳಗ್ಗೆ 8.30 ರಿಂದ 9.40ರವರೆಗೆ ಶ್ರೀ ಬಸವೇಶ್ವರಸ್ವಾಮಿಯ ಕೊಂಡೋತ್ಸವ ನಡೆಯಿತು. ಕೊಂಡೋತ್ಸವಕ್ಕೂ ಮುನ್ನ ಕಪಿಲಾ ನದಿ ತಟದಿಂದ ಸತ್ತಿಗೆ ಸೂರಿಪಾನಿಗಳ ಜತೆ ಶ್ರೀ ಬಸವೇಶ್ವರ ಸ್ವಾಮಿಯ ಚಿಕ್ಕರಥವನ್ನು ಮೆರವಣಿಗೆ ಮೂಲಕ ತಂದು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ನಂತರ ದೇವರ ಗುಡ್ಡಪ್ಪ ಹಾಗೂ ಹರಕೆ ಹೊತ್ತ ಭಕ್ತರು ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧೆಡೆಯಿಂದ ಭಕ್ತರು ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.