ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದವರಿಗೆ ಶ್ರೀದೇಶಿಕೇಂದ್ರ ರಾಜೇಂದ್ರ ಸ್ವಾಮೀಜಿ ಹೆಸರಿನ ಸದ್ಭಾವನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಯಪ್ಪ ಹೊನ್ನಾಳಿ, ಮಂಗಳಾ ಮುದ್ದುಮಾದಪ್ಪ, ಬಸವರಾಜೇಂದ್ರ ಸ್ವಾಮಿ ಇತರರಿದ್ದರು. 
ಮೈಸೂರು

ಬಡ ಮಕ್ಕಳಲ್ಲಿ ಭಗವಂತನ ಕಂಡ ರಾಜೇಂದ್ರ ಶ್ರೀ: ಜಯಪ್ಪ ಹೊನ್ನಾಳಿ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮಹದಾಶಯ ಹೊಂದಿದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿ, ‘ಶಿಕ್ಷಣ ಕ್ಷೇತ್ರದ ಹರಿಕಾರ’
  • ಕಂತೆಭಿಕ್ಷೆದ ಮೂಲಕ ಜೆಎಸ್‌ಎಸ್ ಮಹಾವಿದ್ಯಾಪೀಠ ಸ್ಥಾಪಿಸಿದರು
ಮೈಸೂರು:ಬಡ ಮಕ್ಕಳಲ್ಲಿ ಭಗವಂತನ ಕಂಡು, ಅವರಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಜೀವನದ ದಾರಿ ತೋರಿದವರು ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಡಾ.ಜಯಪ್ಪ ಹೊನ್ನಾಳಿ ಬಣ್ಣಿಸಿದರು.
ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಆಯೋಜಿಸಿದ್ದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಜನ್ಮ ದಿನಾಚರಣೆ ಹಾಗೂ ಅವರ ಹೆಸರಿನ ಸದ್ಭಾವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಕಂತೆಭಿಕ್ಷೆದ ಮೂಲಕ ಜೆಎಸ್‌ಎಸ್ ಮಹಾವಿದ್ಯಾಪೀಠವನ್ನು 1954ರಲ್ಲಿ ಸ್ಥಾಪಿಸಿದ ಶ್ರೀಗಳು ಗ್ರಾಮೀಣ ಮತ್ತು ಎಲ್ಲ ದೃಷ್ಟಿಯಿಂದ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಹದಾಶಯ ಹೊಂದಿದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿ, ‘ಶಿಕ್ಷಣ ಕ್ಷೇತ್ರದ ಹರಿಕಾರ’ ಎನಿಸಿದರು ಎಂದರು.
ಆರ್ಥಿಕ ಸಂಕಷ್ಟ ಬಂದೊದಗಿದಾಗ, ಬಡ ಮಕ್ಕಳ ಅನ್ನ ವಸತಿಗಾಗಿ ಭಕ್ತರೊಬ್ಬರು ಕೊಟ್ಟಿದ್ದ ಲಿಂಗದ ಬಂಗಾರದ ಕರಡಿಗೆಯನ್ನು ಹಾಗೂ ಚಿನ್ನ ಲೇಪಿತ ರುದ್ರಾಕ್ಷಿ ಮಾಲೆಯನ್ನೂ ಅಡವಿಟ್ಟಿಟ್ಟು ದಾಸೋಹ ಮಾಡಿದ ಮಾತೃಹೃದಯಿ ಎಂದು ಹೇಳಿದರು.
ಇವರ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದ ಕೊಡುಗೆ ಗಮನಿಸಿಯೇ ಅಂದಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಪ್ರತಿಷ್ಠಿತ ‘ರಾಜಗುರು ತಿಲಕ’ ಪ್ರಶಸ್ತಿ ನೀಡಿ ಗೌರವಿಸಿದರು, ಇವರ ಜನ್ಮಶತಮಾನೋತ್ಸವದ ಸವಿ ನೆನಪಿಗಾಗಿ ಕೇಂದ್ರ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಿತು, ಸಮಾಜದಿಂದ ‘ಕರ್ಮಯೋಗಿ’ ಎಂಬ ಬಿರುದೂ ಹಾಗೂ ಮೈಸೂರು ವಿವಿಯಿಂದ ‘ಗೌರವ ಡಾಕ್ಟರೇಟ್’ ಪದವಿಗಳೂ ದೊರೆತವು ಎಂದು ವಿವರಿಸಿದರು.
ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್‌ಕುಮಾರ್ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮರಿಮಲ್ಲಪ್ಪ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕಿ ಮಂಗಳಾ ಮುದ್ದುಮಾದಪ್ಪ ಅಧ್ಯಕ್ಷತೆ ವಹಿಸಿದ್ದರು.
ಸಾಹಿತ್ಯ ಕ್ಷೇತ್ರಕ್ಕಾಗಿ ಎಚ್.ಎಲ್.ಶಿವಬಸಪ್ಪ ಹೊರೆಯಾಲ, ದೇವರಾಜು ಪಿ.ಚಿಕ್ಕಳ್ಳಿ ಹಾಗೂ ಸಂಗೀತ ಕ್ಷೇತ್ರಕ್ಕಾಗಿ ಶಾಂತಕುಮಾರಿ ಅವರಿಗೆ ಶ್ರೀರಾಜೇಂದ್ರ ಶ್ರೀ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರು ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಸಂಘಟಕರಾದ ರಂಗನಾಥ್ ಮೈಸೂರು, ಆರ್.ಕೆ.ಸ್ವಾಮಿ, ವೀರಭದ್ರಸ್ವಾಮಿ, ಸುಶೀಲಾ, ಸುಮಾ, ರೇಖಾ ಇತರರಿದ್ದರು.