ಹನಗೋಡು ಗ್ರಾಮದ ಬಸವರಾಜು ಅವರಿಗೆ ಸೇರಿದ 4 ಎಕರೆ ಬಾಳೆ ಗಿಡಗಳು ಬಿರುಗಾಳಿ, ಮಳೆಗೆ ಸಿಲುಕಿ ನೆಲಕ್ಕುರುಳಿರುವುದು.
ಹನಗೋಡು: ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸುರಿದ ಬಿರುಗಾಳಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಹನಗೋಡಿನ ಅಂಗಡಿ ಮಾದೇಗೌಡರ ಪುತ್ರ ಬಸವರಾಜು ಅವರಿಗೆ ಸೇರಿದ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ನೇಂದ್ರ ಹಾಗೂ ಏಲಕ್ಕಿ ಬಾಳೆ, ನಾಗಣ್ಣ ಅವರಿಗೆ ಸೇರಿದ ಮೂರು ಎಕರೆ ಬಾಳೆ ಬೆಳೆ, ಅಬ್ಬೂರಿನ ಕುಮಾರ್ ಅವರಿಗೆ ಸೇರಿದ ಮೂರು ಎಕರೆ ಬಾಳೆ ಬೆಳೆ ಹಾಗೂ ದಾಸನಪುರದ ಮಹೇಶ ಅವರಿಗೆ ಸೇರಿದ ಎರಡು ಎಕರೆ ನೇಂದ್ರ ಬಾಳೆ, ಹನಗೋಡಿನ ತಾ.ಪಂ. ಮಾಜಿ ಸದಸ್ಯ ರಮೇಶ್ ರವರಿಗೆ ಸೇರಿದ ತೆಂಗು , ಅಡಕೆ ಮರಗಳು ಬಿರುಗಾಳಿಗೆ
ನೆಲಕ್ಕುರುಳಿವೆ. ಇದಲ್ಲದೆ ಹೆಮ್ಮಿಗೆ, ಹೈರಿಗೆ, ಕಾಮಗೌಡನಹಳ್ಳಿ, ಹೆಗ್ಗಂದೂರು, ವಡ್ಡಂಬಾಳು, ಕಿರಂಗೂರು, ಹರಳಹಳ್ಳಿ ಗ್ರಾಮ ಗಳಲ್ಲಿಯೂ ಬಾಳೆಬೆಳೆ ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಯಾಗಿದೆ.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗರಾಜ್ ಸೇರಿದಂತೆ ಸಿಬ್ಬಂದಿ ಹಾನಿಗೀಡಾದ ಅನೇಕ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಳೆಗಾರರು ಪರಿಹಾರಕ್ಕಾಗಿ ದಾಖಲೆಯೊಂದಿಗೆ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗರಾಜ್ ತಿಳಿಸಿದ್ದಾರೆ.