ಗಾಳಿ ಮಳೆಗೆ ಸರಗೂರು ತಾಲೂಕಿನ ಶಾಂತಿಪುರ ಗ್ರಾಮದ ರುದ್ರಪ್ಪ ಸ್ವಾಮಿ ಅವರ ಮನೆ ಛಾವಣಿ ಹಾರಿ ಹೋಗಿರುವುದು. 
ಮೈಸೂರು

ಮಳೆ, ಗಾಳಿಗೆ ಸಾಕಷ್ಟು ಹಾನಿ

ಸರಗೂರು: ಪಟ್ಟಣ ಮತ್ತು ಸಮೀಪದ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.
ಪಟ್ಟಣ ಹಾಗೂ ಶಾಂತಿಪುರ, ಕೂಲ್ಯ, ಚಕ್ಕೂರು ಗ್ರಾಮಗಳಲ್ಲಿ ಮಳೆ-ಗಾಳಿಯಿಂದ 10ಕ್ಕೂ ಹೆಚ್ಚು ಮನೆಗಳ ಛಾವಣಿ ಹಾರಿಹೋಗಿದ್ದು, ಹಲವು ಕುಟುಂಬಗಳು ರಾತ್ರಿಯಿಡೀ ಆತಂಕದಲ್ಲಿ ಕಾಲ ಕಳೆದಿವೆ. ಶಾಂತಿಪುರ ಗ್ರಾಮದ ರುದ್ರಸ್ವಾಮಿ ಅವರ ಮನೆ ಛಾವಣಿಯ ಸಿಮೆಂಟ್ ಸೀಟುಗಳು ಗಾಳಿಗೆ ಹಾರಿ ಹೋಗಿವೆ. ಅಲ್ಲದೆ ಮಳೆಗೆ ಮನೆ ಒಳಗಡೆ ಇದ್ದ ಬಟ್ಟೆ-ಬರೆ, ದವಸ-ಧಾನ್ಯ, ಪೀಠೋಪಕರಣ ಹಾಳಾಗಿವೆ. ಶೌಚಗೃಹ ಕುಸಿದಿದೆ. ಚಕ್ಕೂರು ಗ್ರಾಮದ ಸುಪ್ರಭಾ ಅವರ ಮನೆ ಹಾಗೂ ಗ್ರಾಮದ ಸರ್ಕಾರಿ ಶಾಲೆ ಹೆಂಚುಗಳು ಹಾರಿ ಹೋಗಿವೆ.
ಗಾಳಿಗೆ ಬೃಹತ್ ಮರಗಳು, ತೆಂಗಿನ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಗ್ರಾಮಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಗಾಳಿ ರಭಸಕ್ಕೆ ಪಟ್ಟಣದ ಭಾರತ್ ಗ್ಯಾಸ್ ಕಚೇರಿ ಮುಂಭಾಗದಲ್ಲಿ ಎಚ್.ಡಿ.ಕೋಟೆ ಮುಖ್ಯರಸ್ತೆಯಲ್ಲಿ ಮರ ಉರುಳಿ ಬಿದ್ದು ವಾಹನಗಳು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಹಲವೆಡೆ ಬಾಳೆ ಸೇರಿದಂತೆ ಹಲವು ಬೆಳೆ ನೆಲಕಚ್ಚಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಪರೀಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.