ಹನಗೋಡಿನಲ್ಲಿ ಬಿರುಗಾಳಿ ಮಳೆಗೆ ಮುರಿದು ಬಿದ್ದ ವಿದ್ಯುತ್ ಕಂಬ ಹಾಗೂ ತೆಂಗಿನಮರ.  
ಮೈಸೂರು

, ಆಲಿಕಲ್ಲು, ಗುಡುಗು, ಸಿಡಿಲಿನ ಮಳೆಗೆ ಅಪಾರ ನಷ್ಟ

ಎ. ಆರ್. ರಘುರಾಮ
ಹನಗೋಡು : ಬುಧವಾರ ಸಂಜೆ ಬಾರೀ ಗುಡುಗು, ಸಿಡಿಲು ಸಹಿತ ಬಿರುಗಾಳಿ ಮಳೆಗೆ ಹನಗೋಡು ಹೋಬಳಿಯ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಬಾರೀ ಬಿರುಗಾಳಿ ಮಳೆಗೆ ಅಪಾರ ಹಾನಿ ಸಂಭವಿಸಿದೆ, ಹನಗೋಡು ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಳೆಯ ರೌದ್ರಾವತಾರಕ್ಕೆ ಹನಗೋಡಿನ ಹರಿಜನ ಬಡಾವಣೆಯ ಇಟ್ಟಿಗೆ ಮಲ್ಲೇಶ್ ಮನೆ ಮುಂದಿನ ವಿದ್ಯುತ್ ಕಂಬ ತೆಂಗಿನ ಮರ ಮುರಿದು ರಸ್ತೆ ಮೇಲೆ ಬಿದ್ದಿದ್ದರಿಂದ ಬಾರೀ ಅನಾಹುತ ತಪ್ಪಿದೆ. ಗ್ರಾಮದ ಅನೇಕರ ತೋಟಗಳಲ್ಲಿ ತೆಂಗು, ಅಡಿಕೆ ಮರ, ಬಾಳೆಗಿಡಗಳು ಧರೆಗುರುಳಿದೆ. ಹುಣಸೂರು ವಿಭಾಗದಲ್ಲಿ ಒಟ್ಟು 46ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ, 2 ಟಿ.ಸಿ.ಗೆ ಹಾನಿಯಾಗಿದೆ.
ದಾಸನಪುರದಲ್ಲಿ ಶಾಲೆ, ಮನೆಗಳಿಗೆ ಹಾನಿ;
ಹನಗೋಡಿಗೆ ಸಮೀಪದ ದಾಸನಪುರದಲ್ಲಿ ಒಮ್ಮೆಲೆ ಬಂದ ಬಿರುಗಾಳಿಗೆ ಸಿಲುಕಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಹೆಂಚುಗಳು ಹಾರಿ ಹೋಗಿದೆ. ಅಲ್ಲದೆ ಗ್ರಾಮದ ಸೋಮಯ್ಯ, ಶೇಖರ್, ಮಾದೇಗೌಡ, ಗಣೇಶ್, ಪ್ರಕಾಶ್, ಸೋಮಶೇಖರ್, ಕುಮಾರ್, ಮಧು, ಮಲಿಯಯ್ಯ, ರವಿ ಸೇರಿದಂತೆ ಅನೇಕರ ಮನೆಯ ಹೆಂಚುಗಳು ಹಾರಿ ಹೋಗಿ ಮನೆಯೊಳಗಿದ್ದ ದಿನಸಿ ಪದಾರ್ಥಗಳು ನೀರಿನಲ್ಲಿ ತೋಯ್ದು ಹಾನಿಯಾಗಿದೆ. ಅಲ್ಲದೆ ಹೊಲಗಳಲ್ಲಿದ್ದ ಮರಗಳ ಕೊಂಬೆಗಳು ಮುರಿದು ಅನತಿದೂರ ಹೊತ್ತೊಯ್ದು ಹಾಕಿದೆ. ಮಳೆಯಿಂದಾಗಿ ಮರದ ಕೆಳಗೆ ನಿಲ್ಲಿಸಿದ್ದ ದ್ವಿಚಕ್ರವಾಹನಗಳು ಕೊಂಬೆ ಬಿದ್ದು ಜಖಂಗೊಂಡಿವೆ. ಪಕ್ಕದ ಕಿರಂಗೂರಿನಲ್ಲಿ ಸ್ವಾಮಿಗೌಡರ ಮನೆ ಹೆಂಚುಗಳು ಹಾರಿ ಹೋಗಿದ್ದರೆ, ಹೈರಿಗೆಯಲ್ಲಿ ಬ್ಯಾರನ್ ಕುಸಿದು ಬಿದ್ದಿದೆ. ಕುರುಬರಹೊಸಹಳ್ಳಿಯಲ್ಲಿ ಗೋವಿಂದರಿಗೆ ಸೇರಿದ ಮನೆ ಮೇಲೆ ತೆಂಗಿನ ಮರ ಬಿದ್ದಿದೆ.
ತಂಬಾಕು ಸಸಿ ಮಡಿಗಳು ನಾಶ; ಹನಗೋಡು ಸೇರಿದಂತೆ ಕಾಮಗೌಡನಹಳ್ಳಿ, ಗೌಡಿಕೆರೆ, ಹೆಮ್ಮಿಗೆ, ಅಬ್ಬೂರು, ದಾಸನಪುರ, ಹೆಗ್ಗಂದೂರು, ಹರಳಹಳ್ಳಿ, ದೊಡ್ಡ ಹೆಜ್ಜೂರು, ಚಿಕ್ಕ ಹೆಜ್ಜೂರು ಮತ್ತಿತರ ಗ್ರಾಮಗಳಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ತಂಬಾಕು ಸಸಿಮಡಿಗಳು, ಹೆಮ್ಮಿಗೆಯಲ್ಲಿ ರಾಮೇಗೌಡ ಮತ್ತಿತರರ ಕಲ್ಲಂಗಡಿ ಬೆಳೆ ನಾಶವಾಗಿದೆ. ಇನ್ನು ಬಾಳೆ ಬೆಳೆಗಳು ಬಿರುಗಾಳಿಗೆ ಸಿಲುಕಿ ನೆಲಕಚ್ಚಿದೆ.
ಮದ ಕೊಂಬೆ ಬಿದ್ದು ಗಾಯ: ತಟ್ಟೆಕೆರೆಯ ಪುತ್ರ ದರ್ಶನ್ ಜಮೀನಿನಿಂದ ಮನೆಗೆ ತೆರಳುತ್ತಿದ್ದ ವೇಳೆ ಮರದ ಕೊಂಬೆ ಬಿದ್ದು ಭುಜಕ್ಕೆ ಪೆಟ್ಟು ಬಿದ್ದು ಹುಣಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಜೊತೆಗಿದ್ದ ಶರತ್ ಸಣ್ಣಪುಟ್ಟಗಾಯಗಳೊಂದಿಗೆ ಪಾರಾಗಿದ್ದಾರೆ.
ನಾಗರಹೊಳೆಯಲ್ಲೂ ಮಳೆ:
ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ, ನಾಗರಹೊಳೆ, ಆನೆಚೌಕೂರು, ಕಲ್ಲಹಳ್ಳವಲಯದಲ್ಲಿ ಗಂಟೆ ಬಾರೀ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದೆ. ಹುಣಸೂರು ನಗರದಲ್ಲೂ ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ.
ಕಂದಾಯ ಅಧಿಕಾರಿಗಳ ಭೇಟಿ:
ಹಾನಿಗೀಡಾದ ಪ್ರದೇಶಗಳಿಗೆ ಹನಗೋಡು ಉಪ ತಹಸೀಲ್ದಾರ್ ಶರತ್ ಕುಮಾರ್, ರಾಜಸ್ವನಿರೀಕ್ಷಕ ನಂದೀಶ್, ಗ್ರಾಮ ಆಡಳಿತಾಧಿಕಾರಿಗಳಾದ ಕುಮಾರ್, ಕರಿಬಸಪ್ಪ, ರಕ್ಷಿತ, ಶಿವಕುಮಾರ್ ಭೇಟಿ ಇತ್ತು ಪರಿಶೀಲನೆ ನಡೆಸಿದ್ದು, ಸರಕಾರಕ್ಕೆ ಹಾನಿಯ ವರದಿ ಸಲ್ಲಿಸಿದ್ದಾರೆ.
ಇಂದು ಶಾಸಕ ಭೇಟಿ: ಮಳೆ ಹಾನಿಗೊಳಗಾದ ಗ್ರಾಮಗಳಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.