ವಿ.ಸೋಮಣ್ಣ 
ಮೈಸೂರು

ರಾಹುಲ್ ಗಾಂಧಿಗೆ ಇತಿಹಾಸದ ಜ್ಞಾನವಿಲ್ಲ : ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ಠಾಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಫೋಟೋ ಬಗ್ಗೆ ರಾಹುಲ್ ಅಪಸ್ವರ ವಿಚಾರದ ಕುರಿತು ಪ್ರತಿಕ್ರಿಯೆ
  • ಅಮಿತ್ ಷಾ ಅವರ ಫೋಟೋ ಇರದೆ ಇನ್ಯಾರ ಫೋಟೋ ಹಾಕಬೇಕಿತ್ತು?
  • ಅವರ ತಾತ, ಅಜ್ಜಿ, ಅಪ್ಪ ಅವರದ್ದೆಲ್ಲ ಈ ಹಿಂದೆ ಭಾವಚಿತ್ರ ಹಾಕಿರಲಿಲ್ವೇ

ಮೈಸೂರು: 

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದೇಶದಲ್ಲಿರುವುದಕ್ಕೆ ನಾಲಾಯಕ್. ಅವರಿಗೆ ದೇಶದ ಸಂಸ್ಕೃತಿ, ಇತಿಹಾಸ ಯಾವುದೂ ಗೊತ್ತಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹರಿಹಾಯ್ದರು. 

ಪೊಲೀಸ್ ಠಾಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಫೋಟೋ ಬಗ್ಗೆ ರಾಹುಲ್ ಅಪಸ್ವರ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, 15 ದಿನ ಭಾರತದಲ್ಲಿ ಇದ್ದರೆ, ಇನ್ನು 15 ದಿನ ವಿದೇಶದಲ್ಲಿರುವ ಅವರಿಗೆ ಭಾರತದ ಕಾನೂನು ಗೊತ್ತಿಲ್ಲ. ಅಮಿತ್ ಷಾ ಅವರ ಫೋಟೋ ಇರದೆ ಇನ್ಯಾರ ಫೋಟೋ ಹಾಕಬೇಕಿತ್ತು? ಅವರ ತಾತ, ಅಜ್ಜಿ, ಅಪ್ಪ ಅವರದ್ದೆಲ್ಲ ಈ ಹಿಂದೆ ಭಾವಚಿತ್ರ ಹಾಕಿರಲಿಲ್ವೇ ಎಂದು ಪ್ರಶ್ನಿಸಿದರು. 

ಕಾಂಗ್ರೆಸ್ ಮಾಡಿದ ಪಾಪವನ್ನು ತೊಳೆದ ಬಿಜೆಪಿ 

 ದೇಶದಲ್ಲಿ ನಕ್ಸಲಿಸಂ ಹೊಸಕಿ ಹಾಕಿದರವರು ಅಮಿತ್ ಷಾ. ಅವರ ಬಗ್ಗೆ ಟೀಕೆ ಮಾಡುವ ಶಕ್ತಿ ರಾಹುಲ್‌ಗಿಲ್ಲ. 70 ವರ್ಷದಲ್ಲಿ ಕಾಂಗ್ರೆಸ್ ಮಾಡಿರುವ ಪಾಪವನ್ನು 12 ವರ್ಷದಲ್ಲಿ ಬಿಜೆಪಿ ಸರ್ಕಾರ ತೊಳೆದಿದೆ. ಇದಕ್ಕಾದ್ರೂ ಕಾಂಗ್ರೆಸ್‌ಗೆ ಕೃತಜ್ಞತೆ ಇರಬೇಕಿತ್ತು. ಯಾರನ್ನೋ ಹಿಡಿದುಕೊಂಡು ಏನೋ ಆಗಿಬಿಡುತ್ತೇನೆಂದು ರಾಹುಲ್ ಗಾಂಧಿ ಹೊರಟರೆ ಅದರಿಂದ ಏನೂ ಪ್ರಯೋಜನ ಆಗಲ್ಲ ಎಂದು ಕುಟುಕಿದರು.

23 ವರ್ಷದ ಹೋರಾಟಕ್ಕೆ ಜಯ

ಕರ್ನಾಟಕ ನಿರಂತರ ಹೋರಾಟದ ಮೂಲಕ ಹಕ್ಕು ದಕ್ಕಿಸಿಕೊಂಡಿದೆ. ಇದರಿಂದ ಕರ್ನಾಟಕಕ್ಕೆ ಆರ್ಥಿಕವಾಗಿಯೂ ಹೆಚ್ಚು ಅನುಕೂಲವಾಗಲಿದೆ. ಜತೆಗೆ, ರೈಲ್ವೆ ಖಾತೆ ಸಚಿವವಾಗಿ ಈ ಕೆಲಸ ನನಗೆ ತೃಪ್ತಿ ಕೊಟ್ಟಿದೆ. ಇದರಿಂದ ಕನ್ನಡಿಗರಿಗೆ ಹೆಚ್ಚು ಕೆಲಸವೂ ಸಿಗಲಿದೆ ಎಂದು ಹೇಳಿದರು.

ಸಿಎಂ ಕಾಲೆಳೆಯುವವರು ಕಾಂಗ್ರೆಸ್‌ನಲ್ಲೇ ಇದ್ದಾರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ಇಂದ್ರಚಂದ್ರಲೋಕ ಸೃಷ್ಟಿ ಮಾಡುವ ಮಾತನಾಡಿದ್ದಾರೆ. ಇನ್ನೂ ಎರಡು ತಿಂಗಳು ಕಾಯೋಣ. ಯಾವ ಲೋಕ ಸೃಷ್ಟಿಯಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತೆ ಎಂದ ಸೋಮಣ್ಣ, ನಾವೇನು ಅವರ ಕಾಲೆಳೆಯುವುದಿಲ್ಲ. ಅದಕ್ಕಾಗಿ ಅವರ ಪಕ್ಷದಲ್ಲೇ ಇದ್ದಾರೆ. 
ಬುದ್ಧಿವಂತರು ಕೆಲಸ ಮಾಡುವರಿಗೆ ಕಾಂಗ್ರೆಸ್‌ನಲ್ಲಿ ಜಾಗ ಇರಲ್ಲ. ಸಿದ್ದರಾಮಯ್ಯ ಅವರನ್ನು 15 ನಿಮಿಷದಲ್ಲಿ ಕಿತ್ತು ಹಾಕಿದ್ದಾರೆ. ಇದು ಕಾಂಗ್ರೆಸ್ ಮನಸ್ಥಿತಿ. ಸಿಎಂ ಒಳ್ಳೆಯ ಕೆಲಸ ಮಾಡಿದರೆ ಮೆಚ್ಚುತ್ತೇವೆ. ತಪ್ಪು ದಾರಿ ಹಿಡಿದರೆ ಟೀಕಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.