ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪ್ರೊ.ಕೆ.ಸಿದ್ದಪ್ಪ, ಕೆ.ಹರೀಶ್‌ಗೌಡ, ಪ್ರೊ.ಎ.ಪಿ.ಜ್ಞಾನ ಪ್ರಕಾಶ್, ಪ್ರೊ.ಎಸ್.ಕೆ.ನವೀನ್‌ಕುಮಾರ್, ಪ್ರೊ.ಸಿ.ಎಸ್.ಆನಂದ್‌ಕುಮಾರ್, ಪ್ರೊ.ಎಸ್.ನಿರಂಜನ್ ರಾಜ್ ಇತರರಿದ್ದರು. 
ಮೈಸೂರು

ಉದಾತ್ತ ಗುಣದಿಂದಲೇ ಎತ್ತರಕ್ಕೇರಿದ್ದ ರಾಧಾಕೃಷ್ಣನ್ :ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ರಾಧಾಕೃಷ್ಣನ್ ಅವರನ್ನು ಕೇವಲ ಭಾರತ ಮಾತ್ರವಲ್ಲದೆ ವಿಶ್ವದ ಅನೇಕ ರಾಷ್ಟಗಳು ಉನ್ನತವಾದ ಗೌರವ, ಅತ್ಯನ್ನತ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿವೆ
  • ಎಷ್ಟೇ ಲಕ್ಷ ರೂ.ಸಂಪಾದನೆ ಮಾಡುತ್ತಿದ್ದರೂ ಒಂದು ಪುಸ್ತಕ ಖರೀದಿಸುವುದನ್ನು ಮರೆಯುತ್ತಿದ್ದೇವೆ
ಮೈಸೂರು:ತಮ್ಮ ಉದಾತ್ತ ಗುಣದಿಂದಲೇ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಎತ್ತರದ ಸ್ಥಾನಕ್ಕೆ ಏರಿದ್ದರು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಬಣ್ಣಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಉದಾತ್ತ ಪ್ರಜ್ಞೆ ಹೊಂದಿರುವವರು ಹೆಚ್ಚು ಸಾಧನೆ ಮಾಡುತ್ತಾರೆ. ಅದಕ್ಕೆ ಜ್ವಲಂತ ಸಾಕ್ಷಿ ಡಾ.ಸರ್ವಪಲ್ಲಿ ರಾಧಕೃಷ್ಣನ್. ಅಂತಹ ಉದಾತ್ತ ಪ್ರಜ್ಞೆಯನ್ನು ಮಕ್ಕಳಿಗೆ ಇಂದಿನ ಶಿಕ್ಷಕರು, ಪಾಲಕರು ಹೇಳಿಕೊಡಬೇಕು ಎಂದು ಹೇಳಿದರು.
ಯಾರು ಕಷ್ಟದಲ್ಲಿರುತ್ತಾರೋ ಅವರಿಗೆ ಸಹಾಯ ಮಾಡುವುದನ್ನು ಚಿಕ್ಕ ವಯಸ್ಸಿನಿಂದಲೇ ರೂಢಿಸಿದರೆ ಸಮಾಜದಲ್ಲಿ ಗೌರವ, ಮನಶಾಂತಿ ದೊರೆಯುತ್ತದೆ. ಇದರಿಂದಲೇ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಕೇವಲ ಭಾರತ ಮಾತ್ರವಲ್ಲದೆ ವಿಶ್ವದ ಅನೇಕ ರಾಷ್ಟಗಳು ಉನ್ನತವಾದ ಗೌರವ, ಅತ್ಯನ್ನತ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿವೆ ಎಂದರು.
ಪುಸ್ತಕದ ಮೇಲೆ ಅಪಾರವಾದ ವ್ಯಾಮೋಹ ಇದ್ದ ರಾಧಾಕೃಷ್ಣನ್ ಅವರಿಗೆ ಕಡಿಮೆ ಸಂಬಳ ಬರುತ್ತಿದ್ದರೂ ಪುಸ್ತಕಗಳನ್ನು ಕೊಂಡು ಓದುತ್ತಿದ್ದರು. ಆದರೆ ನಾವು ಇಂದು ಎಷ್ಟೇ ಲಕ್ಷ ರೂ.ಸಂಪಾದನೆ ಮಾಡುತ್ತಿದ್ದರೂ ಒಂದು ಪುಸ್ತಕ ಖರೀದಿಸುವುದನ್ನು ಮರೆಯುತ್ತಿದ್ದೇವೆ. ಕೇವಲ ಎಐ, ಮೊಬೈಲ್ ಮೇಲೆ ಅವಲಂಬಿತರಾಗುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಸಕ ಕೆ.ಹರೀಶ್‌ಗೌಡ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಪಿ.ಜ್ಞಾನ ಪ್ರಕಾಶ್, ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಸ್.ಆನಂದ್‌ಕುಮಾರ್, ಹಣಕಾಸು ಅಧಿಕಾರಿ ಪ್ರೊ.ಎಸ್.ನಿರಂಜನ್ ರಾಜ್, ಡೀನ್ ಡಾ.ಎನ್.ಆನಂದಗೌಡ, ಶೈಕ್ಷಣಿಕ ವಿಭಾಗದ ಡೀನ್ ಪ್ರೊ.ಎಂ.ರಾಮನಾಥಂ ನಾಯುಡು, ಡಾ.ಎಚ್.ಬೀರಪ್ಪ ಇತರರಿದ್ದರು.