- ಪ್ರವಾಸಿ ತಾಣಗಳಲ್ಲಿ ಅಳವಡಿಸಿರುವ ಕ್ಯೂಆರ್ ಕೋಡ್ ಮಾಹಿತಿ ಫಲಕವು ಅನುಷ್ಠಾನಗೊಂಡಾಗ ಎಷ್ಟು ಮಾಹಿತಿ ಇತ್ತೋ ಅಷ್ಟೇ ಮಾಹಿತಿಯನ್ನು ಯಾವಾಗಲೂ ಹೊಂದಿರುವುದಿಲ್ಲ
- ಐತಿಹಾಸಿಕ ಕಟ್ಟಡಗಳು, ದೇವಾಲಯಗಳು, ಉದ್ಯಾನವನ, ಇತರ ಪ್ರೇಕ್ಷಣೀಯ ಸ್ಥಳಗಳ ಬಳಿ ಮಾಹಿತಿ ಫಲಕದೊಂದಿಗೆ ಕ್ಯೂಆರ್ ಕೋಡ್ ಮುದ್ರಿತ ಫಲಕ ಅಳವಡಿಸಲಾಗಿದೆ
- ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡಗಳು ಹಾಗೂ ಪ್ರವಾಸಿ ತಾಣ ಸೇರಿದಂತೆ ಪ್ರಮುಖ 39 ತಾಣವನ್ನು ಇಲಾಖೆ ಆಯ್ಕೆ ಮಾಡಿಕೊಂಡು, ಆ ಸ್ಥಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಆಯಾ ಸ್ಥಳ ಹಾಗೂ ಕಟ್ಟಡದ ಬಗ್ಗೆ ಮಾಹಿತಿ ಒದಗಿಸುತ್ತಿದೆ
ಮೈಸೂರು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ಪ್ರವಾಸೋದ್ಯಮ ಇಲಾಖೆ ಇದೀಗ ಜಿಲ್ಲೆಯ ಪ್ರಮುಖವಾದ ಪ್ರವಾಸಿ ತಾಣದಲ್ಲಿ ಮಾಹಿತಿ ಫಲಕಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಿ, ಮಾಹಿತಿ ಒದಗಿಸುವ ಉಪಕ್ರಮ ಶುರುಮಾಡಿದೆ.
ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರವಾಸಿಗರಿಗೆ ನಗರದ ಪ್ರಮುಖ ಪ್ರವಾಸಿ ತಾಣ ಹಾಗೂ ಐತಿಹಾಸಿಕ, ಪಾರಂಪರಿಕ ಕಟ್ಟಡಗಳ ಬಗ್ಗೆ ನೈಜ ಹಾಗೂ ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯೂ ಮಾಹಿತಿ ಫಲಕಗಳಿಗೆ ಕ್ಯೂಆರ್ ಕೋಡ್ ಅಳವಡಿಸಿದೆ.
ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡಗಳು ಹಾಗೂ ಪ್ರವಾಸಿ ತಾಣ ಸೇರಿದಂತೆ ಪ್ರಮುಖ 39 ತಾಣವನ್ನು ಇಲಾಖೆ ಆಯ್ಕೆ ಮಾಡಿಕೊಂಡು, ಆ ಸ್ಥಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಆಯಾ ಸ್ಥಳ ಹಾಗೂ ಕಟ್ಟಡದ ಬಗ್ಗೆ ಮಾಹಿತಿ ಒದಗಿಸುತ್ತಿದೆ.
ಮೈಸೂರಿನ ಹೃದಯ ಭಾಗದಲ್ಲಿ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಇದೆ. ಸ್ವಲ್ಪ ದೂರ ಕ್ರಮಿಸಿದರೇ ಜಗತ್ಪ್ರಸಿದ್ಧ ಮೃಗಾಲಯವೂ ಇದೆ. ಇಲ್ಲಿ ಬಹಳ ಹಿಂದಿನಿಂದಲೂ ಸ್ಥಳದ ಬಗ್ಗೆ ಕಿರುಮಾಹಿತಿಯನ್ನು ಒಳಗೊಂಡ ಫಲಕಗಳನ್ನು ಅಳವಡಿಸಲಾಗಿದೆ. ಆದರೆ ಈಗ ಬರುವ ಪ್ರವಾಸಿಗರು ಗುಂಪು-ಗುಂಪಾಗಿ ಇದ್ದ ಸಂದರ್ಭದಲ್ಲಿ ಮಾಹಿತಿಯನ್ನು ಓದಿ ತಿಳಿದುಕೊಳ್ಳುವಷ್ಟು ವ್ಯವಧಾನ ಇರುವುದಿಲ್ಲ.
ಅವರಿಗೆ ಅರಮನೆ ನೋಡಬೇಕು ಎನ್ನುವ ಧಾವಂತ ಇರುತ್ತದೆ. ಹೀಗಾಗಿ ಅಂತಹ ಮಾಹಿತಿ ಫಲಕದಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಎಲ್ಲವನ್ನೂ ಫೋಟೋ ತೆಗೆಯುವ ರೀತಿಯಲ್ಲೇ ಇದನ್ನು ಸ್ಕ್ಯಾನ್ ಮಾಡಿದರೇ ಸಾಕು ಪೂರ್ಣ ಮಾಹಿತಿ ದೊರೆಯುತ್ತದೆ. ಜತೆಗೆ ನಿಗದಿತ ಸ್ಥಳದ ಇನ್ನು ಹೆಚ್ಚಿನ ಮಾಹಿತಿಗಳು, ಪತ್ರಿಕೆಯಲ್ಲಿ ಬಂದಿರುವ ವರದಿಗಳು ಲಿಂಕ್‌ನಲ್ಲಿ ಸಿಗುತ್ತವೆ. ಹೀಗಾಗಿ ಪ್ರವಾಸಿಗರು ಗೂಗಲ್ ಜಾಲಾಡುವ ಪ್ರಮಯೇವೇ ಬರುವುದಿಲ್ಲ.
ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಲಭ್ಯ
ಐತಿಹಾಸಿಕ ಕಟ್ಟಡಗಳು, ದೇವಾಲಯಗಳು, ಉದ್ಯಾನವನ, ಇತರ ಪ್ರೇಕ್ಷಣೀಯ ಸ್ಥಳಗಳ ಬಳಿ ಮಾಹಿತಿ ಫಲಕದೊಂದಿಗೆ ಕ್ಯೂಆರ್ ಕೋಡ್ ಮುದ್ರಿತ ಫಲಕ ಅಳವಡಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಆಯಾ ಸ್ಥಳದ ಸಂಕ್ಷಿಪ್ತ ಮಾಹಿತಿಯನ್ನು ಫಲಕದಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡುವಂತೆ ಸೂಚನೆ ನೀಡಲಾಗಿದೆ. ಪ್ರವಾಸಿಗರು ತಮ್ಮ ಮೊಬೈಲ್ ಫೋನಿನಲ್ಲಿ ಈ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿದರೆ ಆ ಸ್ಥಳದ ಇತಿಹಾಸ, ವಾಸ್ತುಶಿಲ್ಪ, ಸ್ಥಳ ಮಹತ್ವ ಇತರ ವಿಶೇಷ ಮಾಹಿತಿ ತಿಳಿಯುತ್ತದೆ.
ಕಾಲಕಾಲಕ್ಕೆ ಅಪ್‌ಡೇಟ್
ಪ್ರವಾಸಿ ತಾಣಗಳಲ್ಲಿ ಅಳವಡಿಸಿರುವ ಕ್ಯೂಆರ್ ಕೋಡ್ ಮಾಹಿತಿ ಫಲಕವು ಅನುಷ್ಠಾನಗೊಂಡಾಗ ಎಷ್ಟು ಮಾಹಿತಿ ಇತ್ತೋ ಅಷ್ಟೇ ಮಾಹಿತಿಯನ್ನು ಯಾವಾಗಲೂ ಹೊಂದಿರುವುದಿಲ್ಲ. ಬದಲಾಗಿ ಕಾಲಕಾಲಕ್ಕೆ ಅಪ್‌ಡೇಟ್ ಮಾಡಲಾಗುತ್ತದೆ. ಪ್ರವಾಸಿಗರು ಈ ಸ್ಥಳಕ್ಕೆ ಬಂದಾಗ ಮಾಹಿತಿಯನ್ನು ಪಡೆಯಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಾರೆ. ಇದರೊಂದಿಗೆ ಕೋಡ್ ಅನ್ನು ಫೋಟೋ ತಗೆದುಕೊಂಡು ಮೊಬೈಲ್‌ನಲ್ಲಿ ಉಳಿಸಿಕೊಂಡರೆ ಬಿಡುವಾಗಿದ್ದ ಸಮಯದಲ್ಲಿ ಪ್ರವಾಸಿ ತಾಣದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಅಲ್ಲದೆ ಅಪ್‌ಡೇಟ್ ಮಾಹಿತಿಯೂ ದೊರೆಯುತ್ತದೆ. ಪ್ರವಾಸಿಗರು ಬಂದು ನೋಡಿಕೊಂಡು ಹೋದ ಮೇಲೆ ಏನಾದರೂ ಹೊಸತನವನ್ನು ಅಳವಡಿಸಿಕೊಂಡಿದ್ದಲ್ಲಿ, ಸ್ಥಳದಲ್ಲಿ ಹೊಸ ಕಾರ್ಯಕ್ರಮಗಳು ಶುರುವಾಗಿದ್ದಲ್ಲಿ, ಸ್ಥಳದ ಬಗ್ಗೆ ಮಾಧ್ಯಮಗಳಲ್ಲಿ ನುಡಿಚಿತ್ರಗಳು ಪ್ರಸಾರವಾಗಿದ್ದರೆ ಅವುಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಈ ಮಾಹಿತಿಯನ್ನು ಕನ್ನಡ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ನೀಡಿರುವುದರಿಂದ ದೇಶದ ಎಲ್ಲ ರಾಜ್ಯಗಳ ಪ್ರವಾಸಿಗರಿಗೂ ಅನುಕೂಲವಾಗುತ್ತದೆ.
ಕ್ಯೂಆರ್ ಕೋಡ್ ತಾಣಗಳು
ಮೈಸೂರು ಅಂಬಾವಿಲಾಸ ಅರಮನೆ, ಚಾಮುಂಡಿ ಬೆಟ್ಟ, ಚಾಮರಾಜೇಂದ್ರ ಮೃಗಾಲಯ, ಗಣಪತಿ ಸಚ್ಚಿದಾನಂದ ಆಶ್ರಮದ ಶುಕವನ, ರೈಲ್ವೆ ಮ್ಯೂಸಿಯಂ, ಚಾಮುಂಡಿ ಬೆಟ್ಟದ ಪಾದ, ಆರ್.ಕೆ.ನಾರಾಯಣ್ ನಿವಾಸ, ಚಿಕ್ಕ ಗಡಿಯಾರ, ಜಗನ್ಮೋಹನ ಅರಮನೆ, ಓರಿಯೆಂಟಲ್ ರಿಸರ್ಚ್ ಸೆಂಟರ್, ಜಾನಪದ ವಸ್ತು ಸಂಗ್ರಹಾಲಯ, ಕೆಎಸ್‌ಐಸಿ, ಸೇಂಟ್ ಫಿಲೋಮಿನಾ ಚರ್ಚ್, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಪಿರಿಯಾಪಟ್ಟಣದ ಬೆಟ್ಟದಪುರ ಬಳಿ ಇರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಟಿಬೆಟನ್ನರ ಗೋಲ್ಡನ್ ಟೆಂಪಲ್, ಚುಂಚನಕಟ್ಟೆ, ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ದೇವಾಲಯ, ವರುಣ ಕೆರೆ, ತಲಕಾಡು, ತಿ.ನರಸೀಪುರದ ಗುಂಜಾನರಸಿಂಹಸ್ವಾಮಿ ದೇವಾಲಯ, ಕಬಿನಿ ಹಿನ್ನೀರು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಚಿಕ್ಕದೇವಮ್ಮ ದೇವಾಲಯ, ಬದನವಾಳು ಖಾದಿ ಗ್ರಾಮ, ತಗಡೂರು ಲಕ್ಷ್ಮೀನಾರಾಯಣ ದೇವಾಲಯ, ಗರ್ಗೇಶ್ವರಿ ದೇವಾಲಯ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಾಲಯ, ಬೇಲದಕುಪ್ಪೆ ಮಹದೇಶ್ವರ ದೇವಾಲಯ, ಭೀಮನಕೊಲ್ಲಿ ಮಹದೇಶ್ವರ ದೇವಾಲಯ, ಸುತ್ತೂರು ಸೇರಿದಂತೆ 39 ಜಾಗದಲ್ಲಿ ಕ್ಯೂಆರ್ ಕೋಡ್ ಮಾಹಿತಿ ಲಭ್ಯವಿದೆ.
ಮೈಸೂರಿಗೆ ದೇಶದ ಅನೇಕ ಕಡೆಗಳಿಂದ ಪ್ರವಾಸಿಗರು ಬರುತ್ತಾರೆ. ವಿದೇಶದಿಂದಲೂ ನೂರಾರು ಜನರು ಆಗಮಿಸುತ್ತಾರೆ. ಇವರನ್ನು ನಾಜೂಕಿನ ಮಾತುಗಳ ಮೂಲಕ ಮೋಸಗೊಳಿಸಿ ಹಣ ಮಾಡುವವರು ಹಲವು ಜನ ಇರುತ್ತಾರೆ. ಇಂತಹವರು ಪ್ರವಾಸಿಗರಿಗೆ ತಪ್ಪು ಮಾಹಿತಿ ನೀಡುವುದು, ತಮಗೆ ಲಾಭ ಬರುವ ಕಡೆಗೆ ಕರೆದುಕೊಂಡು ಹೋಗಿ, ಆ ಸ್ಥಳವನ್ನೇ ಪ್ರಮುಖ ಸ್ಥಳ ಎಂದು ಬಿಂಬಿಸುವ ಕೆಲಸ ಮಾಡುತ್ತಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರವಾಸಿ ತಾಣ, ಪಾರಂಪರಿಕ ಕಟ್ಟಡ ಹಾಗೂ ದೇವಾಲಯಗಳ ಮುಂಭಾಗ ಕ್ಯೂಆರ್ ಕೋಡ್ ವ್ಯವಸ್ಥೆಯೊಂದಿಗೆ ಸಮಗ್ರ ಮಾಹಿತಿ ಒದಗಿಸುವ ಹೊಸ ವ್ಯವಸ್ಥೆ ಜಾರಿ ಮಾಡಲಾಗಿದೆ.