ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಟಾಸ್ಕ್ ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಟಿ.ಎಚ್.ರವಿಕುಮಾರ್, ಇಒ ರವಿಚಂದ್ರ ಇತರರು ಇದ್ದರು. 
ಮೈಸೂರು

ತಾಲೂಕಿನಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ

ಪ್ರಮುಖ ಮುಖ್ಯಾಂಶಗಳು

  • Pulse polio vaccination
ಎಚ್.ಡಿ.ಕೋಟೆ: ಭಾರತ ಪೋಲಿಯೋಮುಕ್ತ ರಾಷ್ಟ್ರ ಎಂದು ೋಷಣೆಯಾಗಿದ್ದು, ನೆರೆಯ ದೇಶಗಳಲ್ಲಿ ಇನ್ನೂ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಸತತ 31ನೇ ವರ್ಷವೂ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತಸೌಧದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಜೂ.28, 29 ಮತ್ತು 30ರಂದು ಮೊದಲನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಜರುಗಲಿದೆ. ಎಚ್.ಡಿ.ಕೋಟೆ, ಹಂಪಾಪುರ, ಚಿಕ್ಕನಂದಿ, ಅಣ್ಣೂರು, ಕ್ಯಾತನಹಳ್ಳಿ, ಎನ್.ಬೆಳತ್ತೂರು, ಡಿ.ಬಿ.ಕುಪ್ಪೆ, ಮಾದಾಪುರ, ಹೆಬ್ಬಲಗುಪ್ಪೆ, ಎನ್.ಬೇಗೂರು ಹಾಗೂ ಅಂತರಸಂತೆ ಸಂಚಾರಿ ಗಿರಿಜನ ಆರೋಗ್ಯ ಘಟಕದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ಎಚ್.ರವಿಕುಮಾರ್ ಮಾತನಾಡಿ, 1,93,447 ಜನಸಂಖ್ಯೆಯ ವ್ಯಾಪ್ತಿಯಲ್ಲಿ ಬರುವ 58 ಉಪಕೇಂದ್ರಗಳ 269 ಗ್ರಾಮಗಳ 0-5 ವರ್ಷದೊಳಗಿನ 12,954 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.
130 ಬೂತ್‌ಗಳು ಹಾಗೂ 2 ಟ್ರಾನ್ಸಿಟ್ ಬೂತ್‌ಗಳಲ್ಲಿ (ಎಚ್.ಡಿ.ಕೋಟೆ ಬಸ್ ನಿಲ್ದಾಣ, ಮತ್ತು ಹ್ಯಾಂಡ್ ಪೋಸ್ಟ್ ವೃತ್ತ) ವ್ಯವಸ್ಥೆ ಮಾಡಲಾಗಿದೆ. ಲಸಿಕಾ ಕಾರ್ಯಕ್ಕೆ 520 ಸಿಬ್ಬಂದಿ/ಸ್ವಯಂ ಸೇವಕರನ್ನು ನೇಮಿಸಿಕೊಂಡಿದ್ದು, 26 ಮೇಲ್ವಿಚಾರಕರು (ವೈದ್ಯಾಧಿಕಾರಿಗಳು ಒಳಗೊಂಡಂತೆ) ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಈ ವರ್ಷ ಆದಿವಾಸಿಗಳು, ವಲಸೆ ಮತ್ತು ಹೊರಗಿನಿಂದ ಬಂದಿರುವ ಮಕ್ಕಳನ್ನು ಹುಡುಕಿ ಲಸಿಕೆಯನ್ನು ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸದರಿ ಮಕ್ಕಳಿಗೆ ಅಗತ್ಯವಿರುವ ಲಸಿಕೆಯು ಸರ್ಕಾರದಿಂದ ಸರಬರಾಜಾಗಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಲೂಕು ಮತ್ತು ಪ್ರಾಥಮಿಕ ಹಂತದಲ್ಲಿ ಸಜ್ಜಾಗಿದೆ ಎಂದು ತಿಳಿಸಿದರು.
ಇಒ ರವಿಚಂದ್ರ, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮೇಹೇಶ್, ತೋಟಗಾರಿಕೆ ಅಧಿಕಾರಿ ನೇತ್ರಾವತಿ, ದೀಪಾ, ಡಾ.ಪೂರ್ಣಿಮಾ, ರಮೇಶ್, ರೋಟರಿ, ಲಯನ್ಸ್ ಸಂಸ್ಥೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸರಗೂರು ಇಲ್ಲಿನ ಅಧಿಕಾರಿ ವರ್ಗ ಇದ್ದರು.