ಕೆ.ಆರ್.ನಗರದ ಶ್ರೀರಾಮ ಬಡಾವಣೆಯಲ್ಲಿ ಶ್ರೀ ಮಾರಿಕಾಂಬ ದೇವಾಲಯದ 46ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಶಾಸಕ ಡಿ.ರವಿಶಂಕರ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ಶಾಂತಮ್ಮ ವಿಶ್ವನಾಥ್ ಪ್ರಸಾದ ವಿತರಣೆ ಮಾಡಿದರು. 
ಮೈಸೂರು

ಶ್ರೀಮಾರಿಕಾಂಬ ದೇಗುಲದ ಪೂಜಾ ಮಹೋತ್ಸವ

ಕೆ.ಆರ್.ನಗರ: ಪಟ್ಟಣದ ವಿನಾಯಕ ಬಡಾವಣೆಯ ಗ್ರಾಮದೇವತೆ ಶ್ರೀ ಮಾರಿಕಾಂಬ ದೇವಾಲಯದ 46ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.
ಸೋಮವಾರ ಸಂಜೆ ದೇವಾಲಯದಿಂದ ಮಂಗಳವಾದ್ಯಗಳ ಮೂಲಕ ಉತ್ಸವ ಮೂರ್ತಿಯನ್ನು ಪಟ್ಟಣದ ಹೊರವಲಯದ ಹಳೆ ಎಡತೊರೆಯ ಕಾವೇರಿ ನದಿಗೆ ಕೊಂಡೊಯ್ದು ಗಂಗಾಪೂಜೆ ನೆರವೇರಿಸಲಾಯಿತು. ಒಡವೆ, ವಸ್ತ್ರ, ಹೂವುಗಳಿಂದ ಅಲಂಕರಿಸಿ ಪೂಜೆ ಪುರಸ್ಕಾರಗಳನ್ನು ನೆರವೇರಿಸಿ ಮೂರು ಕಳಶಗಳಲ್ಲಿ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಆವಾಹನೆ, ನಂತರ ಕನ್ನಿಕೆಯರ ವಲಯ, ಗುಡ್ಡರ ಕುಣಿತದೊಂದಿಗೆ ದೇವರ ಉತ್ಸವ ಮೂರ್ತಿಯನ್ನು ತಮಟೆ, ಛತ್ರಿ, ಚಾಮರ ಮತ್ತು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು.
ನಂತರ ಮೈಸೂರು-ಹಾಸನ ರಸ್ತೆಯ ಮಾರ್ಗವಾಗಿ ಉತ್ಸವ ಮೂರ್ತಿಯನ್ನು ವಿನಾಯಕ ಬಡಾವಣೆಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಆಲಯ ಪ್ರವೇಶ ಮಾಡಲಾಯಿತು. ಮಂಗಳವಾರ ಬೆಳಗ್ಗೆ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಸ್ವರೂಪಿಣಿಯಾಗಿರುವಂತಹ ಮಾರಿಕಾಂಬ ದೇವಿ ಹಾಗೂ ನವಗ್ರಹಗಳಿಗೆ ಪಂಚಾಮೃತ ಪೂರ್ವಕ ಕಳಸದ ನೀರಿನಿಂದ ಮಹಾಭಿಷೇಕ ನಂತರ 12 ಗಂಟೆಗೆ ಮಹಾ ಮಂಗಳಾರತಿ ಮಾಡಲಾಯಿತು.
ಬಡಾವಣೆಯ ನಿವಾಸಿಗರು ತಾಯಿಗೆೆ ಪೂಜೆ ಸಲ್ಲಿಸುವ ಮೂಲಕ ದರ್ಶನ ಪಡೆದರು. ಭಕ್ತಾದಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಮಜ್ಜಿಗೆ, ಪಾನಕ ಮತ್ತು ಪ್ರಸಾದ ವಿನಿಯೋಗ ಮಾಡಲಾಯಿತು.
ಶಾಸಕ ಡಿ.ರವಿಶಂಕರ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಪತ್ನಿ ಶಾಂತಮ್ಮ, ಡಾ.ಕೆ.ಆರ್.ಗೌತಮ್ ಇತರರು ದೇವರ ದರ್ಶನ ಪಡೆದರು. ಶ್ರೀ ಮಾರಿಕಾಂಬ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೋಳಿಪ್ರಕಾಶ್, ಗೌರವಾಧ್ಯಕ್ಷ ಎನ್.ಗೌಡಪ್ಪ, ಗೌರವ ಸಲಹೆಗಾರ ನಾಗೇಂದ್ರರಾವ್, ಉಪಾಧ್ಯಕ್ಷ ತಿಮ್ಮಶೆಟ್ಟಿ, ಕಾರ್ಯದರ್ಶಿ ತುಕ್ಕೋಜೀರಾವ್, ಖಜಾಂಚಿ ಮಲ್ಲಿಕಾರ್ಜುನ ನಾಯಕ್, ನಿರ್ದೇಶಕರಾದ ಶಿವಕುಮಾರ್, ವೆಂಕಟೇಶ್, ರವಿ, ನೇತ್ರಾವತಿ ನಾಗೇಗೌಡ, ಕೃಷ್ಣೇಗೌಡ, ಸುರೇಶ್‌ಕುಮಾರ್, ಶಾಂತ ಶಾವಂದಪ್ಪ, ಮುಖಂಡರಾದ ಡಾ.ಜೆ.ದೇವು, ದೆಗ್ಗನಹಳ್ಳಿಚಂದ್ರು, ಪ್ರದೀಪ್, ಸುನೀಲ್‌ದೇವು, ಶಾಮಿಯಾನ ಕಿರಣ್ ಇದ್ದರು.