ಸರಗೂರು ತಾಲೂಕಿನ ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಡೆಂಘೆ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ ಟಿ ರವಿಕುಮಾರ್ ಮಾತನಾಡಿದರು. ಡಾ ಶರತ್ ಇತರರು ಇದ್ದರು.
- ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಅಭಿಮತ
ಸರಗೂರು: ಡೆಂಘೆ ರೋಗ ಹರಡುವ ಸೊಳ್ಳೆ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ತಾಲೂಕಿನ ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಡೆಂಘೆ ವಿರೋಧಿ ಮಾಸಾಚರಣೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಡೆಂಘೆ ಜ್ವರವು ಸೊಳ್ಳೆಯಿಂದ ಹರಡಲಿದ್ದು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ಸಾರ್ವಜನಿಕರು ವಾರಕ್ಕೊಮ್ಮೆ ನೀರಿನ ಟ್ಯಾಂಕ್, ಡ್ರಮ್, ಕೂಲರ್, ತೆಂಗಿನ ಚಿಪ್ಪು, ಹಳೆಯ ಟೈರ್ ಸೇರಿದಂತೆ ನೀರು ಸಂಗ್ರಹವಾಗುವ ಎಲ್ಲ ಪಾತ್ರೆಗಳನ್ನು ಸ್ವಚ್ಛಗೊಳಿಸಬೇಕು. ಜ್ವರ, ತೀವ್ರ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮೈಕೈ ನೋವು ಅಥವಾ ಚರ್ಮದ ಮೇಲೆ ದದ್ದು ಕಾಣಿಸಿಕೊಂಡರೆ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶರತ್ ಮಾತನಾಡಿ, ಡೆಂಘೆ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯ ಜತೆಗೆ ಸಾರ್ವಜನಿಕರ ಸಹಭಾಗಿತ್ವವೂ ಅತ್ಯಂತ ಮುಖ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಡೆಂಘೆ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ಹೇಳಿದರು.
ಆರೋಗ್ಯ ಸಿಬ್ಬಂದಿ ಸೋಮಶೇಖರ್, ಪುಷ್ಪಾ, ಮಾಚಿ ಮನು, ಬಿಂದು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.